ಕೊಪ್ಪಳ: ತಾಲೂಕು ಆರೋಗ್ಯಾಧಿಕಾರಿಗಳು ನಿಮ್ಮ ತಾಲೂಕು ವ್ಯಾಪ್ತಿಯ ಕೇಂದ್ರ ಸ್ಥಾನ ಅಥವಾ ಹೋಬಳಿ ಮಟ್ಟದಲ್ಲಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಆರೋಗ್ಯ ಮೇಳ ಹಮ್ಮಿಕೊಂಡು ಉತ್ತಮ ಆರೋಗ್ಯ ಸೇವೆ ನೀಡಿ ಸದೃಢ ಸಮಾಜ ನಿರ್ಮಾಣ ಮಾಡಲು ಸಹಕರಿಸಿ ಎಂದು ಡಿಎಚ್‌ಒ ಡಾ| ಅಲಕನಂದಾ ಕೆ. ಮಳಗಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಏ. 18ರಿಂದ 22 ರವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹಮ್ಮಿಕೊಂಡಿರುವ ತಾಲೂಕು ಮಟ್ಟದ ಆರೋಗ್ಯ ಮೇಳದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯ ಮೇಳವನ್ನು ಏ. 18ರಿಂದ 22ರವರೆಗೆ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳಲ್ಲಿ ಹಮ್ಮಿಕೊಂಡು ಆರೋಗ್ಯ ತಪಾಸಣೆ ಮಾಡಬೇಕು. ಈ ಶಿಬಿರದಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ತಾಯಿ ಮಕ್ಕಳ ಆರೋಗ್ಯ ಕಾರ್ಯಕ್ರಮ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಹಾಗೂ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿ ಸಾರ್ವಜನಿಕರಿಗೆ ಗುಣಾತ್ಮಕ ಚಿಕಿತ್ಸೆ ನೀಡಬೇಕು ಎಂದರು.
ಗ್ರಾಮ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಗರ್ಭ ಕಂಠದ ಕ್ಯಾನ್ಸರ್, ನರರೋಗಕ್ಕೆ ಸಂಬಂಧಿ ಸಿದ ಕಾಯಿಲೆ, ಸುಟ್ಟ ಗಾಯಗಳಿದ್ದರೆ ಹಾಗೂ ಇನ್ನಿತರ ಗಂಭೀರ ಕಾಯಿಲೆಗಳಿರುವ ರೋಗಿಗಳನ್ನು ಗ್ರಾಮ ಮಟ್ಟದಲ್ಲಿ ಪತ್ತೆ ಹಚ್ಚಿ ಆರೋಗ್ಯ ಶಿಬಿರಕ್ಕೆ ಕರೆತರಬೇಕು. ಈ ಬಗ್ಗೆ ಎಲ್ಲ ಮೇಲ್ವಿಚಾರಕರು ಜವಾಬ್ದಾರಿ ವಹಿಸಬೇಕು. ರೋಗಿಗಳನ್ನು ವೈದ್ಯಾಧಿಕಾರಿಗಳು ತಮ್ಮ ಹಂತದಲ್ಲಿ ಪಟ್ಟಿ ಮಾಡಿ ತಜ್ಞ ವೈದ್ಯರ ಬಳಿಗೆ ನಿರ್ದೇಶನ ಮಾಡುವುದು ಎಲ್ಲಾ ಸಿಬ್ಬಂದಿ ಮತ್ತು ಮೇಲ್ವಿಚಾರಕರ ಜವಾಬ್ದಾರಿ ಎಂದರು.
ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಪ್ರಚಾರದ ಮೂಲಕ ಅರಿವು ಮೂಡಿಸಬೇಕು. ಆರೋಗ್ಯ ಮೇಳದ ಅನುಷ್ಠಾನ ಅಧಿಕಾರಿಗಳು ಒಂದೊಂದು ವಿಭಾಗದ ಜವಾಬ್ದಾರಿ ತೆಗೆದುಕೊಂಡು ಶಿಬಿರ ಯಶಸ್ವಿಗೊಳಿಸಬೇಕು. ಮೇಳದಲ್ಲಿ ವಿವಿಧ ಮಳಿಗೆಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಜೊತೆಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾ ಧಿಕಾರಿ ಡಾ| ರವೀಂದ್ರನಾಥ ಎಂ.ಎಚ್., ತಾಲೂಕು ವೈದ್ಯಾಧಿಕಾರಿಗಳು, ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು.