Advertisement

ಅನಿಷ್ಟಗಳ ನಿರ್ಮೂಲನೆಯಾದಾಗ ಸಮ ಸಮಾಜ

08:54 AM Jan 27, 2019 | Team Udayavani |

ದಾವಣಗೆರೆ: ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿರುವ ಅಹಂಕಾರ, ಅಸೂಯೆ, ಅಸಹನೆ ಮೂರು ಅನಿಷ್ಟಗಳು ಬುಡ ಸಮೇತ ನಿರ್ಮೂಲನೆ ಆದಾಗ ಮಾತ್ರ ಸಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಡಾ| ಗೋ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.

Advertisement

ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಪರಿಷತ್ತು ಹಾಗೂ ಜಿಲ್ಲಾ ಕದಳಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಜಿಲ್ಲಾ ಮಟ್ಟದ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲಿಯೇ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ವಚನ ಸಾಹಿತ್ಯದಿಂದ ಜನರ ಮನಸ್ಸನ್ನು ಶುದ್ಧ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರಿಂದಿನ ನಾಗಲೋಟದ ಜೀವನ ಕ್ರಮದಿಂದ ಎಲ್ಲೆಡೆ ಅಸಹನೆ, ಅಹಂಕಾರ, ಅಸೂಯೆ ಹೆಚ್ಚಾಗಿದೆ. ಇದರಿಂದ ಮಾನವೀಯತೆ ಮರೆಯಾಗುತ್ತಿದೆ. ಈ ಮೂರು ಅನಿಷ್ಟಗಳು ದೂರವಾದರೆ ಮಾತ್ರ ಸಮಾಜದಲ್ಲಿ ಶಾಂತಿ, ನಮ್ಮದಿ ಜೊತೆಗೆ ಶರಣರ ಕನಸಿನ ಸಮ ಸಮಾಜ ನಿರ್ಮಾಣ ಆಗಲು ಸಾಧ್ಯ ಎಂದರು.

ಮಾತು ವಚನವಾದರೂ ಕೂಡ ಎಲ್ಲಾ ಮಾತು ವಚನವಲ್ಲ. ನುಡಿದಂತೆ ನಡೆದರೆ ಮಾತ್ರ ಅದು ವಚನ ಆಗುತ್ತದೆ. ಅಂತಹ ಮಾರ್ಗದಲ್ಲಿ ಬಸವಾದಿ ಶರಣರು ನಡೆದರು. ಹಾಗಾಗಿ ಅವರು ನುಡಿದ ಪ್ರತಿ ಮಾತು ಕೂಡ ವಚನವಾಗಿದೆ. ಅಂತಹ ಶರಣರ ವಚನಗಳು ಹರಿದು ಹಂಚಿ ಹೋಗಿದ್ದಾಗ ಸಾಹಿತಿ ಫ.ಗು. ಹಳಕಟ್ಟಿ ಹಳ್ಳಿ ಹಳ್ಳಿ ಸುತ್ತಿ ಓಲೆಗರಿಗಳನ್ನು ಸಂಗ್ರಹಿಸಿ ವಚನ ಸಾಹಿತ್ಯ ವ್ಯವಸ್ಥಿತವಾಗಿ ದೊರಕುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಸ್ಮರಿಸಿದರು.

ವಚನ ಸಾಹಿತ್ಯ ಯಾರನ್ನೋ ಮೆಚ್ಚಿಸಲು ರಚನೆ ಆಗಿಲ್ಲ. ಬದಲಾಗಿ ಜನರು ನೆಮ್ಮದಿ, ನಿಸ್ವಾರ್ಥ ಮನೋಭಾವ, ನಿಷ್ಠೆ ರೂಢಿಸಿಕೊಂಡು ಹೇಗೆ ಬದುಕಬೇಕು ಎಂಬ ವಿಚಾರಧಾರೆಯನ್ನು ತೋರಿಸಿಕೊಟ್ಟ ಅನನ್ಯ ಸಾಹಿತ್ಯವಾಗಿದೆ ಎಂದರು.

Advertisement

ಸಂವಿಧಾನ, ಕಾನೂನುಗಳಿದ್ದರೂ ಪ್ರಸ್ತುತ ಲೋಕಸಭೆ, ವಿಧಾನಸಭೆಗಳಲ್ಲಿ ಜನರ ಸಮಸ್ಯೆ ಬಗೆಹರಿಸುವ ಬಗ್ಗೆ ಆರೋಗ್ಯಪೂರ್ಣ ಚರ್ಚೆ ನಡೆಯುತ್ತಿಲ್ಲ, ಈ ಸ್ಥಿತಿ ಬದಲಾಗಬೇಕು. ಜನಹಿತಕ್ಕಾಗಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ವಿಚಾರಗಳು ಗಂಭೀರವಾಗಿ ಚರ್ಚೆ ಆಗಬೇಕು. ವಿಧಾನಸಭೆ, ಲೋಕಸಭೆ ಜನಹಿತದ ಸಂಸತ್‌ಗಳಾಗಬೇಕು ಎಂದು ಹೇಳಿದರು.

