Advertisement

ಹಿಂದುತ್ವ ಒಪ್ಪಿದರೆ ಕೈ ಪರವೂ ಸಂಘ ಪ್ರಚಾರ

05:02 PM Sep 05, 2022 | Team Udayavani |

ಧಾರವಾಡ: ಆರೆಸ್ಸೆಸ್‌ ವೈಚಾರಿಕ ವಿಚಾರಗಳಿಗೆ ಪೂರಕವಾಗಿ ಇರುವ ಬಿಜೆಪಿ ಪರ ಸಂಘವು ಸದಾ ನಿಲ್ಲುತ್ತದೆ. ಬಿಜೆಪಿ ಜತೆ ಸಂಘದ ವೈಚಾರಿಕ ಸಂಬಂಧವಿದ್ದು, ಈ ನಿಲುವನ್ನು ಕಾಂಗ್ರೆಸ್‌ ಪಕ್ಷ ತಾಳಿದರೂ ಅದರ ಪರ ಸಂಘ ನಿಲ್ಲುತ್ತದೆ ಎಂದು ಆರೆಸ್ಸೆಸ್‌ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಪ್ರಚಾರ ಪ್ರಮುಖ ಅರುಣ ಕುಮಾರ ಹೇಳಿದರು.

Advertisement

ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲೆಯ ಪ್ರಚಾರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಹಿಂದುತ್ವ ಸಿದ್ಧಾಂತ ಒಪ್ಪಿಕೊಳ್ಳುವುದಾಗಿ ಘೋಷಿಸಿದರೆ ಕಾಂಗ್ರೆಸ್‌ ಪರವಾಗಿಯೂ ಪ್ರಚಾರ ಮಾಡಲು ಸಂಘ ಸಿದ್ಧವಿದೆ. ಬಿಜೆಪಿ ಹಿಂದುತ್ವ ಸಿದ್ಧಾಂತ ಒಪ್ಪಿಕೊಂಡಿದ್ದರಿಂದ ನಮ್ಮ ಕಾರ್ಯಕರ್ತರು ಬಿಜೆಪಿ ಪರ ಪ್ರಚಾರ ಮಾಡುತ್ತಾರೆ. ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿಯೂ ಕೆಲ ಕಾರ್ಯಕರ್ತರು ಪ್ರಚಾರ ಮಾಡಿದ ಉದಾಹರಣೆಗಳಿವೆ. ಇದಕ್ಕೆ ಸಂಘದಲ್ಲಿ ಯಾವುದೇ ವಿರೋಧವಿಲ್ಲ ಎಂದರು.

ಹಿಂದೂ ಸಂಸ್ಕೃತಿಯು ಬಗ್ಗಿಸಿದಾಗ ಬಗ್ಗಿದ್ದು, ಈ ಕಾರಣದಿಂದಲೇ ಸಾವಿರಾರು ವರ್ಷಗಳಿಂದ ಜೀವಂತವಾಗಿದೆ. ಈ ಮಣ್ಣಿನ ಸತ್ವ, ಕಂಪು ಹಾಗೂ ಸಂಸ್ಕೃತಿಯ ಆಧಾರದ ಮೇಲೆಯೇ ವಿಕಾಸ ಆಗಬೇಕು. ಹೀಗಾಗಿ ಭಾರತ ಭಾರತವಾಗಿಯೇ ಬೆಳೆಯುವ ಮೂಲಕ ಜಗತ್ತಿಗೆ ಬೆಳಕು ನೀಡಬೇಕು. ಸಾಮಾಜಿಕ, ಆರ್ಥಿಕ, ನೈತಿಕ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಭಾರತ ವಿಶ್ವಗುರುವಾಗಬೇಕೆಂಬುದೇ ಸಂಘದ ಆಶಯ. ಇನ್ನು ಕೆಲ ಜನ ಚಡ್ಡಿಯಿಂದಲೇ ಸಂಘ ಗುರುತಿಸಿದ್ದು, ಅವಮಾನವೇ ಅಲ್ಲ. ಅಂತವರಿಗೆ ಚಡ್ಡಿಯನ್ನೂ ಹಾಕಿದ್ದೇವೆ ಎಂದು ಹೇಳಿದರು.

