Advertisement

ಧೋನಿ, ರೋಹಿತ್‌ ಐಪಿಎಲ್‌ನ ಲಕ್ಕೀ ನಾಯಕರು

12:30 AM Mar 20, 2019 | Team Udayavani |

12ನೇ ಐಪಿಎಲ್‌ ಪಂದ್ಯಾವಳಿಯ ಆರಂಭಕ್ಕೆ ಇನ್ನುಳಿದಿರುವುದು ಮೂರೇ ದಿನ. 8 ತಂಡಗಳ ನಡುವಿನ ಈ ಚುಟುಕು ಕ್ರಿಕೆಟ್‌ ಕದನದ ಕಾವು ಬೇಸಗೆಯ ಬಿಸಿಯನ್ನೂ ಮೀರಿಸಿದೆ. ಬೆನ್ನಲ್ಲೇ ಪ್ರತಿಷ್ಠಿತ ವಿಶ್ವಕಪ್‌ ಪಂದ್ಯಾವಳಿ ಆರಂಭವಾಗಲಿರುವುದರಿಂದ ಈ ಬಾರಿಯ ಐಪಿಎಲ್‌ಗೆ ಹೆಚ್ಚಿನ ಮಹತ್ವವಿದೆ. ಎಲ್ಲರೂ ಇದನ್ನು ವಿಶ್ವಕಪ್‌ ಅಭ್ಯಾಸದ ದೃಷ್ಟಿಯಿಂದ ನೋಡುತ್ತಿರುವುದೇ ಇದಕ್ಕೆ ಕಾರಣ. ಈ ಸಂದರ್ಭದಲ್ಲಿ 8 ನಾಯಕರ ಕಿರು ಪರಿಚಯವೊಂದನ್ನು ನೀಡಲಾಗಿದೆ. ಇವರಲ್ಲಿ ಈ ವರೆಗೆ ಐಪಿಎಲ್‌ ಕಪ್‌ ಎತ್ತಿದವರು ಮಹೇಂದ್ರ ಸಿಂಗ್‌ ಧೋನಿ ಮತ್ತು ರೋಹಿತ್‌ ಶರ್ಮ ಮಾತ್ರ ಎಂಬುದು ವಿಶೇಷ. ಇಬ್ಬರೂ ತಲಾ 3 ಸಲ ತಮ್ಮ ತಂಡಕ್ಕೆ ಕಿರೀಟ ತೊಡಿಸಿದ್ದಾರೆ. ಉಳಿದವರಿಗೆ ಈ ಸಲ ಅದೃಷ್ಟ ಕೈಹಿಡಿದೀತೇ? ಹೀಗೊಂದು ಕುತೂಹಲ!

Advertisement

ವಿರಾಟ್‌ ಕೊಹ್ಲಿ ಆರ್‌ಬಿ  ಬೆಂಗಳೂರು
ವಿಶ್ವ ಮಟ್ಟದಲ್ಲಿ ನಾಯಕನಾಗಿ ಕೊಹ್ಲಿ ಎಷ್ಟೇ ಸಾಧನೆ ಮಾಡಿರಲಿ, ಐಪಿಎಲ್‌ ಮಟ್ಟಿಗೆ ನತದೃಷ್ಟ ಕಪ್ತಾನನೇ ಆಗಿದ್ದಾರೆ. 2016ರಲ್ಲಿ ಆರ್‌ಸಿಬಿಯನ್ನು ಫೈನಲಿಗೆ ಕೊಂಡೊಯ್ದರೂ ಅಲ್ಲಿ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಸಣ್ಣ ಅಂತರದಲ್ಲಿ ಸೋಲಬೇಕಾಯಿತು. ಈ ಬಾರಿ ಆರ್‌ಸಿಬಿ ಹೊಸ ರೂಪ ಪಡೆದಿದ್ದು, “ಕಪ್‌ ನಮ್ದೇ’ ಆದೀತೇ ಎಂಬುದು ಅಭಿಮಾನಿಗಳ ಪ್ರಶ್ನೆ.

