ಧಾರವಾಡ: ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೊಳಗಾದ ಮನೆಗಳಿಗೆ ಕೊಡಗು ಮಾದರಿಯಲ್ಲೇ ಪರಿಹಾರ ನೀಡುವಂತೆ ಆಗ್ರಹಿಸಿ ಜಿಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ, ಸರಕಾರಕ್ಕೆ ಕಳಿಸಲು ತೀರ್ಮಾನಿಸಲಾಯಿತು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಅಧ್ಯಕ್ಷೆಯಲ್ಲಿ ಜರುಗಿದ ಸಭೆಯಲ್ಲಿ ಅತಿವೃಷ್ಟಿ ಹಾನಿಯ ಸಮೀಕ್ಷೆ ಕುರಿತು ಸುದೀರ್ಘ ಚರ್ಚೆ ನಡೆಸಿದ ಸದಸ್ಯರು, ಕೊಡಗಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಿದ ಮಾದರಿಯಲ್ಲಿಯೇ ಜಿಲ್ಲೆಯಲ್ಲಿಯೂ ಪರಿಹಾರ ನೀಡಲು ಒತ್ತಾಯಿಸಿ ನಿರ್ಣಯ ಕೈಗೊಂಡರು.
ಇದಕ್ಕೂ ಮುನ್ನ ನೆರೆಹಾವಳಿ ಕುರಿತು ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರ, ಕಲ್ಲಪ್ಪ ಪುಡಕಲಕಟ್ಟಿ, ಚೆನ್ನಬಸಪ್ಪ ಮಟ್ಟಿ ಸೇರಿದಂತೆ ಪಕ್ಷಬೇಧ ಮರೆತು ಎಲ್ಲಾ ಸದಸ್ಯರು ಒಮ್ಮತದಿಂದ ಕೊಡಗು ಮಾದರಿಯಲ್ಲೇ ಜಿಲ್ಲೆಯಲ್ಲಿ ಹಾನಿಗೆ ಒಳಗಾದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು.
ಧಾರವಾಡ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಮಾತನಾಡಿ, ನೆರೆಯಿಂದ ಮನೆಗಳಿಗೆ ಉಂಟಾಗಿರುವ ಹಾನಿ ಪರಿಹಾರಕ್ಕೆ 66 ಕೋಟಿ ರೂ. ಅಗತ್ಯವಿದೆ. ಬೇರೆ ಯೋಜನೆಗಳಡಿ 9 ಕೋಟಿ ರೂ.ಲಭ್ಯವಿದ್ದು, ಸರ್ಕಾರದಿಂದ ಗುರುವಾರವಷ್ಟೇ 55 ಕೋಟಿ ರೂ. ಬಿಡುಗಡೆಯಾಗಿದೆ. 1 ಲಕ್ಷ 53 ಸಾವಿರ ಹೆಕ್ಟೇರ್ ಕೃಷಿ ಬೆಳೆ ಹಾಗೂ 32,358 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ ಒಟ್ಟು 125 ಕೋಟಿ ರೂ. ಮೌಲ್ಯದ ಬೆಳೆಹಾನಿ ಆಗಿರುವ ಬಗ್ಗೆ ಅಂದಾಜಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕಲ್ಲಪ್ಪ ಪುಡಕಲಕಟ್ಟಿ, ಚೈತ್ರಾ ಶಿರೂರ, ನಿಂಗಪ್ಪ ಘಾಟಿನ್, ಚನ್ನಬಸಪ್ಪ ಮಟ್ಟಿ, ಉಮೇಶ ಹೆಬಸೂರ ಮೊದಲಾದ ಸದಸ್ಯರು ಮಾತನಾಡಿ, ಅತಿವೃಷ್ಟಿ ಹಾನಿಯ ಬಗ್ಗೆ ಸರಿಯಾಗಿ ಸಮೀಕ್ಷೆ ಆಗಿಲ್ಲ. ಹೀಗಾಗಿ ಮರುಸಮೀಕ್ಷೆ ಕೈಗೊಳ್ಳಬೇಕು. ಪರಿಹಾರ ಕಾರ್ಯದಲ್ಲಿ ಜಿಪಂ ಕೂಡ ಪಾಲುದಾರವಾದರೆ ನೇರವಾಗಿ ಗ್ರಾಮೀಣ ಜನರ ಅಹವಾಲುಗಳಿಗೆ ಚುನಾಯಿತ ಪ್ರತಿನಿಧಿಗಳು ಸ್ಪಂದಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಎಸಿ ಮಹ್ಮದ್ ಜುಬೇರ್, ಅತಿವೃಷ್ಟಿ ಹಾನಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂಬ ನಿರ್ದಿಷ್ಟವಾದ ಪ್ರಕರಣಗಳನ್ನು ಜಿಪಂ ಸದಸ್ಯರು ನೀಡಿದರೆ ಆ ಮನೆಗಳ ಹಾನಿಯ ಬಗ್ಗೆ ಮರುಸಮೀಕ್ಷೆ ಮಾಡಲು ಜಿಲ್ಲಾಡಳಿತ ಸಿದ್ಧವಿದೆ. ಮತ್ತೊಂದು ತಂಡ ರಚಿಸಿ ಸಮೀಕ್ಷೆ ಮಾಡಲಾಗುವುದು ಎಂದರು.
ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಅತಿವೃಷ್ಟಿಯಿಂದ ಮನೆಗಳಿಗೆ ನೀರು ನುಗ್ಗಿ ಪಾತ್ರೆ, ಬಟ್ಟೆ ಕಳೆದುಕೊಂಡವರಿಗೆ ತಕ್ಷಣದ ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ತಲಾ ಹತ್ತು ಸಾವಿರ ರೂ. ಒದಗಿಸಲಾಗಿದೆ. ಬೆಳೆವಿಮೆ ಹಣ ಪಡೆದ ಕಂಪೆನಿಗಳ ಅಧಿಕಾರಿಗಳನ್ನು ಜಿಪಂ ಸಾಮಾನ್ಯ ಸಭೆಗೆ ಕರೆಯಿಸಿ ಸದಸ್ಯರಿಗೆ ಸಮರ್ಪಕ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದರು. ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಪಂ ಉಪ ಕಾರ್ಯದರ್ಶಿ ಎಸ್.ಜಿ. ಕೊರವರ ಮತ್ತಿತರರಿರು.