Advertisement

Dharwad: ನೂತನ ಶಾಸಕರೆದುರು ಸಾಲು ಸಾಲು ಸವಾಲು

03:59 PM May 16, 2023 | Team Udayavani |

ಅಳ್ನಾವರ: ತೀರಾ ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳನ್ನೊಳಗೊಂಡ ಮತಕ್ಷೇತ್ರದ ಸಾಲು ಸಾಲು ಸವಾಲುಗಳು ನೂತನ ಶಾಸಕ ಸಂತೋಷ್‌ ಲಾಡ್‌ ಎದುರಿದೆ. ಕೆಲಸ ಮಾಡುವ ಹುಮ್ಮಸ್ಸಿನಿಂದ ಭಾರೀ ಬಹುಮತದಿಂದ ಆರಿಸಿ ಬಂದ ಲಾಡ್‌ ಅವರ ಮೇಲೆ ಜನರು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಕಾಳಿ ನದಿ ನೀರು ತರುವ ಯೋಜನೆ ಸಾಕಾರಗೊಳಿಸಿದ ಲಾಡ್‌ ಅವರು ಈ ಭಾಗದ ಜನರ ಬದುಕು ಹಸನಗೊಳಿಸಲು ದಿಟ್ಟ ಹೆಜ್ಜೆ ಹಾಕಬೇಕಿದೆ.

Advertisement

ಹೊಸ ತಾಲೂಕು ಕೇಂದ್ರ ಘೋಷಣೆ ಆದ ಪಟ್ಟಣದಲ್ಲಿ ತಾಲೂಕು ಕಚೇರಿಗೆ ಬೇಕಾದ ನಿವೇಶನ ಗುರುತಿಸಬೇಕು. ಹೊಸ ಕಟ್ಟಡ ಕಟ್ಟಿ ತಾಲೂಕು ಕಚೇರಿಗಳನ್ನು ಒಂದೇ ಸೂರಿನಡಿ ತರುವ ಗುರುತರ ಜವಾಬ್ದಾರಿ ನೂತನ ಶಾಸಕರ ಹೆಗಲ ಮೇಲಿದೆ. ಅದನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂದು ಜನರು ಕಾತುರದಿಂದ ಕಾಯುತ್ತಿದ್ದಾರೆ.

ಕ್ರೀಡಾಳುಗಳ ಒತ್ತಾಸೆ: ತಾಲೂಕು ಮಟ್ಟದ ಕ್ರೀಡಾಂಗಣ ಮೂಲಸೌಲಭ್ಯಗಳ ಕೊರತೆಯಿಂದ ಕ್ರೀಡಾಪಟುಗಳಿಗೆ ಸಾಕಷ್ಟು ತೊಂದರೆ ಆಗಿದೆ. 400 ಮೀಟರ್‌ ರನ್ನಿಂಗ್‌  ಟ್ರ್ಯಾಕ್ ನಿರ್ಮಿಸಬೇಕು. ಜೊತೆಗೆ ಕ್ರೀಡಾಂಗಣಕ್ಕೆ ಅಗತ್ಯ ಸೌಲಭ್ಯ‌ ಬೇಕು. ಪಟ್ಟಣದಲ್ಲಿ ಒಳಾಂಗಣ ಕ್ರೀಡಾಂಗಣ ಬೇಕು. ತಾಲೂಕು ಮಟ್ಟದ ಕ್ರೀಡಾಂಗಣದಿಂದ ಮುಖ್ಯರಸ್ತೆಗೆ ಸೇರುವ ರಸ್ತೆಯನ್ನು
ದ್ವಿಪಥ ರಸ್ತೆಯನ್ನಾಗಿಸಿ ವಿದ್ಯುತ್‌ ದೀಪ ಅಳವಡಿಸಬೇಕು ಎಂಬುದು ಕ್ರೀಡಾಳುಗಳ ಒತ್ತಾಸೆಯಾಗಿದೆ.

ಇನ್ನೂ ಹೆಚ್ಚಿನ ಕಾಲೇಜುಗಳು ಬೇಕು ಎಂಬ ಕೊರಗು ವಿದ್ಯಾರ್ಥಿಗಳನ್ನು ಕಾಡತೊಡಗಿದೆ. ವಿಶೇಷವಾಗಿ ಕಾಡಂಚಿನಲ್ಲಿ ವಾಸವಿರುವ ವಿದ್ಯಾರ್ಥಿನಿಯರಿಗೆ ಅನುಕೂಲ ಆಗಲು ಮಹಿಳಾ ಪಾಲಿಟೆಕ್ನಿಕ್‌ ಕಾಲೇಜು ಬರಬೇಕು. ತಾಂತ್ರಿಕ ವಿಜ್ಞಾನ ಕಾಲೇಜು ಸೇರಿದಂತೆ ಅರಣ್ಯ ಪ್ರದೇಶದಲ್ಲಿರುವ ಈ ಭಾಗದಲ್ಲಿ ಅರಣ್ಯ ವಿಜ್ಞಾನ ಕಾಲೇಜು ಬರಬೇಕು ಎಂಬ ಬೇಡಿಕೆ  ಬಲವಾಗಿ ಕೇಳಿಬಂದಿದೆ. ಈ ವಿಭಾಗ ಇಲ್ಲಿಂದ ತೀರಾ ಸನಿಹದಲ್ಲಿರುವ ಕೃಷಿ ವಿವಿ ವ್ಯಾಪ್ತಿಯಲ್ಲಿ ಬರುತ್ತದೆ ಹಾಗೂ ಅಳ್ನಾವರ ಭಾಗ ಸಂಪೂರ್ಣ ಕಾಡಂಚಿನಲ್ಲಿದೆ.

