ಹೊಸಬರೇ ಸೇರಿ ಸಿದ್ಧಪಡಿಸಿರುವ ಚಿತ್ರ “ಧೀರಸಾಮ್ರಾಟ್’ ಸದ್ದಿಲ್ಲದೇ ತನ್ನ ಚಿತ್ರೀಕರಣ ಮುಗಿಸಿದ್ದು, ಇದೀಗ ಬಿಡುಗಡೆ ಹಂತಕ್ಕೆ ಬಂದಿದೆ. ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿರುವ ಚಿತ್ರತಂಡ ಚಿತ್ರ ಬಿಡುಗಡೆ ಮೊದಲ ಹಂತವಾಗಿ ಚಿತ್ರದ “ಏನ್ ಚಂದ ಕಾಣಿಸ್ತವಳ್ಳೆ’ ಹಾಡನ್ನು ಬಿಡುಗಡೆ ಮಾಡಿದೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಟ ಧ್ರುವಸರ್ಜಾ ಹಾಡು ಬಿಡುಗಡೆಗೊಳಿಸಿ ಶುಭಕೋರಿದರು. “ತನ್ವಿ ಪ್ರೊಡಕ್ಷನ್ ಹೌಸ್’ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ, ಪವನ್‌ಕುಮಾರ್ ನಿರ್ದೇಶನವಿದೆ. ಪವನ್‌ಕುಮಾರ್(ಪಚ್ಚಿ) ಈ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನೆಗೆಟಿವ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜೊತೆ ಗೆ ಶೀರ್ಷಿಕೆ ಗೀತೆ ಮತ್ತು ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, “ಕುಟುಂಬ ಸಮೇತ ನೋಡಬಹುದಾದ ಸಸ್ಪೆನ್ಸ್ -ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಐದು ಧೀರ ಹುಡುಗರ ಗೆಳತನ ಹೇಗಿರುತ್ತೆ ಎಂಬುದನ್ನು ಹೇಳಲಾಗಿದೆ. ಕೊನೆತನಕ ಕುತೂಹಲ ಕಾಯ್ದಿರಿಸಿದ್ದು, ಕ್ಲೈಮಾಕ್ಸ್‌ನಲ್ಲಿ ಪ್ರೇಕ್ಷಕರು ಸೀಟಿನ ತುದಿಗೆ ಬರುವಂತೆ ಮಾಡುತ್ತದೆ. “ಸಾವಿಗೆ ಸಾವಿಲ್ಲ’ ಎಂಬ ಅಡಿಬರಹವಿದೆ. ಒಬ್ಬ ವ್ಯಕ್ತಿಗೆ ಸಂಬಂಧಿಸದೇ ಸಮಾಜದಲ್ಲಿ ಯಾವುದೋ ಒಂದು ವರ್ಗದಲ್ಲಿ ಶೋಷಣೆ ಆಗುತ್ತಿರುತ್ತದೆ. ಇಂತಹ ಮುಖ್ಯ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ ’ ಎಂದು ಹೇಳಿದರು.
“ನಾನು “ಅದ್ದೂರಿ’ ಮಾಡಿದಾಗ ಹೊಸಬನಾಗಿದ್ದೆ. ಅಂದು ಪವನ್‌ಗೆ ಅವರು ಕೆಲಸ ಮಾಡುತ್ತಿದ್ದ ವಾಹಿನಿಯಲ್ಲಿ ಜಾಸ್ತಿ ಸಲ ಹಾಡನ್ನು ಪ್ರಸಾರ ಮಾಡು ಎಂದು ದುಂಬಾಲು ಬಿದ್ದಿದ್ದೆ. ನಮ್ಮದು ಹೋಗೋ ಬಾರೋ ಗೆಳತನ. ಈಗ ಅವರ ಪ್ರಥಮ ನಿರ್ದೇಶನದ ಚಿತ್ರ ಎಂದಾಗ ಅವರಿಗೆಪ್ರೋತ್ಸಾಹ ಕೊಡುವುದು ನಮ್ಮ ಕರ್ತವ್ಯವಾಗಿದೆ. ಹೊಸಬರಿಗೆ ಉತ್ತೇಜನ ನೀಡಿ ಅಂತ ಕೇಳಿಕೊಳ್ಳುತ್ತೇನೆ. ಇಂತಹ ಪ್ರತಿಭಾವಂತರನ್ನು ಬೆಳೆಸಿದರೆ, ಪ್ರೇರೇಪಿಸಿದರೆ ಅವರ ಕಲೆಗೆ ಬೆಲೆ ಕೊಟ್ಟಂತೆ ಆಗುತ್ತದೆ’ ಎಂದು ಶುಭಕೋರಿದರು ಧ್ರುವ ಸರ್ಜಾ.
ಚಿತ್ರದಲ್ಲಿ ರಾಕೇಶ್ ಬಿರಾದಾರ್ ಹಾಗೂ ಅದ್ವಿತಿ ಶೆಟ್ಟಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಶೋಭರಾಜ್, ನಾಗೇಂದ್ರ ಅರಸು, ಬಲರಾಜವಾಡಿ, ರಮೇಶ್ ಭಟ್, ಯತಿರಾಜ್, ಮನಮೋಹನ್ ರೈ, ಇಂಚರ, ಸಂಕಲ್ಪ್ ಪಾಟೀಲ್ ರವಿರಾಜ್, ಜ್ಯೋತಿ ಮರೂರು, ಶಂಕರ್ ಭಟ್, ಮಂಡ್ಯಾ ಚಂದ್ರು, ಗಿರಿಗೌಡ, ಪ್ರೇಮ, ಹರೀಶ್ ಅರಸ್. ಬೇಬಿ ಪರಿಣಿತ, ನಂದಿತ ಮುಂತಾದವರು ನಟಿಸಿದ್ದಾರೆ.
ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಚೇತನ್, ನಾಗೇಂದ್ರಪ್ರಸಾದ್ ಸಾಹಿತ್ಯ, ರಾಘವ್ ಸುಭಾಷ್ ಸಂಗೀತ ಸಂಯೋಜನೆ, ವೀರೇಶ್. ಎನ್.ಟಿ.ಎ-ಅರುಣ್ ಸುರೇಶ್ ಛಾಯಾಗ್ರಹಣವಿದೆ. ಕನಕಪುರ, ನೆಲಮಂಗಲ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ರವಿಪ್ರಕಾಶ್ ರೈ