Advertisement
ಹೌದು, ಸಾಮಾನ್ಯವಾಗಿ ಕೈದಿಗಳು ಎಂದರೆ ಅವರು ಜೈಲಿನ ನಾಲ್ಕು ಗೋಡೆಗಳ ಮಧ್ಯದಲ್ಲಿ ಇರುತ್ತಾರೆ. ಅವರ ಕೈಗಳಿಗೆ ಸರಪಳಿ ಹಾಕಿ ಹೊರಗೆ ತರುತ್ತಾರೆ ಎಂಬ ಭಾವನೆ ಇರುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಧಾರವಾಡದ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳ ಮನಃ ಪರಿವರ್ತನೆ ಮತ್ತು ಅವರಿಗೆ ಸನ್ನಡತೆಗೆ ಅವಕಾಶ ಮಾಡಿ ಕೊಡಲಾಗಿದ್ದು, ಕಾರಾಗೃಹದಲ್ಲಿನ 20ಕ್ಕೂ ಹೆಚ್ಚು ಕೈದಿಗಳಿಗೆ ಕೃಷಿ ಮಾಡಲು ಅವಕಾಶ ನೀಡಲಾಗಿದೆ. ಇವರೆಲ್ಲ ಸೇರಿ ಧಾರವಾಡ ಜೈಲಿನ ಒಳಗೆ ಮತ್ತು ಹೊರಗಡೆ ಇರುವ ಬಂಧೀಖಾನೆ ಇಲಾಖೆ ವ್ಯಾಪ್ತಿಯಲ್ಲಿನ ಭೂಮಿಯಲ್ಲಿ ಕೃಷಿಕರಾಗಿ ಕೆಲಸ ಮಾಡುತ್ತಿದ್ದಾರೆ.
Related Articles
Advertisement
ಕೈದಿಗಳ ಕೃಷಿ ಹೇಗೆ?ಧಾರವಾಡ ಕಾರಾಗೃಹದ್ದು ಒಟ್ಟು 54 ಎಕರೆ ಪ್ರದೇಶವಿದೆ. ಸದ್ಯಕ್ಕೆ ಜೈಲಿನಲ್ಲಿ 618 ಕೈದಿಗಳು ಇದ್ದಾರೆ. ಈ ಪೈಕಿ ಕೃಷಿ ಕುಟುಂಬಗಳಿಂದ ಬಂದವರು 50ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಇವರೆಲ್ಲರೂ ಜೈಲಿನಲ್ಲಿ ಸನ್ನಡತೆ ಕೈದಿಗಳ ಪಟ್ಟಿಯಲ್ಲಿದ್ದಾರೆ. 20 ಕೈದಿಗಳ ಪೈಕಿ 12 ಕೈದಿ ರೈತರು ಪ್ರತಿದಿನ ಜೈಲು ಆವರಣದಿಂದ ಹೊರಬಂದು ನಿಷ್ಠೆಯಿಂದ ಕೃಷಿ ಕಾಯಕ ಮಾಡುತ್ತಿದ್ದಾರೆ. ಇನ್ನುಳಿದ ಏಳೆಂಟು ಜನರು ಜೈಲಿನ ಒಳ ಆವರಣದಲ್ಲಿಯೇ ತೋಟಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇವರೆಲ್ಲರೂ ಜೈಲಿನಿಂದ ಬಿಟ್ಟರೆ ಓಡಿ ಹೋಗಬಹುದು ಎನ್ನುವ ಅನುಮಾನ ಎಲ್ಲರಿಗೂ ಇದೆ. ಆದರೆ ಅಂತಹ ಯಾವುದೇ ಮನಸ್ಥಿತಿ ಕೈದಿಗಳಲ್ಲಿ ಇಲ್ಲ. ಅವರೆಲ್ಲ ನಂಬಿಕೆಗೆ ಅರ್ಹರೆಂಬುದನ್ನು ಮನದಟ್ಟು ಮಾಡಿಕೊಂಡೇ ಜೈಲು ಅಧಿಕಾರಿಗಳು ಅವರಿಗೆ ಕೃಷಿ ಮಾಡುವ ಅವಕಾಶ ನೀಡಿದ್ದಾರೆ. ಬೆಳೆದ ಹೂವು, ಮರೆತ ನೋವು