ಮಹೇಂದ್ರ ಸಿಂಗ್‌ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್‌
ಚೆನ್ನೈ ಫ್ರಾಂಚೈಸಿಯ 2 ವರ್ಷಗಳ ನಿಷೇಧ ಮುಗಿದ ಬೆನ್ನಲ್ಲೇ ಮರಳಿ ನಾಯಕತ್ವ ವಹಿಸಿದ ಧೋನಿ ಸಿ.ಎಸ್‌.ಕೆ.ಯನ್ನು 3ನೇ ಸಲ ಚಾಂಪಿಯನ್‌ ಪಟ್ಟಕ್ಕೇರಿಸಿಯೇ ಬಿಟ್ಟರು. 2010 ಮತ್ತು 2011ರಲ್ಲಿ ಚೆನ್ನೈಗೆ ಟ್ರೋಫಿ ತಂದಿತ್ತ ಹೆಗ್ಗಳಿಕೆಯೂ ಧೋನಿ ಪಾಲಿಗಿದೆ. ಈ ಬಾರಿ ವಿಶ್ವಕಪ್‌ ಅಭ್ಯಾಸಕ್ಕಾಗಿ ಧೋನಿಗೆ ಐಪಿಎಲ್‌ ಹೆಚ್ಚು ಮಹತ್ವದ್ದಾಗಿದೆ. ಚೆನ್ನೈ 4ನೇ ಸಲ ಗೆದ್ದರೆ ಅದೊಂದು ದಾಖಲೆಯಾಗಲಿದೆ.

ರೋಹಿತ್‌ ಶರ್ಮ ಮುಂಬೈ ಇಂಡಿಯನ್ಸ್‌
ಧೋನಿಯಂತೆ 3 ಸಲ ಐಪಿಎಲ್‌ ವಿಜೇತ ತಂಡದ ನಾಯಕನೆಂಬುದು ಮುಂಬೈ ಇಂಡಿಯನ್ಸ್‌ನ ರೋಹಿತ್‌ ಶರ್ಮ ಪಾಲಿನ ಹೆಗ್ಗಳಿಕೆ. ಅವರು ಮುಂಬೈ ತಂಡಕ್ಕೆ ವರ್ಷ ಬಿಟ್ಟು ವರ್ಷ (2013, 2015, 2017) ಕಿರೀಟ ತೊಡಿಸುತ್ತ ಬಂದಿದ್ದಾರೆ. ಈ ಬಾರಿ ಇದೇ ಗೆಲುವಿನ ಸರಪಳಿ ಮುಂದುವರಿದರೆ ಮುಂಬೈ ಇಂಡಿಯನ್ಸ್‌ ಜತೆಗೆ ರೋಹಿತ್‌ ಶರ್ಮ ಕೂಡ ದಾಖಲೆ ಸ್ಥಾಪಿಸಲಿದ್ದಾರೆ. 

ಆರ್‌. ಅಶ್ವಿ‌ನ್‌ ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಚೆನ್ನೈ ತಂಡದ ಮಾಜಿ ಆಟಗಾರನಿಗೆ ತವರಿನ ತಂಡದ ನಾಯಕನಾಗುವ ಯೋಗ ಇರಲಿಲ್ಲ. ಕಳೆದ ವರ್ಷ ಪಂಜಾಬ್‌ ಪಾಲಾದೊಡನೆಯೇ ಸಾರಥ್ಯ ಒಲಿದು ಬಂತು. ತಂಡ ಅಮೋಘ ಆರಂಭವನ್ನೂ ಪಡೆಯಿತು. ಆದರೆ ನಡು ಹಾದಿಯಲ್ಲಿ ಮುಳುಗಿತು. 2014ರ ಫೈನಲಿಸ್ಟ್‌ ತಂಡ ವನ್ನು ಅಶ್ವಿ‌ನ್‌ ಮೊದಲ ಸಲ ಚಾಂಪಿಯನ್‌ ಪೀಠದಲ್ಲಿ ಕೂರಿಸಬಲ್ಲರೇ?

Advertisement

 ಶ್ರೇಯಸ್‌ ಅಯ್ಯರ್‌  ಡೆಲ್ಲಿ ಕ್ಯಾಪಿಟಲ್ಸ್‌
ಡೆಲ್ಲಿ ತಂಡದ ಹೆಸರು ಬದಲಾಗಿದೆ. ಅದೃಷ್ಟ ಬದಲಾದೀತೇ ಎಂಬುದು ಸದ್ಯದ ಪ್ರಶ್ನೆ. ಶ್ರೇಯಸ್‌ ಅಯ್ಯರ್‌ ಮುಂಬಯಿಯ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌. ಗಂಭೀರ್‌ ಕಳೆದ ವರ್ಷ ಅರ್ಧದಲ್ಲೇ ನಾಯಕತ್ವದಿಂದ ದೂರ ಸರಿದಾಗ ಡೆಲ್ಲಿ ಡೇರ್‌ಡೆವಿಲ್ಸ್‌ ಸಾರಥ್ಯಕ್ಕೆ ಗೋಚರಿಸಿದವರೇ ಈ ಅಯ್ಯರ್‌. ಹೊಸ “ಡೆಲ್ಲಿ’ಯನ್ನು ಎಷ್ಟು ದೂರ ಕೊಂಡೊಯ್ಯಬಲ್ಲರೋ, ನೋಡಬೇಕು.

