“ಭರ್ಜರಿ’ ಚಿತ್ರದ ಮೂಲಕ ಹ್ಯಾಟ್ರಿಕ್ ಯಶಸ್ಸು ಕೊಟ್ಟ ಧ್ರುವ ಸರ್ಜಾ ಅವರ ಸಂಭಾವನೆ ಎಷ್ಟಿರಬಹುದು? ಹೀಗೊಂದು ಪ್ರಶ್ನೆ ಅನೇಕರಲ್ಲಿದೆ. ಅದಕ್ಕೆ ಕಾರಣ ಅವರ ಮೂರೂ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆದ್ದಿರೋದು. ಅದರಲ್ಲೂ “ಭರ್ಜರಿ’ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಹಾಗೂ ಕಲೆಕ್ಷನ್ ಧ್ರುವ ಅವರ ಮೈಲೇಜ್ ಹೆಚ್ಚಿಸಿರೋದಂತೂ ಸುಳ್ಳಲ್ಲ. ಈಗ ಸಂಭಾವನೆ ವಿಚಾರದಲ್ಲೂ ಧ್ರುವ ಮುಂದಿದ್ದಾರೆ, ಅವರ ಸಂಭಾವನೆ ಆರು ಕೋಟಿ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲೂ ಕೇಳಿಬರುತ್ತಿದೆ.
ಈ ಪ್ರಶ್ನೆಯನ್ನು ನೇರವಾಗಿ ಧ್ರುವ ಅವರಲ್ಲಿ ಕೇಳಿದರೆ, “ಹೌದು’ ಎಂಬ ಧಾಟಿಯಲ್ಲಿ ಉತ್ತರಿಸುತ್ತಾರೆ. ಧ್ರುವ ತಮ್ಮ ಸಂಭಾವನೆ ವಿಚಾರಲ್ಲಿ ಮಾತನಾಡಿರೋದನ್ನು ಅವರ ಮಾತಲ್ಲೇ ಹೇಳುವುದಾದರೆ, “ನನ್ನ “ಭರ್ಜರಿ’ ಚಿತ್ರ ಬಿಡುಗಡೆಯಾಗಿರಲಿಲ್ಲ. ಆಗಲೇ ಯುಟ್ಯೂಬ್‌ನಲ್ಲಿ ನಾನು 6 ಕೋಟಿ ಪೇಮೆಂಟ್ ತೆಗೆದುಕೊಳ್ಳುತ್ತಿದ್ದೇನೆಂಬ ಸುದ್ದಿ ನೋಡಿದೆ. ನಾನು ಅದನ್ನು ಪಾಸಿಟಿವ್ ಆಗಿಯೇ ತಗೊಂಡೆ.
ಆದರೆ, “ಭರ್ಜರಿ’ಗೆ ನಾನು ಅದರ ಅರ್ಧದಷ್ಟೂ ಸಂಭಾವನೆ ಪಡೆದಿಲ್ಲ ಎಂಬುದು ಒಂದು ಸತ್ಯವಾದರೆ, ಆ ಸುದ್ದಿ ಯಾಕೆ ನಿಜ ಮಾಡಬಾರದು ಎಂದು ನಾನು ಕಾಯುತ್ತಿದ್ದೆ ಅನ್ನೋದು ಎರಡನೇ ಸತ್ಯ. ಜೊತೆಗೆ ಆರು ಕೋಟಿ ಸಂಭಾವನೆ ಪಡೆಯುತ್ತಾರೆಂಬ ಸುದ್ದಿಯನ್ನೇ ನಾನು ಯಾಕೆ ಗುರಿಯಾಗಿಸಬಾರದು ಎಂಬ ಅಂಶ ಪಾಸಿಟಿವ್ ಆಗಿ ನನಗೆ ಸ್ಟೈಕ್ ಆಯ್ತು. ಯಾರೋ ಕರೆಕ್ಟ್ ಆಗಿಯೇ ಮಾಡಿದ್ದಾರೆ, ಟಾರ್ಗೇಟ್ ಕೂಡಾ ಚೆನ್ನಾಗಿದೆ ಅನಿಸಿತು.
ಹಾಗೆ ಪ್ರೇರಣೆಯಾದವ ನಾನು. ಈಗ ಒಂದು ಲಿಂಕ್ ಬಂದಿದೆ. “ಧ್ರುವ ಸಂಭಾವನೆ ಆರು ಕೋಟಿಗೆ ನಿಂತಿದೆ’ ಎಂದು. ಈಗ ನಾನು ಮತ್ತೆ ಕಾಯುತ್ತಿದ್ದೇನೆ, ಆರು ಕೋಟಿಗಿಂತ ಜಾಸ್ತಿಯ ಸಂಭಾವನೆಯ ಸುದ್ದಿ ಬರುತ್ತಾ ಎಂದು. ಆಗ ಅದನ್ನೂ ಪಾಸಿಟಿವ್ ಆಗಿ ತಗೊಂಡು, ಟ್ರೈ ಮಾಡಬಹುದಲ್ವಾ ….’ ಹೀಗೆ ಹೇಳುವ ಮೂಲಕ ತಮ್ಮ ಸಂಭಾವನೆ ಆರು ಕೋಟಿ ಹತ್ತಿರವಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ ಧ್ರುವ.
ಹಾಗಂತ ಸಂಭಾವನೆಯೇ ಮುಖ್ಯವಾಗೋದಿಲ್ಲ. ಕಥೆ, ತಂಡ ಹಾಗೂ ಬಜೆಟ್ ಕೂಡಾ ಮುಖ್ಯವಾಗುತ್ತದೆ ಎನ್ನಲು ಧ್ರುವ ಮರೆಯೋದಿಲ್ಲ. ಅಂದಹಾಗೆ, ಧ್ರುವ ವರ್ಷಕ್ಕೆ ಒಂದೂವರೆ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಒಂದೂವರೆನಾ, ಅದು ಹೇಗೆ ಸಾಧ್ಯ ಎಂದು ಹುಬ್ಬೇರಿಸಬೇಡಿ. ಒಂದು ಸಿನಿಮಾ ರಿಲೀಸ್ ಆಗಿ, ಮತ್ತೂಂದು ಸಿನಿಮಾ ಅರ್ಧ ಶೂಟಿಂಗ್‌ನಲ್ಲಾದರರೂ ತೊಡಗಿಸಿಕೊಳ್ಳಬೇಕೆಂಬ ನಿರ್ಧಾರಕ್ಕೆ ಧ್ರುವ ಬಂದಿದ್ದಾರೆ.