ಕಳೆದ ಮೂವತ್ತು ವರ್ಷಗಳ ಹಿಂದೆ ಪತ್ರಿಕೋದ್ಯಮ ಮತ್ತು ಪತ್ರಕರ್ತರು ಹಿಂದೂ ವಿರೋಧಿ ನೀತಿ ಹೊಂದಿದ್ದರು. ಆದರೆ, ಕಾಲ ಬದಲಾದಂತೆ ಅದು ಬದಲಾಗಿದೆ. ಪ್ರಸ್ತುತದಲ್ಲಿ ಶೇ.90 ಪತ್ರಕರ್ತರು ಹಿಂದೂ ಪರ ನೀತಿ ಹೊಂದಿದ್ದಾರೆ. ಇನ್ನೂ ಕೇವಲ ಶೇ.10 ಪತ್ರಕರ್ತರು ಮಾತ್ರ ಅದೇ ನೀತಿ ಮುಂದುವರಿಸಿದ್ದು, ಅದು ಕೂಡ ಬದಲಾಗಲಿದೆ ಎಂದರು.

Advertisement

ಜಾತ್ಯತೀತರು ಎಂಬುದಾಗಿ ಹೇಳಿಕೊಂಡು ತಿರುಗುವ ನಾಯಕರೇ, ಜಾತಿಯನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ದೇಶಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ನಡೆಸಿದ್ದಾರೆ. ಅವರ ಪ್ರಯತ್ನಗಳು ವಿಫಲವಾಗಿ ಎಲ್ಲರೂ ಒಂದಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಮುನ್ನಡೆ ಯುತ್ತಿದ್ದಾರೆ. ಇದುವೇ ಹೊಸ ಭಾರತದ ಪರಿಕಲ್ಪನೆಯಾಗಿದೆ ಎಂದು ಹೇಳಿದರು.

ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿದ್ದ ಹಲ್ಲೆಗಳು ಕಡಿಮೆಯಾಗಿವೆ. ಕಾಶ್ಮೀರ ಸೇರಿದಂತೆ ವಿವಿಧೆಡೆ ಏಕಕಾಲಕ್ಕೆ ಹತ್ತಾರು ಹಿಂದೂಗಳನ್ನು ಹತ್ಯೆ ಮಾಡಲಾಗುತ್ತಿತ್ತು. ಕಳೆದ 8-10 ವರ್ಷಗಳಲ್ಲಿ ಇಂತಹ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ. ಮಾನವ ವಿರೋಧಿ ಸಂಘಟನೆಗಳು ತಮ್ಮ ಅಸ್ತಿತ್ವ ತೋರಿಸುವುದಕ್ಕಾಗಿ ಆಗಾಗ ಹಿಂದೂಗಳ ಮೇಲೆ ಹಲ್ಲೆ ನಡೆಸುತ್ತಿವೆ. ಆದರೆ ಎಲ್ಲ ಹಿಂದೂಗಳಿಗೆ ರಕ್ಷಣೆ ನೀಡುವುದು ಅವಶ್ಯಕ ಎಂದರು.

2023ರ ವಿಧಾನಸಭೆ ಚುನಾವಣೆ ಕುರಿತು ಆರೆಸ್ಸೆಸ್‌ ಸಮೀಕ್ಷೆ ನಡೆಸಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಸಂಘ ಯಾವುದೇ ಸಮೀಕ್ಷೆ ನಡೆಸಿಲ್ಲ. ಬಿಜೆಪಿಯ ವರ್ಚಸ್ಸು ಹೆಚ್ಚಿಸುವಂತೆ ಬಿಜೆಪಿ ಮುಖಂಡರು ಸಂಘಕ್ಕೆ ಮನವಿ ಮಾಡಿಕೊಂಡಿದ್ದಾರೆ ಎಂಬುದರಲ್ಲಿ ಹುರುಳಿಲ್ಲ ಎಂದು ಹೇಳಿದರು.