ಸಾಣೇಹಳ್ಳಿ ಶಾಖಾಮಠದ ಡಾ| ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ವಿಚಾರಧಾರೆಗಳನ್ನು ಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆಗ ಬದುಕುಸಾರ್ಥಕವಾಗುತ್ತದೆ ಎಂದರು.

ಪರಿಷತ್‌ ಅಧ್ಯಕ್ಷ ಡಾ| ಬಸವರಾಜ ಸಾದರ, ಸಮ್ಮೇಳನಾಧ್ಯಕ್ಷ ಶಿವಾನಂದ ಗುರೂಜಿ, ಗೌರವಾಧ್ಯಕ್ಷ ಎಂ.ಜಿ. ಈಶ್ವರಪ್ಪ, ಜಿಲ್ಲಾಧ್ಯಕ್ಷ ಚಿಕ್ಕೋಳ್‌ ಈಶ್ವರಪ್ಪ, ಪ್ರಮೀಳಾ ನಟರಾಜ್‌ ಉಪಸ್ಥಿತರಿದ್ದರು. ಪ್ರೇಮಾ ಸೋಮೇಶ್ವರ್‌ ಸಂಗಡಿಗರು ಪ್ರಾರ್ಥಿಸಿದರು. ಶಿವಲಿಂಗಮೂರ್ತಿ ಸ್ವಾಗತಿಸಿದರು.

ಮದ್ಯಪಾನ ಸಂಪೂರ್ಣ ನಿಷೇಧ ಮಾಡಲಿ..
ತುಮಕೂರಿನ ಸಿದ್ಧಗಾಂಗಾ ಶ್ರೀಗಳೇ ಒಂದು ರತ್ನ. ಅವರಿಗೆ ಮತ್ಯಾವ ರತ್ನ ಬೇಕಾಗಿಲ್ಲ. ಅವರು ಎಂದೂ ಯಾರಿಂದಲೂ ಏನನ್ನೂ ಬಯಸಿದವರಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಟ್ಟಿ ನಿರ್ಧಾರ ಕೈಗೊಂಡು ಸಂಪೂರ್ಣವಾಗಿ ಮದ್ಯಪಾನ ನಿಷೇಧ ಮಾಡಿದರೆ ನಿಜಕ್ಕೂ ಸಿದ್ಧಗಂಗಾ ಶ್ರೀಗಳಿಗೆ ಗೌರವ ಸಲ್ಲುತ್ತದೆ. ಮೊದಲು ಈ ಕೆಲಸವನ್ನು ಸರ್ಕಾರಗಳು ಮಾಡಲಿ ಎಂದು ಸಾಣೇಹಳ್ಳಿ ಶಾಖಾಮಠದ ಶ್ರೀ ಡಾ| ಪಂಡಿತಾರಾಧ್ಯ ಸ್ವಾಮೀಜಿ ಆಗ್ರಹಿಸಿದರು.

ವಚನ ಸಾಹಿತ್ಯ ಹತ್ತಿಕ್ಕಲು ಅಸಾಧ್ಯ
ವಚನ ಸಾಹಿತ್ಯದ ವಿಚಾಧಾರೆಯ ಬಗ್ಗೆ ಪರಿಪೂರ್ಣವಾಗಿ ತಿಳಿಯದ ಕೆಲ ಸನಾತನ ಶಕ್ತಿಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಾಗಿ ಈ ಸಾಹಿತ್ಯವನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದು, ಇನ್ನೂ ಮಾಡುತ್ತಲೇ ಇವೆ. ಆದರೆ, ಯಾರು ಏನೇ ಮಾಡಿ ಹತ್ತಿಕ್ಕುವ ಪ್ರಯತ್ನ ಮಾಡಿದರೂ ಎಲ್ಲಾ ಕಾಲಕ್ಕೂ ಅದನ್ನು ಮೀರಿ ಬೆಳೆಯುವ ದಿಟ್ಟ ನಿಲುವನ್ನು ವಚನ ಸಾಹಿತ್ಯ ಹೊಂದಿದೆ. ಇನ್ನು ಅನುಭವ ಮಂಟಪದ ನವ ನಿರ್ಮಾಣಕ್ಕಾಗಿ 600 ಕೋಟಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ 18 ತಿಂಗಳಾಗಿದೆ. ದುರಂತವೆಂದರೆ, ನಿಮ್ಮ ಪ್ರಸ್ತಾವನೆ ಪತ್ರ ಈಚೆಗೆ ನಮಗೆ ತಲುಪಿದೆ. ಕಂದಾಯ ಇಲಾಖೆಗೆ ಕಳಿಸಲಾಗಿದೆ ಎಂದು ಸಿ.ಎಂ. ಕಚೇರಿಯಿಂದ ಉತ್ತರ ಬಂದಿದೆ. ಇದು ನಮ್ಮ ಇಂದಿನ ಸರ್ಕಾರಗಳ ವ್ಯವಸ್ಥೆ ಆಗಿದ್ದು, ಅನುಭವ ಮಂಟಪದ ನವ ನಿರ್ಮಾಣ ಯಾವಾಗ ಆಗುತ್ತೋ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಗೋ.ರು. ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next