Advertisement

ಧಾರವಾಡ: 12ರಿಂದ ರಾಷ್ಟ್ರೀಯ ಯುವಜನೋತ್ಸವ

06:52 PM Dec 26, 2022 | Team Udayavani |

ಧಾರವಾಡ: ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಜ.12ರಿಂದ 16ರವರೆಗೆ ಅವಳಿನಗರದಲ್ಲಿ ಕೇಂದ್ರ-ರಾಜ್ಯ ಸರಕಾರ ಆಯೋಜಿಸಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಆಗಮಿಸಲಿದ್ದಾರೆ. ಉತ್ಸವದಲ್ಲಿ ವಿವಿಧ ರಾಜ್ಯಗಳ ಸುಮಾರು 7,500ಕ್ಕೂ ಹೆಚ್ಚು ಪ್ರತಿನಿಧಿಗಳು, ಆಯಾ ರಾಜ್ಯಗಳ ಸಾಂಸ್ಕೃತಿಕ ರಾಯಭಾರಿಗಳು ಭಾಗವಹಿಸಿ ತಮ್ಮ ಕಲೆ, ಸಂಸ್ಕೃತಿ ಬಿಂಬಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ನಗರದಲ್ಲಿ ಯುವ ಜನೋತ್ಸವ ಆಯೋಜನೆಗಾಗಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ನಂತರ ಕವಿವಿ ಸಿಂಡಿಕೇಟ್‌ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಷ್ಟ್ರೀಯ ಯುವಜನೋ ತ್ಸವನ್ನು ಯಶಸ್ವಿಯಾಗಿ ಸಂಘಟಿಸಲು ಮತ್ತು ರಾಷ್ಟ್ರಕ್ಕೆ ಧಾರವಾಡದ ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಆಹಾರ ಉತ್ಪನ್ನಗಳನ್ನು ಪರಿಚಯಿಸಲು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ-ಕಾರ್ಯಕ್ರಮ, ಚಿತ್ರಕಲೆ, ಸಂಗೀತ, ನೃತ್ಯ, ಹಾಡು, ಯುವ ಸಮಾವೇಶ ಮುಂತಾದವುಗಳ ಆಯೋಜನೆಗೆ ನಗರದಲ್ಲಿ ವಿವಿಧ ಸ್ಥಳಗಳನ್ನು ಜಿಲ್ಲಾಡಳಿತ ಗುರುತಿಸಿದೆ.

ಯುವ ಜನೋತ್ಸವದಲ್ಲಿ ಆಹಾರ ಮೇಳ ಆಯೋಜಿಸಿದ್ದು, ವಿವಿಧ ರಾಜ್ಯಗಳ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವೂ ನಡೆಯಲಿದೆ ಎಂದರು. ಪ್ರತಿದಿನ ಸಂಜೆ 6ರಿಂದ ರಾತ್ರಿ 9 ಗಂಟೆವರೆಗೆ ಕೆಸಿಡಿ ಮುಖ್ಯ ಕಟ್ಟಡದ ಮುಂಭಾಗದಲ್ಲಿ ಯುವ ಜನೋತ್ಸವದ ನಿಮಿತ್ತ ವಿವಿಧ ರೀತಿಯ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಹೊರ ರಾಜ್ಯಗಳಿಂದ ಆಗಮಿಸುವ ಸ್ಫರ್ಧಾಳುಗಳಿಗೆ ವಸತಿಗಾಗಿ ಕವಿವಿ, ಕೃಷಿ ವಿವಿ ಮತ್ತು ವಿವಿಧ ವಸತಿನಿಲಯಗಳನ್ನು ಗುರುತಿಸಲಾಗಿದೆ. ಕೆಎಸ್‌ ಆರ್‌ಟಿಸಿ, ಜಿಲ್ಲಾಡಳಿತದಿಂದ ಸಮರ್ಪಕ ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಸರಕಾರದ ಮಂತ್ರಿಗಳ, ಹಿರಿಯ ಅಧಿಕಾರಿಗಳ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಸಮನ್ವಯ ಮತ್ತು ಮಾರ್ಗದರ್ಶನದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ನೇತೃತ್ವದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳ ವಿವಿಧ ಸಮಿತಿಗಳನ್ನು ರಚಿಸಿ ಕಾರ್ಯ ಹಂಚಿಕೆ ಮಾಡಲಾಗಿದೆ. ಎರಡ್ಮೂರು ದಿನಗಳಲ್ಲಿ ಕಾರ್ಯಕ್ರಮ ಉದ್ಘಾಟನೆ ಸ್ಥಳ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವ ಸ್ಥಳ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ರಾಷ್ಟ್ರೀಯ ಯುಜನೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೂ ಪ್ರದರ್ಶನಕ್ಕೆ ಅವಕಾಶ ಸಿಗುವಂತೆ ಮಾಡಲಾಗುವುದು. ಕೆಯುಡಿ, ಕೆಸಿಡಿ, ಸೃಜನಾ ರಂಗಮಂದಿರ, ಕಲಾಭವನ, ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಿಲ್ಲೆಯ ವಿವಿಧ ಕಾಲೇಜು, ವಿವಿಗಳು ಸೇರಿದಂತೆ ಸ್ಥಳೀಯ ಯುವ ಪ್ರತಿಭೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದರು.

