Advertisement

ನಾಳೆಯಿಂದ ಧಾರವಾಡ ಸಾಹಿತ್ಯ ಸಂಭ್ರಮ

12:43 PM Jan 19, 2017 | |

ಧಾರವಾಡ: ಜ.20ರಿಂದ ಮೂರು ದಿನಗಳ ಕಾಲ ಧಾರವಾಡ ಸಾಹಿತ್ಯ ಸಂಭ್ರಮ-2017 ನಡೆಯಲಿದೆ ಎಂದು ಸಾಹಿತ್ಯ ಸಂಭ್ರಮ ಟ್ರಸ್ಟ್‌ ಅಧ್ಯಕ್ಷ ಡಾ| ಗಿರಡ್ಡಿ ಗೋವಿಂದರಾಜ್‌ ಹೇಳಿದರು. ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Advertisement

ಸಾಹಿತ್ಯದಲ್ಲಿ ಹೊಸ ಬಗೆಯ ಚಿಂತನೆ ಮತ್ತು ಸಾಹಿತ್ಯ ಚರ್ಚೆಗೆ ವಿನೂತನ ಆಯಾಮ ಒದಗಿಸುವುದಕ್ಕೆ ಆರಂಭವಾಗಿರುವ ಧಾರವಾಡ ಸಾಹಿತ್ಯ ಸಂಭ್ರಮ ಇದೀಗ 5ನೇ ವರ್ಷಕ್ಕೆ ಕಾಲಿಟ್ಟಿದ್ದು, 5ನೇ ಆವೃತ್ತಿ ಸಾಹಿತ್ಯ ಸಂಭ್ರಮ ಕವಿವಿಯ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿದೆ ಎಂದರು. 

ಜ.20ರಂದು ಬೆಳಗ್ಗೆ 10:15ಕ್ಕೆ ನಾಡೋಜ ಡಾ|ಕೆ.ಎಸ್‌.ನಿಸಾರ್‌ ಅಹಮದ್‌ ಸಾಹಿತ್ಯ ಸಂಭ್ರಮ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕವಿವಿ ಕುಲಪತಿ ಡಾ|ಪ್ರಮೋದ ಗಾಯಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಚಿಂತಕ ಡಾ|ವಿವೇಕ ರೈ ಆಶಯ ಭಾಷಣ ಮಾಡಲಿದ್ದಾರೆ ಎಂದರು. 

ಅದಕ್ಕೂ ಮುನ್ನ ಅಂದರೆ ಬೆಳಗ್ಗೆ 9:30ಕ್ಕೆ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಅವರು ಪುಸ್ತಕ ಮಳಿಗೆ ಉದ್ಘಾಟಿಸಲಿದ್ದು, 9:45ಕ್ಕೆ ಕವಿ ಎಚ್‌. ಎಸ್‌.ವೆಂಕಟೇಶಮೂರ್ತಿ ಅವರು ಪತ್ರಗಳ ಪ್ರದರ್ಶನ ಉದ್ಘಾಟಿಸಲಿದ್ದಾರೆ ಎಂದರು. 

2017ರ ಸಂಭ್ರಮದಲ್ಲಿ ಏನಿದೆ: ಪ್ರತಿ ಬಾರಿಯ ಸಾಹಿತ್ಯ ಸಂಭ್ರಮದಂತೆ ಈ ಬಾರಿಯೂ ವಿಭಿನ್ನ ವಿಚಾರಗಳ ಕುರಿತು ಒಟ್ಟು 23 ಗೋಷ್ಠಿಗಳಿದ್ದು, ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಗಣ್ಯರು ಗೋಷ್ಠಿಗಳ ಮೂಲಕ ತಮ್ಮ ವಿಚಾರಗಳನ್ನು ನೇರವಾಗಿ ಹಂಚಿಕೊಳ್ಳಲಿದ್ದಾರೆ.

Advertisement

ವಿಶೇಷ ಉಪನ್ಯಾಸ, ನನಗೆ ಬಂದ ಸಾಹಿತಿಗಳ ಪತ್ರ, ಸಾಹಿತ್ಯ ಸದಾ ಜನಪರವೇ, ಎಡ ಬಲಗಳ ನಡುವೆ, ಚಿತ್ರಕಲಾಕೃತಿಗಳು ಏನು ಹೇಳುತ್ತವೆ, ರಾಷ್ಟ್ರೀಯ ಜಲ ನೀತಿ, ಭಕ್ತಿ ಪರಂಪರೆ ಮತ್ತು ಕನ್ನಡ ಕಾವ್ಯ, ಕನ್ನಡ ಕಾವ್ಯ ಕನ್ನಡಿ, ಸಾಹಿತಿಗಳೊಂದಿಗೆ ನಾವು, ಗೊಂದಲಿಗರ ಹಾಡು, ಲೇಖಕರೊಂದಿಗೆ ಸಂವಾದ, ಅಲ್ಲಮ ಚಲನಚಿತ್ರ ಪ್ರದರ್ಶನ ಮತ್ತು ಆ ಕುರಿತು ಚರ್ಚೆ, ಸಾಹಿತ್ಯ ಮತ್ತು ತತ್ವಜ್ಞಾನ, ಮತ್ತೆ ಮತ್ತೆ ಓದಬೇಕೆನ್ನಿಸುವ ಕವಿತೆಗಳು ಎನ್ನುವ ಗೋಷ್ಠಿಗಳು ನಡೆಯಲಿವೆ ಎಂದು ಡಾ| ಗಿರಡ್ಡಿ ಹೇಳಿದರು. 

ಗೋಷ್ಠಿಗಳ ಅಡಿಯಲ್ಲೇ ನಟ ರಮೇಶ ಅರವಿಂದ ಅವರೊಂದಿಗೆ ಸಂವಾದ ನಡೆಯಲಿದೆ. ಎಂದಿನಂತೆ ನಾಡೋಜ ಚೆನ್ನವೀರ ಕಣವಿ, ಡಾ| ಗಿರಡ್ಡಿ, ಸಂಶೋಧಕ ಷ.ಶೆಟ್ಟರ್‌, ಸುಮತೀಂದ್ರ ನಾಡಿಗ್‌, ಟಿ.ಎಸ್‌.ನಾಗಾಭರಣ, ವೀಣಾ ಬನ್ನಂಜೆ, ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ| ಗುರುಲಿಂಗ ಕಾಪಸೆ, ಕಮಲಾ ಹಂಪನಾ,

ಡಾ| ವೀರಣ್ಣ ರಾಜೂರ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳು, ವಿದ್ವಾಂಸರು ಸಂಭ್ರಮದಲ್ಲಿ ಪಾಲ್ಗೊಂಡು ಅಭಿಪ್ರಾಯಗಳನ್ನು ವಿಭಿನ್ನ ವೈಚಾರಿಕ ನೆಲೆಯಲ್ಲಿ ಹಂಚಿಕೊಳ್ಳಲಿದ್ದಾರೆ ಎಂದರು. ನಾಡೋಜ ಡಾ| ಚೆನ್ನವೀರ ಕಣವಿ, ಹಾ.ವೆಂ. ಕಾಖಂಡಿಕಿ, ಡಾ| ಲೋಹಿತ್‌ ನಾಯ್ಕರ್‌ ಸೇರಿದಂತೆ ಸಾಹಿತಿಗಳು, ಗಣ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು  

Advertisement

Udayavani is now on Telegram. Click here to join our channel and stay updated with the latest news.

Next