ಬೆಂಗಳೂರು: ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಅವರು ಕೋವಿಡ್ ಸೊಂಕಿನಿಂದ ಗುಣಮುಖರಾಗಿದ್ದಾರೆ. ಇತ್ತೀಚಿಗಷ್ಟೇ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಇವರ ಇತ್ತೀಚಿನ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಧ್ರುವ ಸರ್ಜಾ ‘ನಾನು ಮತ್ತು ಪತ್ನಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು ವರದಿ ನೆಗೆಟಿವ್ ಬಂದಿದೆ. ನಿಮ್ಮೆಲ್ಲರ ಹಾರೈಕೆ ಮತ್ತು ಬಹುಶಃ ನನ್ನ ಅಣ್ಣ ಚಿರುವಿನ ಆಶಿರ್ವಾದದಿಂದ ಗುಣಮುಖರಾಗಿದ್ದೇವೆ. ನನ್ನ ಚಿಕ್ಕಪ್ಪ ಮತ್ತು ಎಲ್ಲಾ ಸಂದರ್ಭದಲ್ಲೂ ನಮ್ಮೊಂದಿಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅದರಲ್ಲೂ ನಮಗೆ ಚಿಕಿತ್ಸೆ ನೀಡಿದ ಡಾ. ಸುರ್ಜಿತ್ ಪಾಲ್ ಸಿಂಗ್ ಮತ್ತು ವೈದ್ಯಕೀಯ ಸಹಾಯಕ ರಾಜ್ ಕುಮಾರ್ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಬಯಸುತ್ತೇನೆ ಎಂದಿದ್ದಾರೆ.
ಕಳೆದ ಜುಲೈ 15 ರಂದು ಧ್ರುವ ಮತ್ತು ಪತ್ನಿ ಪ್ರೇರಣಾ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ಧೃಢವಾಗಿತ್ತು. ಇದೀಗ ಸೊಂಕಿನ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ. ಧ್ರುವ ಪೊಗರು ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗಿದೆ.