ಕಾಲ ಬದಲಾಗಬಹುದು, ಶೈಲಿಯೂ ಬದಲಾಗಬಹುದು. ಆದರೆ, ಪ್ರೀತಿಯ ಭಾವನೆ ಮಾತ್ರ ಬದಲಾಗುವುದಿಲ್ಲ. ಅದು ನಿಷ್ಕಲ್ಮಶ, ನಿತ್ಯ ನಿರಂತರ. ಪ್ರೀತಿ ಕೈ ಕೊಟ್ಟಾಗ ಆಗುವ ನೋವು ಹೇಳತೀರದು.. ಇಂತಹ ಅಂಶದೊಂದಿಗೆ ತೆರೆಗೆ ಬಂದಿರುವ ಚಿತ್ರ “ಧ್ರುವತಾರೆ’.
ರೀಲ್ಸ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರತೀಕ್ ಹಾಗೂ ಮೌಲ್ಯ ಮೊದಲ ಬಾರಿಗೆ ಹಿರಿತೆರೆಯಲ್ಲಿ ಮಾಡಿದ ಪ್ರಯತ್ನವಿದು. ಚಿತ್ರದ ಬಗ್ಗೆ ಹೇಳುವುದಾದರೆ ಪ್ರೀತಿಸಿದಾಕೆ ಕೈ ಕೊಟ್ಟ ನಂತರ ದೇವದಾಸನಾಗಿ, ಕುಡಿತದ ಚಟಕ್ಕೆ ದಾಸನಾಗುವ ನಾಯಕ “ಪ್ರೇಮಿಗಳ ವಿರೋಧಿ ಸಂಘ’ದ ಅಧ್ಯಕ್ಷನಾಗುತ್ತಾನೆ. ಲವರ್ ಗಳನ್ನು ದ್ವೇಷಿಸಿಸುವ ಮಟ್ಟಕ್ಕೆ ನಾಯಕನ ಹೃದಯ ಚೂರಾಗಿರುತ್ತದೆ. ಇದು ನಾಯಕನ ಕಥೆಯಾದರೆ ನಾಯಕಿಯದ್ದು ಮತ್ತೂಂದು ಕಥೆ. ಆಕೆ ಕೂಡಾ ಮೊದಲ ಪ್ರೀತಿಯಿಂದ ವಂಚಿತಳಾದವಳೇ. ಇಂತಿಪ್ಪ ಇಬ್ಬರು ಒಂದಾದರೆ ಹೇಗಿರಬಹುದು, ಸಂಸಾರದ ಸಾಗರಕ್ಕೆ ಧುಮುಕಿದರೆ ಅದು ಸಲೀಸಾಗಿ ಸಾಗಬಹುದೇ.. ಇದೇ ಸಿನಿಮಾದ ಟ್ವಿಸ್ಟ್ ಮತ್ತು ಹೈಲೈಟ್.
“ಧ್ರುವತಾರೆ’ ಹೇಗೆ ಪ್ರೀತಿಯ ಅಂಶಗಳನ್ನು ಒಳಗೊಂಡ ಚಿತ್ರವೋ ಅದೇ ರೀತಿ ಇಲ್ಲಿ ಫ್ಯಾಮಿಲಿ ಡ್ರಾಮಾಕ್ಕೂ ಜಾಗವಿದೆ. ಒಂದು ರೊಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾ ನೋಡ ಬಯಸುವವರಿಗೆ “ಧ್ರುವತಾರೆ’ ಇಷ್ಟವಾಗಬಹುದು.
ಚಿತ್ರದ ಮೊದಲರ್ಧಕ್ಕೆ ಇನ್ನಷ್ಟು ವೇಗ ಬೇಕಿತ್ತು ಎನಿಸದೇ ಇರದು. ಇಲ್ಲಿ ಇನ್ನೊಂದಿಷ್ಟು ಶ್ರಮ, ಪೂರ್ವ ತಯಾರಿಯ ಅಗತ್ಯವಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಒಂದಷ್ಟು ಗಂಭೀರ ಅಂಶಗಳ ಮೂಲಕ ಸಿನಿಮಾವನ್ನು ಪ್ರೇಕ್ಷಕನಿಗೆ ಹತ್ತಿರವಾಗಿಸಲು ಪ್ರಯತ್ನಿಸಿದ್ದಾರೆ.
ಪ್ರತೀಕ್ ಹಾಗೂ ಮೌಲ್ಯ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಕಾರ್ತಿಕ್, ಪ್ರಭಾವತಿ, ರಮೇಶ್ ಭಟ್ ಚಿತ್ರದಲ್ಲಿ ನಟಿಸಿದ್ದಾರೆ.