Advertisement

ದೇಶಕ್ಕೆ ಇಸ್ರೋ ಕೊಡುಗೆ ಅನನ್ಯ

11:15 AM Jan 13, 2019 | Team Udayavani |

ಧಾರವಾಡ: ದೇಶದ ಜನರ ಜೀವನಮಟ್ಟ ಸುಧಾರಿಸುವಲ್ಲಿ ಸಂಪರ್ಕ ಕ್ಷೇತ್ರದಲ್ಲಾದ ಅತ್ಯದ್ಭುತ ಸಾಧನೆಗೆ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಇಸ್ರೋದ ಕೊಡುಗೆ ಬಹುದೊಡ್ಡದು ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ| ಎ.ಎಸ್‌. ಕಿರಣಕುಮಾರ ಹೇಳಿದರು.

Advertisement

ಲೀಲಾವತಿ ಚರಂತಿಮಠ ಪಬ್ಲಿಕ್‌ ಶಾಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದಲ್ಲಿ ಶನಿವಾರ ಜರುಗಿದ ಸ್ಪೇಸ್‌ ತತ್ವ ವಿಜ್ಞಾನ ಮೇಳದಲ್ಲಿ 15 ಯುವ ವಿಜ್ಞಾನಿಗಳ ಆಯ್ಕೆಯನ್ನು ಘೋಷಣೆ ಮಾಡಿ ಅವರು ಮಾತನಾಡಿದರು.

75ನೇ ಸ್ವಾತಂತ್ರ್ಯೋತ್ಸವ ಒಳಗಾಗಿ ಮಾನವ ಸಹಿತ ಗಗನ ನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸಿ ಸುರಕ್ಷಿತವಾಗಿ ಭೂಮಿಗೆ ತರುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವ್ಯಕ್ತಪಡಿಸಿರುವ ಆಶಯವನ್ನು ಈಡೇರಿಸುವಲ್ಲಿ ಇಸ್ರೋ ತನ್ನ ಸಾಧನೆಯನ್ನು ಮುಂದುವರಿಸಿದೆ ಎಂದರು.

ಪ್ರಕೃತಿ ವಿಕೋಪಗಳಿಂದ ಸಂಭವಿಸಬಹುದಾದ ಅಪಾರ ಪ್ರಮಾಣದ ಪ್ರಾಣ ಹಾನಿ ತಡೆಗಟ್ಟಲು ಇಸ್ರೋ ನಡೆಸಿದ ನಿರಂತರ ಸಂಶೋಧನೆಗಳಿಂದಾಗಿ ಸಾಧ್ಯವಾಗಿದೆ. ಜೊತೆಗೆ 2008ರಲ್ಲಿ ನಡೆಸಿದ ಚಂದ್ರಯಾನ-1 ಯೋಜನೆಯಿಂದ ಚಂದ್ರನ ಮೇಲೆ ನೀರಿದೆ ಎಂಬುದನ್ನು ವಿಶ್ವದಲ್ಲಿಯೇ ಮೊಟ್ಟ ಮೊದಲಿಗೆ ಗುರುತಿಸಿದ ಕೀರ್ತಿ ಇಸ್ರೋಗೆ ಸಲ್ಲುತ್ತದೆ. 2013ರಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಕೈಗೊಂಡ ಮಂಗಳಯಾನ ಯೋಜನೆ ಜಗತ್ತಿನ ಪ್ರಶಂಶೆಗೆ ಪಾತ್ರವಾಗಿದೆ ಎಂದು ಹೇಳಿದರು.

ಬಾಹ್ಯಾಕಾಶದ ಅದ್ಭುತ ಪ್ರಪಂಚದ ಅನಂತ ಕುತೂಹಲ ಹಾಗೂ ಕನಸುಗಳ ಬಗ್ಗೆ ಧಾರವಾಡದ ಲೀಲಾವತಿ ಚರಂತಿಮಠ ಪಬ್ಲಿಕ್‌ ಶಾಲೆಯು ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸಿ, ಬಾಲ ವಿಜ್ಞಾನಿಗಳ ಬಾಹ್ಯಾಕಾಶ ಪಯಣಕ್ಕೆ ದಾರಿ ತೋರಿಸುವಲ್ಲಿ ಅರುಣ ಚರಂತಿಮಠ ಅವರ ಪ್ರಯತ್ನ ಶ್ಲಾಘನೀಯವಾದದ್ದು ಎಂದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ಧಾರವಾಡ ಶಹರದ 30 ಶಾಲೆಗಳ ಬಾಲ ವಿಜ್ಞಾನಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನದ ಜಿಜ್ಞಾಸೆಯನ್ನು ಮೂಡಿಸಿ ಸೂಕ್ತ ವೇದಿಕೆಯನ್ನು ಒದಗಿಸಿದ ಲೀಲಾವತಿ ಚರಂತಿಮಠ ಪಬ್ಲಿಕ್‌ ಶಾಲೆ ಹಾಗೂ ಇಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಇಸ್ರೋದ ವಿಜ್ಞಾನಿಗಳ ಕಾರ್ಯ ಉತ್ತಮ ಬೆಳವಣಿಗೆಯಾಗಿದೆ. ಮೂಲ ವಿಜ್ಞಾನದಲ್ಲಿ ಆಸಕ್ತಿಯನ್ನು ಹೊಂದುವ ಮೂಲಕ ಸಂಶೋಧನಾ ಪ್ರವೃತ್ತಿ ಬೆಳೆಸಿಕೊಂಡು ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಶ್ರಮಿಸಬೇಕು ಎಂದು ಹೇಳಿದರು.

