Advertisement
ಹೌದು. ಸತತ ಮೂರು ವರ್ಷಗಳ ಮಳೆಯಿಂದಾಗಿ ಎಲ್ಲೆಡೆ ಪರಿಪೂರ್ಣ ಅಂತರ್ಜಲ ಮಟ್ಟ ಏರಿಕೆಯಾಗಿದ್ದು, ಪ್ರಸಕ್ತ ಸಾಲಿನ ಹದಭರಿತ ಮಳೆಯಿಂದಾಗಿ ಬೇಡ್ತಿಕೊಳ್ಳದ ಬೇಲಿಗಳು ಜೀವ ವೈವಿಧ್ಯತೆಯ ತಾಣವಾಗಿ ಕಂಗೊಳಿಸುತ್ತಿವೆ. ವಿವಿಧ ಜಾತಿಯ ಔಷಧಿ ಸಸ್ಯಗಳು, ಬೇಲಿಯ ಹೂಗಳು, ಗಡ್ಡೆಯಾಧಾರಿತವಾಗಿ ಬೆಳೆದು ಫಲಕೊಡುವ ಬಳ್ಳಿಗಳು ಮೈದುಂಬಿಕೊಂಡಿವೆ.
Related Articles
Advertisement
ಕಣ್ಮರೆಯಾಗುತ್ತಿವೆ ಜೈವಿಕ ಬೇಲಿ
ಕಬ್ಬು ಬೆಳೆಯ ಹಾವಳಿಯಿಂದಾಗಿ ಬೇಡ್ತಿಕೊಳ್ಳದಲ್ಲಿನ ಪಕ್ಷಿ ಮತ್ತು ಸರಿಸೃಪಗಳ ಸಂಕುಲಕ್ಕೆ ದೊಡ್ಡ ಆಸರೆಯಾಗಿದ್ದ ಜೈವಿಕ ಬೇಲಿಗಳು ಇದೀಗ ವರ್ಷದಿಂದ ವರ್ಷಕ್ಕೆ ಕಣ್ಮರೆಯಾಗುತ್ತಿವೆ. ಎಲ್ಲೆಡೆ ಸಿಮೆಂಟ್ ಕಂಬ-ತಂತಿಬೇಲಿಗಳನ್ನು ರೈತರು ಹಾಕುತ್ತಿದ್ದು, ಜೈವಿಕ ಬೇಲಿಯನ್ನು ಜೆಸಿಬಿಗಳಿಂದ ಕಿತ್ತೆಸೆಯುತ್ತಿದ್ದಾರೆ. ಜೈವಿಕ ಬೇಲಿ ಕನಿಷ್ಠ 6-10 ಅಡಿಯಷ್ಟು ಜಾಗೆಯನ್ನು ರಸ್ತೆಯ ಮಗ್ಗಲು ಹೊಲಗಳಲ್ಲಿ ತೆಗೆದುಕೊಳ್ಳುತ್ತದೆ. ಒಂದೆಡೆ ರಸ್ತೆ ಇನ್ನೊಂದೆಡೆ ಬೇಲಿ ನಡುವೆ ಮಳೆ ಹರಿಯಲು ಗಟಾರು, ಅಲ್ಲಲ್ಲಿ ಗುಂಡಿಗಳು ನೀರಿಂಗಿಸುತ್ತಿದ್ದರಿಂದಲೇ ಈ ಜೀವ ಸಂಕುಲ ಮತ್ತು ಜೈವಿಕ ಪ್ರಪಂಚ ಇಲ್ಲಿ ಕಳೆ ಕಟ್ಟುತ್ತದೆ. ಆದರೆ ಕಬ್ಬು ಬೆಳೆಯುವ ಆಸೆಗೆ ರೈತರು ಜೈವಿಕ ಬೇಲಿಗಳನ್ನು ಕಿತ್ತು ಹಾಕಿ ರಸ್ತೆಗಳಿಗೆ ಅಂಟಿಕೊಂಡೇ ಕಬ್ಬು ನಾಟಿ ಮಾಡುತ್ತಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಜೈವಿಕ ಬೇಲಿಗಳು ಕಣ್ಮರೆಯಾಗುತ್ತಿವೆ.
ಬೇಡ್ತಿಕೊಳ್ಳದಲ್ಲಿ ಅಂದಾಜು 300 ಕಿ.ಮೀ.ನಷ್ಟು ಉದ್ದದ ಜೈವಿಕ ಬೇಲಿಗಳಿವೆ. ಇಲ್ಲಿ ಪಕ್ಷಿಗಳಷ್ಟೇ ಅಲ್ಲ, ವಿವಿಧ ಔಷಧಿ ಸಸ್ಯಗಳು, ಸರಿಸೃಪಗಳು ನೆಲೆ ಕಂಡುಕೊಂಡಿವೆ. ಬೇಡ್ತಿಕೊಳ್ಳದಲ್ಲಿ ಅಂದಾಜು 8 ಸಾವಿರ ಹೆಕ್ಟೇರ್‌ನಷ್ಟು ಹಾಡು ಈ ಬೇಲಿಗಳಲ್ಲಿಯೇ ಇದೆ. ಹಳ್ಳದ ದಂಡೆ, ಹೊಲದ ರಸ್ತೆ ಅಕ್ಕಪಕ್ಕ ಇರುವ ಬೇಲಿಕಾಡು ಸದ್ಯಕ್ಕೆ ರಕ್ಷಣೆಯಾಗಬೇಕಿದೆ. ಬೇಡ್ತಿಕೊಳ್ಳದ ಜೈವಿಕ ಬೇಲಿಗಳು 50ಕ್ಕೂ ಅಧಿಕ ಪ್ರಬೇಧದ ಪಕ್ಷಿಗಳಿಗೆ ಆಹಾರ,ನೀರು, ಸಂತಾನಾಭಿವೃದ್ಧಿಗೆ ಪೂರಕ ತಾಣಗಳಾಗಿವೆ. 13 ಬಗೆಯ ಹಾವುಗಳು, ಎರಡು ಬಗೆಯ ಉಡಗಳು, 12ಕ್ಕೂ ಅಧಿಕ ಬಗೆಯ ಓತಿಕ್ಯಾತ್ ಅಷ್ಟೇಯಲ್ಲ, ಗೋಧಿ ಬಣ್ಣದ ನಾಗರ ಹಾವುಗಳಿಗೆ ಈ ಬೇಲಿಗಳೇ ಆಸರೆ.
