Advertisement

T20: ಬಾಂಗ್ಲಾ ವಿರುದ್ಧ 7 ವಿಕೆಟ್‌ ಜಯ: ಭಾರತದ ವನಿತೆಯರ ಸರಣಿ ವಿಕ್ರಮ

11:08 PM May 02, 2024 | Team Udayavani |

ಸಿಲ್ಹೆಟ್‌ (ಬಾಂಗ್ಲಾದೇಶ): ಆತಿಥೇಯ ಬಾಂಗ್ಲಾದೇಶವನ್ನು 3ನೇ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಬಗ್ಗುಬಡಿದ ಭಾರತದ ವನಿತೆಯರು ಸರಣಿಯನ್ನು ವಶಪಡಿಸಿಕೊಂಡಿದ್ದಾರೆ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ 8 ವಿಕೆಟಿಗೆ 117 ರನ್‌ ಗಳಿಸಿದರೆ, ಭಾರತ 18.3 ಓವರ್‌ಗಳಲ್ಲಿ 3 ವಿಕೆಟಿಗೆ 118 ರನ್‌ ಬಾರಿಸಿ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿತು. 5 ಪಂದ್ಯಗಳ ಸರಣಿಯಲ್ಲೀಗ ಹರ್ಮನ್‌ಪ್ರೀತ್‌ ಕೌರ್‌ ಪಡೆ 3-0 ಮುನ್ನಡೆಯಲ್ಲಿದೆ.

ಭಾರತವಿಂದು ಬ್ಯಾಟಿಂಗ್‌, ಬೌಲಿಂಗ್‌ ಜತೆಗೆ ಫೀಲ್ಡಿಂಗ್‌ನಲ್ಲೂ ಮಿಂಚಿತು. ಬಾಂಗ್ಲಾದ ಮೂವರು ಆಟಗಾರ್ತಿಯರನ್ನು ರನೌಟ್‌ ಮಾಡಿತು. ಉಳಿದಂತೆ ರಾಧಾ ಯಾದವ್‌ 2, ರೇಣುಕಾ ಸಿಂಗ್‌, ಪೂಜಾ ಮತ್ತು ಶ್ರೇಯಾಂಕಾ ಪಾಟೀಲ್‌ ತಲಾ ಒಂದು ವಿಕೆಟ್‌ ಕೆಡವಿದರು. ಬಾಂಗ್ಲಾ ಪರ ಓಪನತ್‌ ದಿಲಾರಾ ಅಖ್ತರ್‌ 39, ನಾಯಕಿ ನಿಗಾರ್‌ ಸುಲ್ತಾನಾ 28 ರನ್‌ ಮಾಡಿದರು.

ಚೇಸಿಂಗ್‌ ವೇಳೆ ಶಫಾಲಿ ವರ್ಮ-ಸ್ಮತಿ ಮಂಧನಾ ಜೋಡಿಯಿಂದ ಉತ್ತಮ ಆರಂಭ ಲಭಿಸಿತು. 12.1 ಓವರ್‌ಗಳಲ್ಲಿ 91 ರನ್‌ ಒಟ್ಟುಗೂಡಿತು. ಶಫಾಲಿ 38 ಎಸೆತಗಳಿಂದ 51 ರನ್‌ (8 ಬೌಂಡರಿ), ಮಂಧನಾ 42 ಎಸೆತಗಳಿಂದ 47 ರನ್‌ ಮಾಡಿದರು (5 ಬೌಂಡರಿ, 1 ಸಿಕ್ಸರ್‌). ಶಫಾಲಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

Advertisement

Udayavani is now on Telegram. Click here to join our channel and stay updated with the latest news.

Next