ಮಹೇಂದ್ರ ಸಿಂಗ್ ಧೋನಿ ಎಂಬ ಶುದ್ಧ ಕಚ್ಚಾ ಪ್ರತಿಭೆ ವಿಶ್ವ ಕ್ರಿಕೆಟ್‌ನಲ್ಲೇ ಮತ್ತೂಬ್ಬರಿಲ್ಲ! 2004ರವರೆಗೆ ರೈಲ್ವೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದ ಧೋನಿ, ಮುಂದೆ ಭಾರತೀಯ ಕ್ರಿಕೆಟ್ ಪ್ರವೇಶಿಸಿ ಮಾಡಿದ್ದು ಬರೀ ಪವಾಡಗಳನ್ನೇ. ಬಹುಶಃ ಭಾರತೀಯ ಅಭಿಮಾನಿಗಳು ಈ ಮಟ್ಟದ ದಿಗ್ವಿಜಯಗಳನ್ನು ನಿರೀಕ್ಷಿಸಿರಲಿಲ್ಲ ಎಂದರೂ ಸರಿಯೇ! 2007ರಲ್ಲಿ ಮೊದಲ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ….ಈ ಮೂರೂ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಧೋನಿ.
ಧೋನಿ ಬ್ಯಾಟಿಂಗನ್ನು ಗಮನಿಸಿ. ಅದರಲ್ಲಿ ತಾಂತ್ರಿಕ ಪರಿಪೂರ್ಣತೆ ಇಲ್ಲವೇ ಇಲ್ಲ. ಆ ಹೊಡೆತಗಳೆಲ್ಲ ಪಕ್ಕಾ ಹಳ್ಳಿಗಾಡಿನ ಸೊಗಡು ಹೊಂದಿರುವಂತವು. ಆದರೂ ಧೋನಿಯನ್ನು ಬೌಲಿಂಗ್ ತಜ್ಞರು ಕಟ್ಟಿಹಾಕಲು ವಿಫಲರಾದರು. ಮೈದಾನದಲ್ಲಿ ಒಬ್ಬ ತಜ್ಞನಂತೆ ನಾಯಕತ್ವದ ಲೆಕ್ಕಾಚಾರ ಮಾಡುವ ಈ ಕ್ರಿಕೆಟಿಗನನ್ನು ಎದುರಿಸಿ ಗೆದ್ದ ನಾಯಕರು ಕಡಿಮೆ. ಕಾಲಕ್ರಮೇಣ ವಯಸ್ಸು, ಹೊಸರಕ್ತಗಳಿಂದ ಎದುರಾದ ಪೈಪೋಟಿಯಿಂದ ಈತ ಮರೆಗೆ ಸರಿದನೇ ಹೊರತು ಕಳಪೆ ಪ್ರದರ್ಶನದಿಂದಲ್ಲ.
ಇಷ್ಟನ್ನೆಲ್ಲ ಯಾಕೆ ಹೇಳಬೇಕಾಯಿತು ಎಂದರೆ ಚೆನ್ನೈ ಕಿಂಗ್ಸ್ ತಂಡ ಎರಡು ವರ್ಷದ ನಿಷೇಧದ ನಂತರವೂ ಧೋನಿಯ ಜಾದೂ ನಾಯಕತ್ವದ ಪರಿಣಾಮ ಫೈನಲ್‌ಗೇರಿದೆ. ಇದು ಐಪಿಎಲ್‌ನ ದಾಖಲೆ. ಈ ತಂಡ ಒಟ್ಟು 11 ಐಪಿಎಲ್‌ಗಳಲ್ಲಿ 9 ಬಾರಿ ಮಾತ್ರ ಆಡಿದೆ. ಇನ್ನೆರಡು ವರ್ಷ ನಿಷೇಧದಲ್ಲಿತ್ತು. ಈ 9 ಅವಕಾಶದಲ್ಲಿ 7 ಬಾರಿ ಫೈನಲ್‌ಗೇರಿದೆ. ಅದರಲ್ಲಿ 2 ಬಾರಿ ಪ್ರಶಸ್ತಿ ಗೆದ್ದಿದೆ. ಇದನ್ನು ಸಾಮಾನ್ಯ ಸಾಧನೆ ಎನ್ನಲು ಸಾಧ್ಯವೇ?
ಉಳಿದೆಲ್ಲ ಐಪಿಎಲ್ ತಂಡಗಳಲ್ಲಿ ನಾಯಕರು ಪದೇ ಪದೇ ಬದಲಾಗಿದ್ದಾರೆ. ಚೆನ್ನೈ ಮಾತ್ರ ತಾನಾಡಿದ ಅಷ್ಟೂ ಕೂಟಗಳಲ್ಲಿ ಧೋನಿಯನ್ನು ಏಕಮಾತ್ರ ನಾಯಕನಾಗಿ ಸ್ವೀಕರಿಸಿದೆ. ಅದು ಯಶಸ್ಸನ್ನೂ ನೀಡಿದೆ. 2016, 2017ರಲ್ಲಿ ಅನಿವಾರ್ಯವಾಗಿ ಬೆಟ್ಟಿಂಗ್ ಹಗರಣಕ್ಕೆ ಸಿಕ್ಕಿ ಚೆನ್ನೈ ಐಪಿಎಲ್‌ನಲ್ಲಿ ಆಡಿರಲಿಲ್ಲ. ಅದಾದ ನಂತರ ಮತ್ತೆ ಒಗ್ಗೂಡಿದ ಈ ಆಟಗಾರರು ತಮ್ಮ ತಂಡವನ್ನು ಫೈನಲ್‌ಗೇರಿಸಿದ್ದಾರೆ. ಅದಕ್ಕೆ ಕಾರಣ ಧೋನಿ ನಾಯಕತ್ವದ ಜಾದೂ. ಅಷ್ಟು ಮಾತ್ರವಲ್ಲ ಬ್ಯಾಟಿಂಗ್‌ನಲ್ಲೂ ಅಸಾಮಾನ್ಯ ಅಬ್ಬರ ತೋರಿಸಿರುವ ಈ ಮಾಂತ್ರಿಕ ಆಡಿದ 15 ಪಂದ್ಯಗಳಲ್ಲಿ 455 ರನ್ ಗಳಿಸಿದ್ದಾರೆ. ಈ ಬಾರಿ ಧೋನಿ ಕೆಲವು ಇನಿಂಗ್ಸ್‌ಗಳಂತೂ ಐಪಿಎಲ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್‌ಗಳಲ್ಲೊಂದೆಂದು ನಿಸ್ಸಂಶಯವಾಗಿ ಹೇಳಬಹುದು. ಧೋನಿ ಮುಂದಿರುವ ಸದ್ಯದ ಸವಾಲು ಚೆನ್ನೈಯನ್ನು ಮೂರನೇ ಬಾರಿ ಐಪಿಎಲ್ ಸಿಂಹಾಸನದ ಮೇಲೆ ಕೂರಿಸುವುದು. ಅದರಲ್ಲಿ ಯಶಸ್ವಿಯಾಗಲಿ ಎಂಬುದು ಅಭಿಮಾನಿಗಳೆಲ್ಲರ ಆಸೆ.