Advertisement

ಪಿಪಿಟಿ ಮೂಲಕ ಸಿದ್ಧತೆಗಳನ್ನು ಪ್ರಸ್ತುತಪಡಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ವಿವಿಧ ಮೇಧಾವಿಗಳೊಂದಿಗೆ ಯುವ ಜನತೆ ಸಂವಾದ, ಕಲಾಕೃತಿಗಳ ರಚನೆ, ಯುವ ಸಮೂಹದ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆ ಮಾಡಿಕೊಡಲಾಗುತ್ತದೆ. ಸಾಂಸ್ಕೃತಿಕ ಸಂಜೆಯಂತಹ ಕಾರ್ಯಕ್ರಮಗಳಲ್ಲಿ ವಿವಿಧ ಜಾನಪದ ಕಲೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮೇಯರ್‌ ಈರೇಶ ಅಂಚಟಗೇರಿ, ಕವಿವಿ ಕುಲಪತಿ ಡಾ| ಕೆ.ಬಿ. ಗುಡಸಿ, ಮಹಾನಗರ ಪೊಲೀಸ್‌ ಆಯುಕ್ತ ಲಾಬೂರಾಮ್‌, ಎಸ್ಪಿ ಲೋಕೇಶ್‌ ಜಗಲಾರ್ಸ, ಜಿಪಂ ಸಿಇಒ ಡಾ| ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ ಡಾ| ಗೋಪಾಲಕೃಷ್ಣ ಬಿ., ಕೆಎಸ್‌ಆರ್‌ ಟಿಸಿ ವ್ಯವಸ್ಥಾಪಕ ನಿರ್ದೇಶಕ ಭರತ, ಸ್ಮಾರ್ಟ್‌ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಕಾ, ಕವಿವಿ ಕುಲಸಚಿವ ಯಶಪಾಲ್‌ ಕ್ಷೀರಸಾಗರ, ಕೃಷಿ ವಿವಿ ಕುಲಸಚಿವ ಶಿವಾನಂದ ಕರಾಳೆ, ಹುಡಾ ಆಯುಕ್ತ ಡಾ| ಸಂತೋಷ ಬಿರಾದರ, ತಹಶೀಲ್ದಾರ್‌ ಸಂತೋಷ ಹಿರೇಮಠ, ಆಹಾರ ಇಲಾಖೆ ಜಂಟಿ ನಿರ್ದೇಶಕ
ವಿನೋದಕುಮಾರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಡಾ| ಮುರಳಿಧರ ಇನ್ನಿತರರಿದ್ದರು. ಇದಕ್ಕೂ ಮುನ್ನ ಕವಿವಿಯ ರಾಣಿ ಚನ್ನಮ್ಮ ಕ್ರೀಡಾಂಗಣ, ಸುವರ್ಣ ಮಹೋತ್ಸವ ಕಟ್ಟಡ, ಕವಿವಿಯ ಹಸಿರು ಉದ್ಯಾನ ವಿಕ್ಷೀಸಿ, ಸಿಂಡಿಕೇಟ್‌ ಸಭಾಂಗಣದಲ್ಲಿ
ಅಧಿಕಾರಿಗಳೊಂದಿಗೆ ಯುವಜನೋತ್ಸವ ಸಿದ್ಧತೆಗಳ ಕುರಿತು ಸಭೆ ನಡೆಸಿದರು.

ಕೇಂದ್ರದ್ರ ಸರಕಾರದ ಯುವಜನಸೇವಾ ಮತ್ತು ಕ್ರೀಡಾ ಮಂತ್ರಾಲಯ 10 ಕೋಟಿ ಮತ್ತು ರಾಜ್ಯ ಸರಕಾರವು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಮೂಲಕ 10 ಕೋಟಿ ಅನುದಾನ ನೀಡಿವೆ. ಜಿಲ್ಲೆಯ ಪ್ರಮುಖ ಕೈಗಾರಿಕಾ ಕಂಪನಿ ಹಾಗೂ ವಿವಿಧ ಉದ್ಯಮಗಳ ಪ್ರಾಯೋಜಕತ್ವ ಪಡೆಯಲು ನಿರ್ಧರಿಸಲಾಗಿದೆ. ಉತ್ಸವಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು.
ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next