ನಟಿ ಅದ್ವಿತಿ ಶೆಟ್ಟಿ ಮತ್ತು ರಾಕೇಶ್ ಬಿರಾದರ್ ಜೋಡಿಯಾಗಿ ಅಭಿನಯಿಸಿರುವ “ಧೀರ ಸಾಮ್ರಾಟ್’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ಪ್ರಚಾರದ ಭಾಗವಾಗಿ “ಧೀರ ಸಾಮ್ರಾಟ್’ ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ.
ಕೆಲ ದಿನಗಳ ಹಿಂದಷ್ಟೇ “ಧೀರ ಸಾಮ್ರಾಟ್’ ಸಿನಿಮಾದ “ಏನ್ ಚೆಂದ ಕಣಾ¤ಳೆ ನಮ್ ಹುಡುಗಿ…’ ಎಂಬ ಲವ್ ಟ್ರ್ಯಾಕ್ ಅನ್ನು ನಟ ಧ್ರುವ ಸರ್ಜಾ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಟಿಪ್ಪು ಧ್ವನಿಯಲ್ಲಿ ಮೂಡಿಬಂದಿರುವ ಬಹದ್ದೂರ್ ಚೇತನ್ ಸಾಹಿತ್ಯ ಮತ್ತು ರಾಘವ ಸುಭಾಷ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಗೀತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ 1 ಮಿಲಿಯನ್ಸ್‌ಗೂ ಹೆಚ್ಚು ವೀವ್ಸ್ ಕಂಡಿದೆ.
ಇದೀಗ “ಧೀರ ಸಾಮ್ರಾಟ್’ ಸಿನಿಮಾದ ಮೊದಲ ಟ್ರೇಲರ್ ಜ. 31ರಂದು ಬಿಡುಗಡೆಯಾಗಲಿದ್ದು, ನಟ ಪ್ರಜ್ವಲ್ ದೇವರಾಜ್ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಇನ್ನು ಈ ಹಿಂದೆ “ಸಪ್ಲಿಮೆಂಟರಿ’ ಎಂಬ ಸಿನಿಮಾವನ್ನು ನಿರ್ಮಿಸಿದ್ದ, ಗುರು ಬಂಡಿ “ತನ್ವಿ ಪ್ರೊಡಕ್ಷನ್ ಹೌಸ್’ ಬ್ಯಾನರ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ “ಧೀರ ಸಾಮ್ರಾಟ್’ ಸಿನಿಮಾಕ್ಕೆ ಪವನ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
“ಧೀರ ಸಾಮ್ರಾಟ್’ ಸಿನಿಮಾದಲ್ಲಿ ಅದ್ವಿತಿ, ರಾಕೇಶ್ ಬಿರಾದರ್ ಅವರೊಂದಿಗೆ ನಾಗೇಂದ್ರ ಅರಸ್, ಸಂಕಲ್ಪ ಪಾಟೀಲ್, ರವಿರಾಜ್, ಗಿರಿಧರ್, ಬಾಲರಾಜವಾಡಿ, ರಮೇಶ್ ಭಟ್, ಶೋಭರಾಜ್, ಯತಿರಾಜ್, ಶಂಕರ ಭಟ್, ಮನಮೋಹನ್ ರೈ, ರವೀಂದ್ರನಾಥ್, ಜ್ಯೋತಿ ಮುರೂರು, ಮಂಡ್ಯ ಚಂದ್ರು ಹೀಗೆ ದೊಡ್ಡ ಕಲಾವಿದರ ದಂಡೇ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸುಮಾರು 45 ದಿನಗಳ ಕಾಲ ತುಮಕೂರು, ಚಿತ್ರದುರ್ಗ, ಬೆಂಗಳೂರು ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ತಮ್ಮ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡುವ ನಿರ್ಮಾಪಕ ಗುರು ಬಂಡಿ, “ಈಗಾಗಲೇ ಬಿಡುಗಡೆಯಾಗಿರುವ “ಧೀರ ಸಾಮ್ರಾಟ್’ ಚಿತ್ರದ ಪೋಸ್ಟರ್, ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಿನಿಮಾ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಕೂಡ ಯಾವುದೇ ಕಟ್ಸ್-ಮ್ಯೂಟ್ಸ್ ಇಲ್ಲದೆ ಸಿನಿಮಾಕ್ಕೆ “ಯು/ಎ’ ಪ್ರಮಾಣ ಪತ್ರ ನೀಡಿದೆ. ಕೆಲ ದಿನಗಳಿಂದ ಸಿನಿಮಾದ ಪ್ರಚಾರ ಕಾರ್ಯಗಳನ್ನು ಭರ್ಜರಿಯಾಗಿ ನಡೆಸುತ್ತಿದೆ. ಇದೇ ಫೆ. 16ಕ್ಕೆ ಸಿನಿಮಾ ಬಿಡುಗಡೆ ಮಾಡುವ ಯೋಜನೆಯಿದೆ’ ಎಂದು ಮಾಹಿತಿ ನೀಡಿದ್ದಾರೆ.
■ ಉದಯವಾಣಿ ಸಿನಿ ಸಮಾಚಾರ