Advertisement

ಧಾರವಾಡ: ಸಾಹಿತಿ ಕಾಯ್ಕಿಣಿಗೆ ಗಳಗನಾಥ ಪ್ರಶಸ್ತಿ ಪ್ರದಾನ

05:12 PM Jan 06, 2024 | Team Udayavani |

ಉದಯವಾಣಿ ಸಮಾಚಾರ 
ಧಾರವಾಡ: ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರಿಗೆ 2022-23ನೇ ಸಾಲಿನ ಗಳಗನಾಥ ಪ್ರಶಸ್ತಿಯನ್ನು ಶುಕ್ರವಾರ ಪ್ರದಾನ ಮಾಡಲಾಯಿತು. ಗಳಗನಾಥ ಮತ್ತು ನಾ.ಶ್ರೀ.ರಾಜಪುರೋಹಿತ ಪ್ರತಿಷ್ಠಾನ ಸಹಯೋಗದಲ್ಲಿ ಕಾದಂಬರಿ ಪಿತಾಮಹ
ಗಳಗನಾಥರ 155ನೇ ಜನ್ಮದಿನೋತ್ಸವ ಅಂಗವಾಗಿ ನಗರದಲ್ಲಿ ನಡೆದ ಸಮಾರಂಭದಲ್ಲಿ ಕಾಯ್ಕಿಣಿ ಅವರಿಗೆ 50 ಸಾವಿರ ರೂ. ನಗದು, ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

Advertisement

ಅಷ್ಟೇ ಮೊತ್ತದ ನಾ.ಶ್ರೀ.ರಾಜಪುರೋಹಿತ ಪ್ರಶಸ್ತಿಯನ್ನು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಬೆಂಗಳೂರಿನಡಾ|ದೇವರಕೊಂಡಾ ರೆಡ್ಡಿ ಅವರಿಗೆ ಕಥೆಗಾರ ಹಾಗೂ ಸಾಹಿತಿ ಡಾ|ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರದಾನ ಮಾಡಿ ಗೌರವಿಸಿದರು.
ರಾವಣನಿಗೆ ಆತ್ಮಲಿಂಗ ಕೊಟ್ಟಂತೆ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾಯ್ಕಿಣಿ, ನಾನು ಕಾದಂಬರಿ ಬರೆದಿಲ್ಲ. ಆದಾಗ್ಯೂ ಗಳಗನಾಥ ಅವರ ಹೆಸರಿನ ಪ್ರಶಸ್ತಿ ನೀಡಿರುವುದು ಖುಷಿ ಇದೆ. ಆದರೆ ಇದು ರಾವಣನ ಕೈಯಲ್ಲಿ ಆತ್ಮಲಿಂಗ ಕೊಟ್ಟಂತೆ ಅನುಭವ ನೀಡಿದೆ ಎಂದರು.

ಅನಾಮಿಕರಾಗಿ ಬರೆಯೋದು, ಪ್ರಶಸ್ತಿ ಸ್ವೀಕರಿಸುವುದು ದ್ವಂದ್ವ ಅಲ್ವಾ? ನಾವು ಬರೆದಿದ್ದು, ನಮ್ಮ ಮೇಲೆಯೇ ಪ್ರಭಾವ ಬೀರದೆ ಇದ್ದಾಗ ಬೇರೆಯವರ ಮೇಲೆ ಪ್ರಭಾವ ಬೀರುವುದು ಹೇಗೆ? ಎಂದು ಕಾದಂಬರಿ ಬರೆಯದಿರುವ ಬಗ್ಗೆ ತಮ್ಮನ್ನೇ
ಪ್ರಶ್ನಿಸಿಕೊಂಡರು.

ಎರಡೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿದ ಕನ್ನಡ ಭಾಷೆ ವಿಭಿನ್ನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಒಳಗೊಂಡಿದೆ. ಕಾವ್ಯ ಸಮಾಜದ ಇಸಿಜಿ. ಲಿಖಿತ ಸಾಹಿತ್ಯ ನಮ್ಮ ಬದುಕಿನ ಕಾರ್ಡಿಯಾ ಇದ್ದಂತೆ. ಕಥೆಗಿಂತ ಮಿಗಿಲಾದ ಸತ್ಯವೇ ಇಲ್ಲ ಎಂದರು. ಸಾಹಿತ್ಯಕ್ಕೆ ನೀಡಿದ ಕೊಡುಗೆ ಗಮನಿಸಿ ಪ್ರಶಸ್ತಿ ನೀಡಿರುವ ಪ್ರತಿಷ್ಠಾನಕ್ಕೆ ಕೃತಜ್ಞತೆ ಸಲ್ಲಿಸಿದ ಕಾಯ್ಕಿಣಿ, ಭವಿಷ್ಯದಲ್ಲಿ ಕಾದಂಬರಿ ಬರೆಯುವ ಪ್ರಯತ್ನ ಮಾಡುವೆ. ವಿದ್ಯಾರ್ಥಿಗಳಿಗೆ ಗಳಗನಾಥರ ಬಗ್ಗೆ ರುಚಿ ಹಚ್ಚುವ ಕೈಂಕರ್ಯ ನಡೆಯಬೇಕಿದೆ ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಡಾ|ಸಿದ್ದಲಿಂಗ ಪಟ್ಟಣಶೆಟ್ಟಿ, ಬಹಳಷ್ಟು ಇಳಿಯ ವಯಸ್ಸಿನ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವುದು ಸಮಂಜಸವಲ್ಲ. ವಯಸ್ಸು ಇದ್ದವರಿಗೆ ಪ್ರಶಸ್ತಿ ನೀಡಿದಾಗ ಅದಕ್ಕೆ ಮೌಲ್ಯ ಬರಲಿದೆ. ಇನ್ನಷ್ಟು ಕೆಲಸಗಳೂ ಆಗಲಿವೆ ಎಂದರು.

Advertisement

ಪ್ರಶಸ್ತಿ ಪುರಸ್ಕೃತ ಡಾ|ದೇವರಕೊಂಡಾ ರೆಡ್ಡಿ ಮಾತನಾಡಿದರು. ಪ್ರತಿಷ್ಠಾನ ಅಧ್ಯಕ್ಷ ಪ್ರೊ|ದುಷ್ಯಂತ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ಗಳಗನಾಥ, ಡಾ|ಶ್ರೀರಾಮ ಭಟ್ಟ, ಕೆ.ಆರ್‌. ಗಣೇಶ, ಶ್ರೀಧರ ಬಳಗಾರ, ಹನುಂತಗೌಡ ಗೊಲ್ಲರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next