Advertisement

ಧಾರವಾಡ ಸಂಗೀತೋತ್ಸವಕ್ಕೆ ಕೂಡಿ ಬರುತ್ತಿಲ್ಲ ಕಾಲ

06:55 AM Jan 20, 2018 | |

ಧಾರವಾಡ: ಕಲೆ, ಸಾಹಿತ್ಯವನ್ನೇ ಹೊದ್ದು ಮಲಗಿರುವ ಧಾರವಾಡ ಸಾಹಿತ್ಯ ಸಂಭ್ರಮ ಮೂಲಕ ಸುದ್ದಿಯಲ್ಲಿದೆ. ವಿಶ್ವಕ್ಕೆ ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಕೊಡುಗೆಯಾಗಿ ನೀಡಿದ ಈ ಊರಿನಲ್ಲಿ ಪುಣೆ ಮಾದರಿಯ ಸಂಗೀತೋತ್ಸವ ನಡೆಸಬೇಕು ಎಂಬ ಪ್ರಯತ್ನ ಮಾತ್ರ ಈಡೇರುತ್ತಿಲ್ಲ ದಕ್ಷಿಣ ಭಾರತದಲ್ಲಿ ಹಿಂದೂಸ್ತಾನಿ ಸಂಗೀತ ಅಂದರೆ ಧಾರವಾಡ; ಧಾರವಾಡ ಅಂದರೆ ಹಿಂದೂಸ್ತಾನಿ ಸಂಗೀತ.

Advertisement

ಉತ್ತರ ಭಾರತದಲ್ಲಿ ಜೈಪುರ, ಇಂದೋರ್‌, ಗ್ವಾಲಿಯರ್‌, ಲಕ್ನೋದಲ್ಲಿನ ರಾಜ ಮನೆತನಗಳಲ್ಲೂ ಹಿಂದೂಸ್ತಾನಿ ಸಂಗೀತಕ್ಕೆ ಪೋಷಣೆ ಸಿಕ್ಕಿತು. ಆದರೆ, ದಕ್ಷಿಣ ಭಾರತದಲ್ಲಿ ಏಕೈಕ ಹಿಂದುಸ್ತಾನಿ ಸಂಗೀತದ ನೆಲೆಯಾಗಿರುವ ಧಾರವಾಡದಲ್ಲಿ ಪ್ರತಿಭಾವಂತ ಸಂಗೀತಗಾರರು ಉತ್ತರ ಭಾರತದವರು ತಿರುಗಿ ನೋಡುವಂತೆ ಹಿಂದೂಸ್ತಾನಿ ಸಂಗೀತವನ್ನು ಉಳಿಸಿ ಬೆಳೆಸಿದರು.

ಇಂತಹ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಲು ಮತ್ತು ಯುವ ಸಂಗೀತಗಾರರಿಗೆ ಪ್ರೋತ್ಸಾಹ
ನೀಡಲು ಅನುಕೂಲವಾಗಲೆಂದು ಹಿಂದೂಸ್ತಾನಿ ಟ್ರಸ್ಟ್‌ ಸ್ಥಾಪನೆ, ಅಂತಾರಾಷ್ಟ್ರೀಯ ಹಿಂದೂಸ್ತಾನಿ ಸಂಗೀತೋತ್ಸವಕ್ಕೆ ಅಗತ್ಯವಾದ ಶಾಶ್ವತ ಅನುದಾನ ನೀಡಬೇಕೆಂದು ಯೋಜನೆ ರೂಪಿಸಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು 3 ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಇನ್ನೂ ಅಂಗೀಕಾರ ಸಿಕ್ಕಿಲ್ಲ.

ಧಾರವಾಡ ಸಂಗೀತೋತ್ಸವ ಯಾಕೆ?: 1953ರಲ್ಲಿ ಪುಣೆಯಲ್ಲಿ ಸವಾಯಿ ಗಂಧರ್ವ ಸಂಗೀತೋತ್ಸವ ಆರಂಭಗೊಂಡಿತು. ಇದು ಕನ್ನಡಿಗರಾದ ಪಂ| ಸವಾಯಿ ಗಂಧರ್ವರ ಪುಣ್ಯಸ್ಮರಣೆ ನಿಮಿತ್ತ ಶುರುವಾದರೂ ನಂತರ ದೇಶದಲ್ಲೇ ನಡೆಯುವ ಅತಿ ದೊಡ್ಡ ಸಂಗೀತ ಕಾರ್ಯಕ್ರಮವಾಗಿ ಹೆಸರು ಪಡೆಯಿತು. 

ಹಿಂದೂಸ್ತಾನಿ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ ಧಾರವಾಡದವರಾದ ಪಂ|ಸವಾಯಿ ಗಂಧರ್ವ, ಪಂ|ಬಸವರಾಜ ರಾಜಗುರು, ಪಂ|ಮಲ್ಲಿಕಾರ್ಜುನ್‌ ಮನ್ಸೂರ್‌, ಪಂ|ಭೀಮಸೇನ್‌ ಜೋಶಿ, ಪಂ| ಗಂಗೂಬಾಯಿ ಹಾನಗಲ್‌, ಪಂ| ಪಂಚಾಕ್ಷರಿ ಗವಾಯಿ ಮತ್ತು ಪಂ| ಪುಟ್ಟರಾಜ ಗವಾಯಿಗಳಿಂದ ಹಿಡಿದು ಪದ್ಮಶ್ರೀ ಪುರಸ್ಕೃತ ಪಂ| ವೆಂಕಟೇಶ ಕುಮಾರ್‌ವರೆಗೆ ಎಲ್ಲರೂ ರಾಜ್ಯ, ದೇಶದ ಗಡಿ ಮೀರಿ ಹಿಂದೂಸ್ತಾನಿ ಸಂಗೀತ ಬೆಳೆಸಿದರು.