ಶಿರಸಿಯಲ್ಲಿರುವಂತೆ ಇಲ್ಲಿಯೂ ಕೂಡಾ ಅರಣ್ಯ ಕಾಲೇಜು ಬೇಕು ಎಂಬ ದಿಧೀರ್ಘ‌ ಕಾಲದ ಬೇಡಿಕೆ ಇದೆ. ಮೆಟ್ರಿಕ್‌ ಪೂರ್ವ ಸಾಕಷ್ಟು ವಸತಿ ನಿಲಯಗಳು ಇಲ್ಲಿವೆ. ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ ಶೀಘ್ರವೇ ಹಾಸ್ಟೇಲ್‌ ಬೇಕಿದೆ. ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ ಲಾಡ್‌ ಅವರು ಹಿಂದುಳಿದ ಕ್ಷೇತ್ರದ
ಅಭ್ಯುದಯದಲ್ಲಿ ವಿಶಿಷ್ಟ ಕೊಡುಗೆ ನೀಡಲಿ ಎಂಬ ಆಶಯ ಜನರದ್ದಾಗಿದೆ.

Advertisement

ಆರೋಗ್ಯ ಭಾಗ್ಯಕ್ಕೆ ಕಾದಿರುವ ಜನ
ಅಳ್ನಾವರ ತಾಲೂಕು ಕೇಂದ್ರವಾದರೂ ಇಲ್ಲಿನ ಜನತೆಗೆ ಆರೋಗ್ಯ ಸೇವೆ ಸರಿಯಾಗಿ ದೊರೆಯುತ್ತಿಲ್ಲ ಎಂಬ ಅಳಲು ಬಹಳ
ವರ್ಷದಿಂದ ಕೇಳಿಬರುತ್ತಿದೆ. ನೂತನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ತಾಲೂಕಾಸ್ಪತ್ರೆ ಮಾಡಲಿ ಎಂಬ ಬಲವಾದ ಬೇಡಿಕೆ ಇದೆ. ಇನ್ನೂ ತಾಲ್ಲೂಕಿನ ದೊಡ್ಡ ಗ್ರಾಮವಾದ
ಹೊನ್ನಾಪುರ ಭಾಗದ ಜನರಿಗೆ ಆರೋಗ್ಯ ಸೇವೆ ದೊರೆಯಲು ಅಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಿ ದೊರಕಿಸಿಕೊಡಬೇಕು ಎಂಬ ಬೇಡಿಕೆ ಕೂಡಾ ಇದೆ.

ಆಗಬೇಕಾದ ಕೆಲಸಗಳು:

*ಅಳ್ನಾವರದ ಸಾಲು ಮರದ ತಿಮ್ಮಕ್ಕ ಉದ್ಯಾನ ಸುಧಾರಣೆ

*ಅಳ್ನಾವರ ಕ್ರಾಸ್‌ ಬಳಿ ಹಾಗೂ ಅರವಟಗಿಯಲ್ಲಿ ತಂಗುದಾಣ
*ಗೌಳಿಗರ ದಡ್ಡಿಗಳು ಇರುವಲ್ಲಿ ಅಂಗನವಾಡಿ-ಸರ್ಕಾರಿ ಪ್ರಾಥಮಿಕ ಶಾಲೆ ಆರಂಭಿಸಲು ಕ್ರಮ
*ಬೆಣಚಿ ಗ್ರಾಮದ ಸ್ಮಶಾನ ರಸ್ತೆಯಲ್ಲಿ ಸೇತುವೆ ನಿರ್ಮಾಣ
*ಬಾಲಗೇರಿ ಗ್ರಾಮದ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ
*10 ಕಿಮೀಯಷ್ಟು ಹೂಲಿಕೇರಿಇಂದಿರಮ್ಮನ ಕೆರೆ ಎಡ-ಬಲ ದಂಡೆ ಕಾಲುವೆ
*ತಾಲೂಕಿನ ಎಲ್ಲ ಕೆರೆಗಳ ಹೊಳೆತ್ತುವಿಕೆ, ಅಳ್ನಾವರ ಊರ  ಕೆರೆ ಸಮಗ್ರ ಅಭಿವೃದ್ಧಿ
*ಡೋರಿಯಲ್ಲಿ ಸಂಗೊಳ್ಳಿ ರಾಯಣ್ಣ ನಿತ್ಯ ಈಜುತ್ತಿದ್ದ ಪುಟ್ಟ ಹೊಂಡವಿದ್ದು, ಸ್ಥಳದ ಸಮಗ್ರ ಅಭಿವೃದ್ಧಿ ಕೈಂಕರ್ಯ
*ಅರವಟಗಿಯಲ್ಲಿ ಸಂಗೊಳ್ಳಿ ರಾಯಣ್ಣ ಕಮಾನು ನಿರ್ಮಾಣ
*ನಿರುದ್ಯೋಗಿ ಯುವಕರು, ಮಹಿಳೆಯರಿಗೆ ಉದ್ಯೋಗ  ಅವಕಾಶ ಕಲ್ಪಿಸುವ ಯೋಜನೆ

*ಸುಜಾತಾ ಸುಣಗಾರ

Advertisement

Udayavani is now on Telegram. Click here to join our channel and stay updated with the latest news.

Next