ದಿನೇಶ್‌ ಕಾರ್ತಿಕ್‌  ಕೋಲ್ಕತಾ ನೈಟ್‌ರೈಡರ್
ಅನುಭವಿ ವಿಕೆಟ್‌ ಕೀಪರ್‌. ಆದರೆ ಅನುಭವಿ ನಾಯಕನಲ್ಲ. ಕಳೆದ ವರ್ಷ ಗೌತಮ್‌ ಗಂಭೀರ್‌ ಹಿಂದೆ ಸರಿದ ಬಳಿಕ ಕೆಕೆಆರ್‌ ನಾಯಕನಾಗುವ ಅವಕಾಶ ಲಭಿಸಿತು. ತಂಡ ಅಗ್ರ ಮೂರರಲ್ಲಿ ಒಂದೆನಿಸಿದ್ದು ಸಾಮಾನ್ಯ ಸಾಧನೆಯೇನಲ್ಲ. ಈ ಸಲ ಎಲ್ಲರಂತೆ ವಿಶ್ವಕಪ್‌ಗೆ ಸ್ಥಾನ ಸಂಪಾದಿಸುವ ವೈಯಕ್ತಿಕ ಗುರಿಯನ್ನು ಕಾರ್ತಿಕ್‌ ಕೂಡ ಹೊಂದಿದ್ದಾರೆ. ಅದೃಷ್ಟ ತೂಗುಯ್ನಾಲೆಯಲ್ಲಿದೆ!

ಕೇನ್‌ ವಿಲಿಯಮ್ಸ್‌ ಸನ್‌ರೈಸರ್  ಹೈದರಾಬಾದ್‌ಇವರು  ವಾರ್ನರ್‌ ನಿಷೇಧದಿಂದ ಸನ್‌ರೈಸರ್ ನಾಯಕರಾದವರು. ಕಳೆದ ಋತುವಿನಲ್ಲಿ ತಂಡವನ್ನು ಫೈನಲ್‌ ತನಕ ಮುನ್ನಡೆಸಿದ ಸಾಹಸಿ. ಆದರೆ 2ನೇ ಸಲ ಪ್ರಶಸ್ತಿ ಸುತ್ತಿಗೆ ಏರಿದ ಹೈದರಾಬಾದ್‌ ತಂಡ ಚೆನ್ನೈಗೆ ಶರಣಾಗಬೇಕಾಯಿತು. ವಿಲಿಯಮ್ಸನ್‌ ಬ್ಯಾಟಿಂಗ್‌ ಮೂಲಕವೂ ಮಿಂಚಿದ್ದರು. ಈ ಬಾರಿಯೂ ಉತ್ತಮ ಫಾರ್ಮ್ನಲ್ಲಿದ್ದಾರೆ.

ಅಜಿಂಕ್ಯ ರಹಾನೆ  ರಾಜಸ್ಥಾನ್‌ ರಾಯಲ್ಸ್‌ 
ಸ್ಟೀವ್‌ ಸ್ಮಿತ್‌ಗೆ ನಿಷೇಧ ಹೇರಿದ್ದರಿಂದ ಕಳೆದ ವರ್ಷ ಅಜಿಂಕ್ಯ ರಹಾನೆ ರಾಜಸ್ಥಾನ್‌ ರಾಯಲ್ಸ್‌ ನಾಯಕರಾದರು. ಈ ವರ್ಷವೂ ಮುಂದುವರಿಯಲಿದ್ದಾರೆ. ಭಾರತದ ಟೆಸ್ಟ್‌ ತಂಡದ ಉಪನಾಯಕತ್ವದ ಅನುಭವ ಇದೆ. ನಿಷೇಧದ ಬಳಿಕ ವಾಪಸಾದ ರಾಜಸ್ಥಾನ್‌ ತಂಡ ಕಳೆದ ವರ್ಷ ರಹಾನೆ ನಾಯಕತ್ವದಲ್ಲೇ ಪ್ಲೇ-ಆಫ್ಗೆ ನೆಗೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next