Advertisement

ಇಂದಿಗೂ ಇಲ್ಲಿ ಗುರುಶಿಷ್ಯ ಪರಂಪರೆಯ ಕಲಿಕಾ ಪದ್ಧತಿ ಜಾರಿಯಲ್ಲಿದೆ. ಹಿಂದೂಸ್ತಾನಿ ಸಂಗೀತಕ್ಕೆ ಇಂತಹ ದೊಡ್ಡ
ಕೊಡುಗೆ ನೀಡಿದ ಊರಿನಲ್ಲೇ ಧಾರವಾಡ ಸಂಗೀತೋತ್ಸವ ಮಾಡಬೇಕು ಎಂಬ ಆಗ್ರಹ ಸಂಗೀತ ಪ್ರಿಯರದ್ದಾಗಿದೆ. ಈ ಪ್ರಯತ್ನಗಳು ನಡೆಯುತ್ತಿದೆ. ಸರ್ಕಾರ ಮಾತ್ರ ಈ ಮನವಿ ಪರಿಗಣಿಸುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ.

ಏನಿದು ಪುಣೆ ಸಂಗೀತೋತ್ಸವ?: ಮಹಾರಾಷ್ಟ್ರದ ಪುಣೆಯಲ್ಲಿ 1953ರಿಂದಲೂ ಅಲ್ಲಿನ ಆರ್ಯ ಸಂಗೀತ ಪ್ರಸಾರ ಮಂಡಳಿ ಕನ್ನಡಿಗರೇ ಆದ ಪಂ|ಸವಾಯಿ ಗಂಧರ್ವರ ಸವಿ ನೆನಪಿಗಾಗಿ ಸಂಗೀತೋತ್ಸವ ನಡೆಸುತ್ತ ಬಂದಿದೆ. ಇದೀಗ ಪಂ|ಭೀಮಸೇನ್‌ ಜೋಶಿ ಅವರ ಹೆಸರನ್ನೂ ಸೇರ್ಪಡೆಗೊಳಿಸಿದೆ. ಪ್ರತಿವರ್ಷ ಡಿಸೆಂಬರ್‌ನಲ್ಲಿ ನಡೆಯುವ ಈ ಉತ್ಸವದಲ್ಲಿ ಹೆಸರಾಂತ ಸಂಗೀತಗಾರರು ಸಂಗೀತ ಕಛೇರಿ ನೀಡುತ್ತಾರೆ. ದೇಶ, ವಿದೇಶಗಳಿಂದಲೂ ಸಂಗೀತ ಪ್ರೇಮಿಗಳು ಪಾಲ್ಗೊಳ್ಳುತ್ತಾರೆ. ಇದೇ ಮಾದರಿಯಲ್ಲಿ ಧಾರವಾಡದಲ್ಲೂ ಹಿಂದೂಸ್ತಾನಿ ಸಂಗೀತೋತ್ಸವ ನಡೆಸಬೇಕು ಎನ್ನುವುದು ಆಗ್ರಹ.

ಕನ್ನಡಿಗರನ್ನು ಅನ್ಯರಾಜ್ಯದವರು ಆರಾಧಿಸುವಾಗ, ನಾವು ನಮ್ಮವರನ್ನು ಮರೆತು ಬಿಡುತ್ತಿದ್ದೇವೆ. ಪುಣೆ ಮಾದರಿಯಲ್ಲಿ ಇಲ್ಲೂ ಹಿಂದೂಸ್ತಾನಿ ಸಂಗೀತೋತ್ಸವ ನಡೆಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡರೆ ನನ್ನಷ್ಟು ಖುಷಿ ಪಡುವ ವ್ಯಕ್ತಿ ಇನ್ನೊಬ್ಬರಿಲ್ಲ.
– ಪಂ|ವೆಂಕಟೇಶಕುಮಾರ್‌, ಪದ್ಮಶ್ರೀ ಪುರಸ್ಕೃತರು

ಧಾರವಾಡದಲ್ಲಿ ಅಂತಾರಾಷ್ಟ್ರೀಯ ಹಿಂದೂಸ್ತಾನಿ ಸಂಗೀತೋತ್ಸವ ನಡೆಸಲು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಪುಣೆ ಮಾದರಿಯಲ್ಲಿ ಸಂಗೀತೋತ್ಸವ ಆರಂಭಗೊಂಡರೆ ಪ್ರವಾಸೋದ್ಯಮ ಬೆಳೆಯುತ್ತದೆ.
–  ಅರವಿಂದ ಬೆಲ್ಲದ, ಶಾಸಕ

– ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next