Advertisement

ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ದಶಮಾನೋತ್ಸವ

05:22 PM Mar 14, 2022 | Team Udayavani |

ಧಾರವಾಡ: ಐಎಎಸ್‌, ಐಪಿಎಸ್‌ನಂತಹ ದೊಡ್ಡ ಹುದ್ದೆಗಳಲ್ಲಿ ತಮ್ಮ ಮಕ್ಕಳನ್ನು ನೋಡ ಬಯಸುವ ಪೋಷಕರು, ಮಕ್ಕಳನ್ನು ವಿಜ್ಞಾನಿಗಳನ್ನಾಗಿ ಮಾಡಬೇಕೆಂಬ ವಿಚಾರವನ್ನೇ ಮಾಡಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ಕವಿವಿ ಆವರಣದ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ರವಿವಾರ ಹಮ್ಮಿಕೊಂಡಿದ್ದ ವಿಜ್ಞಾನ ಕೇಂದ್ರದ ದಶಮಾನೋತ್ಸವ ಹಾಗೂ ಶಕ್ತಿ ಸಂರಕ್ಷಣೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪೋಷಕರು ಮಕ್ಕಳನ್ನು ವಿಜ್ಞಾನಿ ಮಾಡಲು ಮುಂದಾಗಬೇಕು. ಮಕ್ಕಳು ವಿಜ್ಞಾನಿಗಳಾಗಿ ಸಮಾಜಕ್ಕೆ, ದೇಶಕ್ಕೆ ತಮ್ಮ ಸಂಶೋಧನೆ, ಆವಿಷ್ಕಾರಗಳ ಮೂಲಕ ಕೊಡುಗೆ ನೀಡುವಂತವರಾಗಬೇಕು ಎಂದರು.

ಧಾರವಾಡಕ್ಕೆ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡುವಲ್ಲಿ ನನ್ನಂತಹ ಹಲವಾರು ಜನರ ಶ್ರಮವಿದೆ. ಕಳೆದ ಹತ್ತು ವರ್ಷಗಳಿಂದ ವಿಜ್ಞಾನ ಕೇಂದ್ರ ಸಾಕಷ್ಟು ಬೆಳವಣಿಗೆ ಕಂಡಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ವಿಜ್ಞಾನ ಕೇಂದ್ರ ಬೆಳೆಯಬೇಕು. ಆ ನಿಟ್ಟಿನಲ್ಲಿ ಇಲ್ಲಿನ ಶಿಕ್ಷಕರು, ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು ಸೇರಿ ಸಂಶೋಧನೆ, ಆವಿಷ್ಕಾರಗಳನ್ನು ಮಾಡಿ ರಾಷ್ಟ್ರಮಟ್ಟದಲ್ಲಿ ಮಾದರಿ ಕೇಂದ್ರವಾಗಬೇಕು ಎಂದು ಹೇಳಿದರು.

ರೈತ ವಿಜ್ಞಾನಿ ಡಾ| ಅಬ್ದುಲ್‌ ಖಾದರ್‌ ನಡಕಟ್ಟಿನ್‌ ಮಾತನಾಡಿ, ಒಂದೇ ಕೂರಿಗೆಯಲ್ಲಿ ಸಾಸಿವೆ ಕಾಳುಗಳಿಂದ ಹಿಡಿದು ಎಲ್ಲ ರೀತಿಯ ಕಾಳುಗಳನ್ನು ಬಿತ್ತನೆ ಮಾಡಬಹುದು. ಇದು ನಡಕಟ್ಟಿನ್‌ ಕೂರಿಗೆ ವಿಶೇಷತೆ. ಇಂತಹ ಕೂರಿಗೆಯನ್ನು ಜಗತ್ತಿನಲ್ಲಿ ಯಾರೂ ನಿರ್ಮಿಸಿಲ್ಲ. ಅಂತಹ ಕೂರಿಗೆ ನಮ್ಮಲ್ಲಿ ತಯಾರಾಗುತ್ತದೆ. ಈವರೆಗೆ ಕೃಷಿಯಲ್ಲಿ ಒಟ್ಟು 24 ಆವಿಷ್ಕಾರಗಳನ್ನು ಮಾಡಿದ್ದೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಡಾ| ಕೆ.ಬಿ. ಗುಡಸಿ ಮಾತನಾಡಿ, ರೈತ ವಿಜ್ಞಾನಿ ಡಾ| ಅಬ್ದುಲ್‌ ಖಾದರ್‌ ನಡಕಟ್ಟಿನ್‌ ಅವರು ಆವಿಷ್ಕಾರ ಮಾಡಿದ ಕೂರಿಗೆ ಹಾಗೂ ಇತರೆ ಕೃಷಿ ಯಂತ್ರೋಪಕರಣಗಳನ್ನು ನಮಗೆ ಕೊಡಬೇಕು. ನಾವು ಅವುಗಳನ್ನು ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗ್ಯಾಲರಿ ನಿರ್ಮಿಸಿ ಪ್ರದರ್ಶನಕ್ಕೆ ಇಡುತ್ತೇವೆ. ಇದರಿಂದ ಇಲ್ಲಿಗೆ ಬರುವ ಲಕ್ಷಾಂತರ ಜನರಿಗೆ, ವಿದ್ಯಾರ್ಥಿಗಳಿಗೆ ಪ್ರೇರಣೆ ದೊರೆಯುತ್ತದೆ ಎಂದರು. ಸಭಾಪತಿ ಬಸವರಾಜ ಹೊರಟ್ಟಿ, ಪದ್ಮಶ್ರೀ ಪುರಸ್ಕೃತ ಡಾ|ಅಬ್ದುಲ್‌ ಖಾದರ್‌ ನಡಕಟ್ಟಿನ ಅವರನ್ನು ಸನ್ಮಾನಿಸಲಾಯಿತು. ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ವಿ.ಡಿ. ಬೋಳಿಶೆಟ್ಟಿ ಪ್ರಾಸ್ತಾವಿಕ
ಮಾತನಾಡಿದರು. ಡಾ| ಸುರೇಶ ಜಂಗಮಶೆಟ್ಟಿ ಸೇರಿದಂತೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು. ವಿಶಾಲಾಕ್ಷಿ ಎಸ್‌. ಜೆ. ನಿರೂಪಿಸಿದರು. ಸಿ.ಎಫ್‌. ಚಂಡೂರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next