ಧಾರವಾಡ: ವಿಶ್ವದಲ್ಲಿ ಭಾರತಕ್ಕೆ ಬೆಲೆ ಇರುವುದೇ ಸಂಸ್ಕೃತಿಯಿಂದ. ಇಂತಹ ಗೌರವ ಉಳಿಸಿಕೊಳ್ಳಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದ್ದು, ಯುವ ಸಮುದಾಯ ಈ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದು ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು. ನಗರದ ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ಗುರುವಾರ ಜಂಬೂ ಸವಾರಿ ಮೆರವಣಿಗೆ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
10 ಸಾವಿರ ವರ್ಷಗಳಿಂದ ಆದಿಶಕ್ತಿಯ ಆರಾಧನೆ ನಡೆದುಕೊಂಡು ಬಂದಿದೆ. ಈ ಪ್ರಯತ್ನದ ಭಾಗವಾಗಿ 15 ವರ್ಷಗಳಿಂದ ಧಾರವಾಡದಲ್ಲಿ ದಸರಾ ಜಂಬೂ ಸವಾರಿ ಆಯೋಜಿಸುತ್ತಿರುವುದು ನಗರಕ್ಕೆ ಹೊಸ ಮೆರಗು ನೀಡಿದೆ. ಈ ಕಾರ್ಯ ನಿರಂತರ ಮತ್ತು ನಿರ್ವಿಘ್ನವಾಗಿ ಸಾಗಿ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿ ಎಂದರು. ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ಸಂಸ್ಕೃತಿ ಎಂಬುದು ಭಾಷೆ, ಸಾಧನೆ, ಭಾವ ಮತ್ತಿತರ ಜೀವನದ ಸೊಬಗು ಹೆಚ್ಚಿಸುವ ಎಲ್ಲವನ್ನೂ ಒಳಗೊಂಡಿದೆ. ಹಬ್ಬ-ಹರಿದಿನಗಳನ್ನು ಎಲ್ಲರೂ ಸೇರಿ ಆಚರಿಸುವ ಮೂಲಕ ತಲೆತಲಾಂತರಗಳಿಂದ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬಂದ ಹಿರಿಮೆ ನಮ್ಮದು. ತಮ್ಮ ಜೀವನಾನುಭವದ ಮೂಸೆಯಲ್ಲಿ ಮೂಡಿಬಂದ ಜಾನಪದ ಪ್ರಾಕಾರ ವಿಶಿಷ್ಟ ಸಾಹಿತ್ಯವಾಗಿದೆ ಎಂದರು. ಭಾಷೆ, ಸಂಸ್ಕೃತಿ, ಪರಂಪರೆಯನ್ನು ಮರೆತು ಸಾಗುತ್ತಿದ್ದೇವೆ ಎಂಬುದರ ಅರಿವೂ ನಮಗಿಲ್ಲದಂತಾಗಿದೆ. ಹಣವಂತರನ್ನು ಉತ್ತೇಜಿಸುವ ಮುಖಾಂತರ ನಿಸ್ವಾರ್ಥ ಸಮಾಜ ಸೇವಕರನ್ನು ಗುರುತಿಸಲಾರದಷ್ಟು ಸ್ವಾರ್ಥಿಗಳಾಗುತ್ತಿದ್ದೇವೆ. ಇಂತಹ ಮನೋಸ್ಥಿತಿ ಬದಲಾಗಬೇಕು ಎಂದರು.
ಬೆಳಗಾವಿ ಮುಕ್ತಿಮಠದ ಷಟಸ್ಥಳ ಬ್ರಹ್ಮ ಶಿವಾಚಾರ್ಯ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಮಾತನಾಡಿ, ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆ, ನಾಡು-ನುಡಿಯ ಹಿರಿಮೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಯತ್ನ ಮಾಡಬೇಕು ಎಂದರು.
ಹಿರೇಮುನವಳ್ಳಿಯ ಶಂಭುಲಿಂಗ ಸ್ವಾಮೀಜಿ, ಶಿವಯೋಗಿ ಮಹಾಸ್ವಾಮಿಗಳು, ಫಂಡರಪುರ ಅಜರೇಕರ ಮಾವುಲಿಯ ಗುರುವರ್ಯ ಹರಿದಾಸ ರಾಮಬಾವು ಬೋರಾಠೆ, ಆನಂದಿ ಗುರುಗಳು ಸಮ್ಮುಖ ವಹಿಸಿದ್ದರು. ಏಷ್ಯನ್ ಡಾಕೂಟದಲ್ಲಿ ಪದಕ ಪಡೆದ ಕ್ರೀಡಾಪಟು ಮಲಪ್ರಭಾ ಜಾಧವಗೆ 10 ಸಾವಿರ ನಗದು ಸಹಿತ ದಸರಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಶಿಮರದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಗಣಪತರಾವ್ ಮುಂಜಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ನಾರಾಯಣ ಕೋಪರ್ಡೆ, ರಾಜೇಂದ್ರ ಕಪಲಿ, ಯಶವಂತರಾವ್ ಕದಂ, ಮಲಪ್ರಭಾ ಜಾಧವ ಅವರ ತರಬೇತುದಾರರಾದ ಎಂ.ಎನ್. ತ್ರಿವೇಣಿ ಇದ್ದರು.