ಕಲ್ಮಶ ನೀರು ಹಳ್ಳಕ್ಕೆ
ಇನ್ನು ಗ್ರಾಮಗಳಲ್ಲಿಯೂ ಸಿಮೆಂಟ್ ಗಟಾರು ಮತ್ತು ಶೌಚಾಲಯಗಳಿಂದ ಹೊರಬರುವ ನೀರು ಸದ್ಯಕ್ಕೆ ಗ್ರಾಮಗಳ ಮುಂದಿನ ಕೆರೆ ಮತ್ತು ಹಳ್ಳಗಳನ್ನೇ ಸೇರುತ್ತಿದೆ. ಬೇಡ್ತಿಕೊಳ್ಳದ ಗ್ರಾಮಗಳಲ್ಲಿನ ಕೊಳಚೆ ನೀರು ಪ್ರತ್ಯೇಕವಾಗಿ ಹರಿಯುತ್ತಿಲ್ಲ. ಬದಲಿಗೆ ದೊಡ್ಡ ಮಳೆಯಾದಾಗ ಎಲ್ಲ ಹೊಲಸು ನೀರು ಹೋಗಿ ಕೆರೆಯಂಗಳ ಮತ್ತು ಈ ಹಳ್ಳಗಳನ್ನೇ ಸೇರುತ್ತಿದೆ. ಅಷ್ಟೇಯಲ್ಲ ಘನತ್ಯಾಜ್ಯ, ಪ್ಲಾಸ್ಟಿಕ್,ಅಬ್ರಕ್, ವೈದ್ಯಕೀಯ ಕಸ, ಮತ್ತು ಟಾಯರ್ ಗಳು ಸೇರಿದಂತೆ ಪರಿಸರಕ್ಕೆ ಹಾನಿಯಾಗುವ ಮುರಿದ ಆಟಿಕೆ, ಗಾಜು ಸೇರಿದಂತೆ ಮನೆಯನ್ನು ಸ್ವತ್ಛಗೊಳಿಸಿದ ನಂತರ ಬರುವ ಎಲ್ಲಾ ಕಸವನ್ನು ಗ್ರಾಮೀಣರು ಈ ಹಳ್ಳಗಳಿಗೆ ತಂದು ಹಾಕುತ್ತಿದ್ದಾರೆ.
50 ಕ್ಕೂ ಹೆಚ್ಚು ಪ್ರಬೇಧದ ಪಕ್ಷಿ ಸಂಕುಲಕ್ಕೆ ಅಗತ್ಯವಾದ ಆಹಾರ, ನೀರು ಮತ್ತು ವಸತಿಯನ್ನು ಬೇಡ್ತಿಕೊಳ್ಳ ಒದಗಿಸಿಕೊಟ್ಟಿದೆ. ಇದರಲ್ಲಿ ಜೈವಿಕ ಬೇಲಿಗಳದ್ದೇ ದೊಡ್ಡ ಪಾತ್ರ. ಇಂತಹ ಬೇಲಿಗಳನ್ನು ರೈತರು ಉಳಿಸಿಕೊಳ್ಳಬೇಕು. ಇದರಿಂದ ಕೃಷಿಗೆ ಸಹಾಯಕವಾಗುತ್ತದೆ. –ಡಾ| ಪ್ರಕಾಶ ಗೌಡರ, ಪಕ್ಷಿತಜ್ಞ
ಜೈವಿಕ ಬೇಲಿಗಳ ಮಹತ್ವವನ್ನು ರೈತರಿಗೆ ಈಗಾಗಲೇ ತಿಳಿಸಿಕೊಡುತ್ತಿದ್ದೇವೆ. ಬೇಡ್ತಿಕೊಳ್ಳದ ರೈತರ ಹೊಲದ ದಾರಿಗಳು ಮತ್ತು ಹಳ್ಳಕೊಳ್ಳದ ಇಕ್ಕೆಲುಗಳನ್ನು ರಕ್ಷಣೆ ಮಾಡಿಕೊಳ್ಳುವ ಹೊಣೆ ಇಲ್ಲಿನ ರೈತರ ಮೇಲಿದೆ. –ಪಾರ್ಶ್ವನಾಥ ಪಾರಿಶ್ವಾಡ, ಯುವ ರೈತ
ಬಸವರಾಜ ಹೊಂಗಲ್