ಹೊಸದಿಲ್ಲಿ: ಚೆನ್ನೈ ತಂಡ ಪ್ರಸಕ್ತ ಐಪಿಎಲ್‌ನಿಂದ ನಿರ್ಗಮಿಸಲು ಇನ್ನೊಂದೇ ಹೆಜ್ಜೆ ಬಾಕಿ. ಈ ನಡುವೆ ನಾಯಕ ಧೋನಿ ಎದುರಾಳಿ ಆಟಗಾರರಿಗೆಲ್ಲ ತನ್ನ “ನಂ.7′ ಜೆರ್ಸಿ ಹಂಚುತ್ತಿರುವುದು ಅವರ ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಧೋನಿ ಐಪಿಎಲ್‌ಗೂ ವಿದಾಯ ಹೇಳುವ ಸೂಚನೆಯೇ ಇದು ಎಂದು ಪ್ರಶ್ನಿಸಿಕೊಳ್ಳುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಅ. 19ರಂದು 200ನೇ ಐಪಿಎಲ್ ಪಂದ್ಯವಾಡಿದ ಬಳಿಕ ಧೋನಿ ತಮ್ಮ ಜೆರ್ಸಿಯೊಂದನ್ನು ಜಾಸ್ ಬಟ್ಲರ್‌ಗೆ ನೀಡಿದ್ದರು. ಗುರುವಾರ ಮುಂಬೈ ವಿರುದ್ಧ 10 ವಿಕೆಟ್ ಸೋಲನುಭವಿಸಿದ ಬಳಿಕ ಪಾಂಡ್ಯ ಸೋದರರಿಗೂ ಜೆರ್ಸಿ ಕೊಟ್ಟಿದ್ದಾರೆ. ಹಾರ್ದಿಕ್ ಮತ್ತು ಕೃಣಾಲ್ ಈ ಜೆರ್ಸಿಯನ್ನು ಪ್ರದರ್ಶಿಸಿ ಸಂಭ್ರಮಿಸುತ್ತಿರುವ ಚಿತ್ರ ವೈರಲ್ ಆಗಿದೆ. ಚೆನ್ನೈ ಇನ್ನೂ 3 ಪಂದ್ಯಗಳನ್ನು ಆಡಲಿಕ್ಕಿದೆ. ಆಗಲೂ ಧೋನಿ ತಮ್ಮ ಜೆರ್ಸಿಯನ್ನು ಎದುರಾಳಿ ಆಟಗಾರರಿಗೆ ನೀಡಬಹುದು.
ಐಪಿಎಲ್ ವೈಫಲ್ಯ
ಆ. 15ರಂದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಧೋನಿ ವಿದಾಯ ಹೇಳಿದ್ದರು. ಈ ಕಾರಣಕ್ಕಾಗಿ ಐಪಿಎಲ್‌ನ ಕೇಂದ್ರಬಿಂದುವಾಗಿದ್ದರು. ಆದರೆ ಈ ಕೂಟದಲ್ಲಿ ಚೆನ್ನೈ ಹಿಂದೆಂದೂ ಕಂಡರಿಯದ ಆತಂಕಕ್ಕೆ ಸಿಲುಕಿದೆ. ಕೂಟದಿಂದ ನಿರ್ಗಮಿಸಲಿರುವ ಮೊದಲ ತಂಡವೆನಿಸುವ ಎಲ್ಲ ಸಾಧ್ಯತೆ ಇದೆ. ಧೋನಿ ನಾಯಕತ್ವ, ಬ್ಯಾಟಿಂಗ್, ತಂಡದ ಆಯ್ಕೆ. ಯಾವುದೂ ಕ್ಲಿಕ್ ಆಗಿಲ್ಲ. ಬಹುಶಃ ಐಪಿಎಲ್ ವಿದಾಯಕ್ಕೆ ಇದು ಸೂಕ್ತ ಸಮಯ ಎಂದು ಅವರು ಭಾವಿಸಿರಬಹುದು. ಇದಕ್ಕೆ “ಜೆರ್ಸಿ ವಿತರಣೆ’ ಕೂಡ ಪುಷ್ಟಿ ನೀಡುತ್ತಿದೆ.
ಇದನ್ನೂ ಓದಿ:ಪ್ಲೇ ಆಫ್ ಹೊಸ್ತಿಲಲ್ಲಿ ಕೊಹ್ಲಿ ಹುಡುಗರು, ನಿರ್ಗಮನದ ಬಾಗಿಲಲ್ಲಿ ಚೆನ್ನೈ