ಧಾರವಾಡ ಕೇಂದ್ರ ಕಾರಾಗೃಹದ ಕೈದಿಗಳಿಂದ ಇದೇ ಮೊದಲ ಬಾರಿಗೆ ದೇವರ ಪೂಜೆಗೆಂದು ಹೂ ಬೆಳೆಸುವ ಕಾಯಕವನ್ನು ಮಾಡಿಸಲಾಗುತ್ತಿದೆ. ಇಲ್ಲಿನ ಮಹಿಳಾ ಕೈದಿಗಳು ಉಲನ್‌ನಿಂದ ಚಿಕ್ಕಮಕ್ಕಳ ಸ್ವೇಟರ್, ಕ್ರಾಪ್, ಕಾಲುಚೀಲ ಹೆಣಿಕೆಯಿಂದ ಸಿದ್ಧಗೊಳಿಸಿದ್ದಾರೆ. ಕೈದಿಗಳಿಂದ ಉತ್ಪಾದನೆಯಾದ ಕೃಷಿ ಮತ್ತು ತೋಟಗಾರಿಕೆ ವಸ್ತುಗಳನ್ನು ಮಾರಾಟ ಮಾಡಲು ಶೀಘ್ರವೇ ಮಳಿಗೆಯೊಂದನ್ನು ಇಲ್ಲಿನ ಜಿಲ್ಲಾ ಪೊಲೀಸ್ ಹೆಡ್‌ಕಾÌಟರ್ನಲ್ಲಿ ಆರಂಭಿಸಲಾಗುತ್ತಿದೆ. ಕೈದಿಗಳು ಜೈಲಿನಲ್ಲಿದ್ದಾರೆ ಎಂದ ಮಾತ್ರಕ್ಕೆ ಅವರು ಕೆಟ್ಟವರಲ್ಲ. ಅವರಿಗೆ ಕೃಷಿ, ತೋಟಗಾರಿಕೆ, ಹೆಣಿಕೆ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ಧಾರವಾಡದಲ್ಲಿನ ಕೈದಿಗಳಲ್ಲಿ ಹೆಚ್ಚಿನವರು ಸಕಾರಾತ್ಮಕ ಮನೋಧರ್ಮ ಬೆಳೆಸಿಕೊಳ್ಳುತ್ತಿದ್ದು, ಇದಕ್ಕೆ ಕೃಷಿಯೇ ಪ್ರೇರಣೆ ಎಂದರೆ ತಪ್ಪಾಗಲಾರದು.
– ಡಾ.ಆರ್.ಅನೀತಾ, ಧಾರವಾಡ ಕೇಂದ್ರ ಕಾರಾಗೃಹದ ಅಧೀಕ್ಷಕಿ ನಾನು ಕೊಲೆ ಮಾಡಿ ಅಪರಾಧಿಯಾದೆ. ಆದರೆ ಇಂದು ಕೃಷಿ ಮಾಡಿ ನನ್ನ ಪಾಪ ತೊಳೆದುಕೊಳ್ಳುತ್ತಿದ್ದೇನೆ. ಈ ಹೊಲ ನನ್ನದೇ ಹೊಲ ಎನಿಸುತ್ತಿದೆ. ಇಲ್ಲಿನ ಕೃಷಿ ಉತ್ಪನ್ನದಿಂದ ಸಿದ್ಧಗೊಳ್ಳುವ ಅಡುಗೆ ನನ್ನ ಸಹಚರರ ಹಸಿವು ಇಂಗಿಸುತ್ತಿದೆ ಎನ್ನುವ ಧನ್ಯಭಾವ ನನ್ನಲ್ಲಿದೆ.
– ಕಲ್ಮೇಶಪ್ಪ, ಹಾವೇರಿ ಜಿಲ್ಲೆ (ಹೆಸರು ಬದಲಿಸಿದೆ) – ಬಸವರಾಜ ಹೊಂಗಲ್