ಕುಟುಂಬ ರಾಜಕಾರಣಕ್ಕೆ ಆರೆಸ್ಸೆಸ್‌ ವಿರೋಧವಿದೆ. ಆದರೆ ಒಮ್ಮಿಂದೊಮ್ಮೆಲೇ ಕುಟುಂಬ ರಾಜಕಾರಣ ನಿಲ್ಲಿಸಲು ಸಾಧ್ಯವಿಲ್ಲ. ಅದಕ್ಕೆ ಸಮಯ ಬೇಕು. ಖಂಡಿತವಾಗಿಯೂ ವಂಶಾಡಳಿತ ಮರೆಯಾಗುವುದು. ಒಂದೇ ದಿನದಲ್ಲಿ ಕಪ್ಪು ಇರುವುದನ್ನು ಬಿಳಿ ಮಾಡಲಾಗುವುದಿಲ್ಲ. ಅದು ಹಂತ ಹಂತವಾಗಿ ಶ್ವೇತ ಬಣ್ಣಕ್ಕೆ ಬಂದೇ ಬರುತ್ತದೆ. ಸಂಘ ಪರಿಶುದ್ಧವಿದ್ದು, ಭ್ರಷ್ಟಾಚಾರ ಯಾರೇ ಮಾಡಿದರೂ ತಪ್ಪು. ಬಿಜೆಪಿಯವರು ಭ್ರಷ್ಟಾಚಾರ ಮಾಡುತ್ತಿದ್ದರೆ ಸಂಘ ಅದನ್ನು ಬೆಂಬಲಿಸುವುದಿಲ್ಲ. ಯಾರೇ ಭ್ರಷ್ಟಾಚಾರದಲ್ಲಿ ಶಾಮೀಲಾದರೂ ಕ್ರಮ ಅಗತ್ಯ. ಅರುಣಕುಮಾರ, ಆರೆಸ್ಸೆಸ್‌ ಪ್ರಚಾರ ಪ್ರಮುಖರು

ಕಾಕತಾಳೀಯವೇ ಹೊರತು ರಾಜಕೀಯ ಪ್ರೇರಿತವಲ್ಲ

ಹು-ಧಾ ಮಹಾನಗರ ಪಾಲಿಕೆ ಮಾಲೀಕತ್ವದ ಈದ್ಗಾ ಮೈದಾನದಲ್ಲಿ ಒಂದು ಕೋಮಿನವರಿಗೆ ಅಷ್ಟೇ ಪ್ರಾರ್ಥನೆಗೆ ಅವಕಾಶ ಯಾಕೆ? ಇದು ಇನ್ನೊಂದು ಕೋಮಿನವರಿಗೆ ಅನ್ಯಾಯ ಮಾಡಿದಂತೆ. ಹೀಗಾಗಿ ಗಣೇಶೋತ್ಸವ ಆಚರಣೆ ಮೂಲಕ ಹಿಂದೂಗಳ ಭಾವನೆಗೆ ಬೆಲೆ ಸಿಕ್ಕಂತಾಗಿದ್ದು, ಖುಷಿ ತಂದಿದೆ. ಚುನಾವಣೆ ಸನ್ನಿಹಿತವಾಗಿರುವ ಈ ಸಮಯದಲ್ಲಿ ಇದು ಆಗಿದ್ದು, ಕಾಕತಾಳೀಯವೇ ಹೊರತು ರಾಜಕೀಯ ಪ್ರೇರಿತವಲ್ಲ. ಕಾಗೆ ಕುಳಿತುಕೊಳ್ಳುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸಾಟಿಯಾಗಿದೆ ಅಷ್ಟೇ ಎಂದು ಅರುಣಕುಮಾರ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಕಾಲಮಿತಿ ನಿಗದಿಪಡಿಸಲಾಗದು

ಅಖಂಡ ಭಾರತದ ಪರಿಕಲ್ಪನೆ ಸಂಘಕ್ಕಿದ್ದು, ಅದಕ್ಕೆ ಕಾಲವೂ ಕೂಡಿ ಬರಲಿದೆ. ಆದರೆ ಇದಕ್ಕೊಂದು ಕಾಲಮಿತಿ ನಿಗದಿಪಡಿಸಲು ಆಗದು. ಆದರೆ ಈ ಕಾರ್ಯದತ್ತ ಕಾರ್ಯವಂತೂ ಸಾಗಿದೆ. ಹೀಗಾಗಿ ಅಖಂಡ ಭಾರತ ನಿರ್ಮಾಣಕ್ಕೆ ಸಮಯ ಕೂಡಿ ಬರಲಿದೆ ಎಂಬ ವಿಶ್ವಾಸ ಸಂಘಕ್ಕಿದೆ ಎಂದು ಅರುಣುಕುಮಾರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next