ಚಂಡೀಗಢ: ಐಪಿಎಲ್ ಟೂರ್ನಿಯಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿರುವ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿನ ಗುಟ್ಟನ್ನು ಸುರೇಶ್ ರೈನಾ ಬಿಚ್ಚಿಟ್ಟಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಗುಣಗಾನ ಮಾಡಿರುವ ಸುರೇಶ್ ರೈನಾ, “ಮಹಿ ಐಪಿಎಲ್ ಟೂರ್ನಿಗೆ, ಅಷ್ಟೇ ಅಲ್ಲ ಕ್ರಿಕೆಟಿಗೇ ಒಬ್ಬ ಅಸಾಮಾನ್ಯ ಅಂಬಾಸಡರ್.
ಯಾರಿಂದಲೂ ಊಹೆ ಮಾಡಲಿಕ್ಕೂ ಸಾಧ್ಯವಾಗದ ನಾಯಕತ್ವ ಗುಣವೇ ಅವರಲ್ಲಿರುವ ಮಹಾಶಕ್ತಿ. ಪ್ರತಿಯೊಬ್ಬ ಯುವ ಆಟಗಾರರು ಆಟದ ವೇಳೆ ಮಹಿ ಹೇಗೆ ಒತ್ತಡವನ್ನು ನಿಭಾಯಿ ಸುತ್ತಾರೆ, ನಾಯಕನಾಗಿ ಹೇಗೆ ಮುನ್ನಡೆಸುತ್ತಾರೆ ಎನ್ನುವುದನ್ನು ನೋಡಿ ತಿಳಿದುಕೊಳ್ಳುವಂಥದ್ದಾಗಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಯಶಸ್ಸಿನಲ್ಲಿ ಧೋನಿ ಅವರ ಕೊಡುಗೆ ವರ್ಣಿಸ ಲಾಗದು’ ಎಂದಿದ್ದಾರೆ.
2018ರ ಸಾಲಿನ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದ ರೊಂದಿಗೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಸುರೇಶ್ ರೈನಾ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ (4,985) ಗಳಿಕೆಯ ಆಟಗಾರ.
ಇದೇ ವೇಳೆ, ಪ್ರಸಕ್ತ ಸಾಲಿನಲ್ಲಿ ಹೋಮ್ ಗ್ರೌಂಡ್ ಚೆನ್ನೈನಲ್ಲಿ ಹೆಚ್ಚು ಪಂದ್ಯ ಆಡಲು ಸಾಧ್ಯವಾಗಲಿಲ್ಲ. ಮುಂದಿನ ಆವೃತ್ತಿಯಲ್ಲಿ ಇನ್ನಷ್ಟು ಪಂದ್ಯ ಆಡಬೇಕೆನ್ನುವ ಬಯಕೆ ಯನ್ನು ವ್ಯಕ್ತಪಡಿಸಿದ್ದಾರೆ.
“ಸಿಎಸ್‌ಕೆ ನನ್ನ ಹೃದಯದಾಳದಲ್ಲಿ ಬೇರೂರಿರುವ ತಂಡ. ಈ ಬಾರಿಯ ಟೂರ್ನಿಯಲ್ಲಿ ಸಾಕಷ್ಟು ಕಲಿತಿದ್ದೇನೆ. ಸಿಎಸ್‌ಕೆ ಪರ ಇನ್ನಷ್ಟು ಪಂದ್ಯಗಳನ್ನು ಆಡಿ, ಮತ್ತಷ್ಟು ರನ್ ಗಳಿಸುವ ಹಂಬಲ ನನ್ನದಾಗಿದೆ’ ಎಂದಿದ್ದಾರೆ.