“ಹೊಂಬಾಳೆ ಫಿಲಂಸ್’ ಬ್ಯಾನರ್ ಮೂಲಕ ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ “ಧೂಮಂ’ ಸಿನಿಮಾದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.
“ಧೂಮಂ’ ಸಿನಿಮಾದ ಮೊದಲ ಸನ್ನಿವೇಶಕ್ಕೆ ಮಂಜುನಾಥ್ ಕಿರಗಂದೂರು ಆರಂಭ ಫಲಕ ತೋರಿದರು. ಶೈಲಜಾ ವಿಜಯ್ ಕಿರಗಂದೂರು ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ “ಧೂಮಂ’ ಚಿತ್ರತಂಡದ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದರು. “ಹೊಂಬಾಳೆ ಫಿಲಂಸ್’ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಹನ್ನೆರಡನೇ ಸಿನಿಮಾ ಇದಾಗಿದ್ದು, “ಧೂಮಂ’ ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. “ಲೂಸಿಯಾ’ ಖ್ಯಾತಿಯ ಪವನ್ ಕುಮಾರ್ ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
ಮಲೆಯಾಳಂನ ಜನಪ್ರಿಯ ನಟ ಫಹಾದ್ ಫಾಸಿಲ್ ಹಾಗೂ ತಮಿಳಿನ “ಸೂರರೈ ಪೊಟ್ರಾ’ ಸಿನಿಮಾದ ಖ್ಯಾತಿಯ ಅಪರ್ಣ ಬಾಲಮುರಳಿ “ಧೂಮಂ’ ಸಿನಿಮಾದಲ್ಲಿ ನಾಯಕ – ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
“ಧೂಮಂ’ ಸಿನಿಮಾದ ಹಾಡುಗಳಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯಿದ್ದು, ಪ್ರೀತಾ ಜಯರಾಮನ್ ಛಾಯಾಗ್ರಹಣವಿದೆ. “ಕೆಜಿಎಫ್’ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು “ಧೂಮಂ’ ಸಿನಿಮಾದ ಮುಹೂರ್ತಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಸದ್ಯ “ಧೂಮಂ’ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ಇದೇ ನವೆಂಬರ್ ವೇಳೆಗೆ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.