ಲೀಲಾವತಿ ಚರಂತಿಮಠ ಪಬ್ಲಿಕ್‌ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನ್ಯಾಯವಾದಿ ಅರುಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಎಸ್‌.ಎಂ. ಶಿವಪ್ರಸಾದ, ಇಸ್ರೋ ವಿಜ್ಞಾನಿಗಳಾದ ಬಿ.ಆರ್‌. ಗುರುಪ್ರಸಾದ, ಸುನೀಲ ಕುಲಕರ್ಣಿ, ಡಾ| ಜಾನ್‌ ಮ್ಯಾಥೀವ್‌, ಕೆ.ಆರ್‌. ಮಂಜುನಾಥ, ಪಿ.ಜಿ. ದಿವಾಕರ, ಹನುಮಂತರಾಯ ಬಳೂರಗಿ, ನಗರ ಬಿಇಒ ಎ.ಎ. ಖಾಜಿ, ಮಾಜಿ ಮೇಯರ್‌ ಶಿವು ಹಿರೇಮಠ, ನ್ಯಾಯವಾದಿ ಭೈರವ ಚರಂತಿಮಠ, ಸುಜಾತಾ ಚರಂತಿಮಠ, ಪ್ರಿ. ವೀಣಾ ಮಣಿ ಇದ್ದರು.

ಆಯ್ಕೆಯಾದ ವಿದ್ಯಾರ್ಥಿಗಳು
ಶಾಂತಿಸದನ ಶಾಲೆಯ ಅಭಿಷೇಕ ಕೆ. ಮತ್ತು ರಮೇಶ ಜಿ., ವಿದ್ಯಾಗಿರಿಯ ಜೆಎಸ್ಸೆಸ್‌ ಆಂಗ್ಲ ಮಾಧ್ಯಮ ಶಾಲೆಯ ಮಹೇಶ ಎಂ., ಲೀಲಾವತಿ ಚರಂತಿಮಠ ಪಬ್ಲಿಕ್‌ ಶಾಲೆಯ ಕೌಸ್ತುಭ ಜಿ. ಮತ್ತು ಜಾಯೀದ್‌ ಮುಲ್ಲಾ, ಸಾಯಿಪ್ರಸಾದ, ಫರಾನ್‌ ಸೈಯ್ಯದ್‌, ಜೆಎಸ್ಸೆಸ್‌ ಸೆಂಟ್ರಲ್‌ ಸ್ಕೂಲ್‌ನ ಸಂಜನಾ ಎಂ., ಬಾಲಬಳಗ ಶಾಲೆಯ ಆದಿತ್ಯ ಬಿ., ಜೆಎಸ್ಸೆಸ್‌ ಸೆಂಟ್ರಲ್‌ ಸ್ಕೂಲ್‌ನ ಶ್ರೇಯಸ್‌ ಎನ್‌.ಕೆ. ಇಸ್ರೋ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಇನ್ನೂ ಕೆಲಗೇರಿಯ ಜೆಎಸ್ಸೆಸ್‌ ಶಾಲೆಯ ಗೌರಿ ಎಚ್., ಲೀಲಾವತಿ ಚರಂತಿಮಠ ಪಬ್ಲಿಕ್‌ ಶಾಲೆಯ ಪ್ರಗತಿ ಮತ್ತು ರಿತ್ವಿಕ್‌, ವಿದ್ಯಾಗಿರಿಯ ಜೆಎಸ್ಸೆಸ್‌ ಸೆಂಟ್ರಲ್‌ ಸ್ಕೂಲ್‌ನ ಗಿರಿಜಾ, ಜೆಎಸ್ಸೆಸ್‌ ಆಂಗ್ಲ ಮಾಧ್ಯಮ ಶಾಲೆಯ ಶರಣಗೌಡ ಶ್ರೀಹರಿಕೋಟಾ ಉಪಗ್ರಹ ಉಡಾವಣೆ ವೀಕ್ಷಣೆಗೆ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next