ಧಾರವಾಡ: ಶಿಕ್ಷಕರು ಕೇವಲ ಪಠ್ಯಪುಸ್ತಕದ ವಿಷಯವನ್ನು ಬೋಧಿ ಸುವುದಷ್ಟೇ ಅಲ್ಲ ವಿದ್ಯಾರ್ಥಿಗಳು ಸಂಶೋಧನೆ, ಅನ್ವೇಷಣೆಗಳ ಕಡೆಗೆ ಆಕರ್ಷಿತರಾಗುವಂತೆ ಬೋಧಿ ಸುವ ಕಲೆ-ತಂತ್ರ ಶಿಕ್ಷಕರು ಅರಿತು ಮಕ್ಕಳಿಗೆ ಸ್ಫೂರ್ತಿದಾಯಕ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹ ಸೊಸೈಟಿ ಸಹಯೋಗದಲ್ಲಿ ನಗರದ ಕವಿವಿ ಆವರಣದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಬಾಲಕಿಯರ ಪ್ರೌಢಶಾಲೆಗಳಿಗೆ 169 ವಿಜ್ಞಾನ ಕಿಟ್‌ಗಳನ್ನು ಬಳ್ಳಾರಿ, ವಿಜಯನಗರ, ಕೊಪ್ಪಳ, ಗದಗ ಜಿಲ್ಲೆಗಳ ಪ್ರೌಢಶಾಲಾ ವಿತರಿಸಿ ಅವರು ಮಾತನಾಡಿದರು.
ಬೋಧಿಸಿದರೆ ಉತ್ತಮ ವಿಜ್ಞಾನಿಗಳನ್ನು ಹುಟ್ಟು ಹಾಕಬಹುದು. ಈ ನಿಟ್ಟಿನಲ್ಲಿ ಶಿಕ್ಷಕರು ಇಂತಹ ತರಬೇತಿ ಮತ್ತು ವಿಜ್ಞಾನ ಕಿಟ್‌ಗಳ ಸದುಪಯೋಗ ಪಡೆದು ಕ್ರಿಯಾತ್ಮಕ, ಪರಿಣಾಮಕಾರಿ ಬೋಧನೆಯನ್ನು ಅರ್ಪಣಾ ಮನೋಭಾವದೊಂದಿಗೆ ರೂಢಿಸಿಕೊಳ್ಳಬೇಕು ಎಂದರು. ಕವಿವಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ|ಆರ್.ಎಫ್.ಭಜಂತ್ರಿ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ವೈಜ್ಞಾನಿಕ ಮನೋಭಾವಬೆಳೆಸಿ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವಂತಹ ಬೋಧನೆಯನ್ನು ಶಾಲಾ ಶಿಕ್ಷಕರು ಮಾಡಿದರೆ ಉನ್ನತ ವ್ಯಾಸಂಗಕ್ಕೆ ಬರುವ ವಿಜ್ಞಾನ ವಿದ್ಯಾರ್ಥಿಗಳು ಉತ್ತಮ ಸಂಶೋಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ಎಲ್ಲಾ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಕರ್ನಾಟಕ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಸ್ಥಾಪಿಸಿರುವ ಮ್ಯೂಸಿಯಂಗೆ ಭೇಟಿ ನೀಡಿ, ಪ್ರೋತ್ಸಾಹಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ|ವೀರಣ್ಣ ಬೋಳಿಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಮನಸ್ಸು ಪರಿವರ್ತಿಸಿ ಬೋಧನೆ ಮಾಡಿದರೆ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಬಹುದು. ಶಿಕ್ಷಕರು ಈ ತರಬೇತಿಯ ಸದುಪಯೋಗ ಪಡೆದು ವಿದ್ಯಾರ್ಥಿಗಳಿಗೆ ತಲುಪಿಸಿದರೆ ತರಬೇತಿ ಸಾರ್ಥಕತೆಯಾಗುತ್ತದೆ ಎಂದರು. ಶೈಕ್ಷಣಿಕ ಸಹಾಯಕಿ ವಿಶಾಲಾಕ್ಷಿ ಎಸ್.ಜೆ. ಹಾಗೂ ಸಿ.ಎಫ್. ಚಂಡೂರ ಅವರು ಶಿಕ್ಷಕರಿಗೆ ವಿಜ್ಞಾನ ಪರಿಕರಗಳ ಕುರಿತು ತರಬೇತಿ ನೀಡಿದರು. ಪ್ರೊ|ವಿಜಯಕುಮಾರ ಗಿಡ್ನವರ, ವಿಜ್ಞಾನ ಕೇಂದ್ರದ ಸಿಬ್ಬಂದಿ, ವಿಜ್ಞಾನ-ಗಣಿತ ಶಿಕ್ಷಕರು ಇದ್ದರು.