Advertisement
ಹಣ್ಣಿನ ನೊಣಗಳ ದೇಹರಚನೆಗೂ ಮಾನವ ದೇಹರಚನೆಗೂ ಹೋಲಿಕೆ ಇದೆ. ಶೂನ್ಯ ಗುರುತ್ವದಲ್ಲಿ ನೊಣಗಳ ದೇಹದಲ್ಲಿ ಆಗುವ ಬದಲಾವಣೆಗಳು ಮಹತ್ವದ ಮಾಹಿತಿ ಒದಗಿಸಲಿವೆ. ಇದು ಭವಿಷ್ಯದ ಮಾನವಸಹಿತ ಗಗನಯಾನಕ್ಕೆ ನೆರವಾಗಲಿದೆ.
ಮನುಷ್ಯನ ದೈಹಿಕ ರಚನೆಯ ಶೇ. 70ರಷ್ಟು ಅಂಶಗಳನ್ನು ಈ ಹಣ್ಣಿನ ನೊಣಗಳ ದೇಹ ಸಂರಚನೆ ಹೋಲುತ್ತದೆ. ಹೀಗಾಗಿ ಶೂನ್ಯ ಗುರುತ್ವದಲ್ಲಿ ಇವುಗಳ ದೈಹಿಕ ಬದಲಾವಣೆಗಳ ಫಲಿತಗಳು ಬಾಹ್ಯಾಕಾಶ ಸಂಶೋಧನೆಗೆ ಅತ್ಯಂತ ಅಗತ್ಯವಾಗಿದೆ. ಕೇಂದ್ರ ಸರಕಾರವು ಈ ಯೋಜನೆಗೆ 78 ಲಕ್ಷ ರೂ.ಗಳನ್ನು ನೀಡಿದ್ದು, ಸತತ ಎರಡು ವರ್ಷಗಳ ಕಾಲ ಹಣ್ಣಿನ ನೊಣಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ಮಾದರಿ ಕಿಟ್ ಸಜ್ಜುಗೊಳಿಸಲಾಗಿದೆ.
ಕೃಷಿ ಸಂಶೋಧನೆ ಮತ್ತು ಫಲಿತಗಳಲ್ಲಿ ಅತ್ಯಂತ ಉತ್ತಮ ಸಾಧನೆ ಮಾಡುವ ಮೂಲಕ ದೇಶದ ಉತ್ಕೃಷ್ಟ 10 ವಿ.ವಿ.ಗಳ ಪಟ್ಟಿಯಲ್ಲಿರುವ ಧಾರವಾಡ ಕೃಷಿ ವಿ.ವಿ.ಯ ಜೀವಶಾಸ್ತ್ರ ವಿಭಾಗದ ಯುವ ವಿಜ್ಞಾನಿ ಡಾ| ರವಿಕುಮಾರ ಹೊಸಮನಿ ಮತ್ತು ತಂಡ ಶೋಧಿಸಿದ ಈ ಮಾದರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
Related Articles
ಬಾಹ್ಯಾಕಾಶ ಮತ್ತು ಅನ್ಯಗ್ರಹಗಳಲ್ಲಿ ಮಾನವ ವಾಸಕ್ಕೆ ಅಗತ್ಯ ಸಂಶೋಧನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಶೂನ್ಯ ಗುರುತ್ವದಲ್ಲಿ ಆಹಾರಗಳನ್ನು ಸಂರಕ್ಷಿಸಿಡುವ ಮತ್ತು ಗಗನಯಾನಿಗಳ ಆರೋಗ್ಯ ರಕ್ಷಣೆಗೂ ಅಗತ್ಯವಾದ ಸಂಶೋಧನೆಗೆ ಇಲ್ಲಿನ ಫಲಿತಾಂಶ ನೆರವಾಗಲಿದೆ.
Advertisement
ಗಗನಯಾನಿಗಳ ಆರೋಗ್ಯದಲ್ಲಿ ಉಂಟಾಗುವ ಎಲುಬು ಸವೆತ, ಮೂತ್ರಪಿಂಡಗಳಲ್ಲಿ ಕಲ್ಲು ಮತ್ತಿತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೂಡ ಕಂಡುಕೊಳ್ಳುವ ನಿಟ್ಟಿನಲ್ಲಿ ಹಣ್ಣಿನ ನೊಣಗಳನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಕೇರಳದ ತಿರುವನಂತಪುರದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಇದರ ಹಾರ್ಡ್‌ವೇರ್ ಕಿಟ್ ತಯಾರಿಸಿದೆ.
ಅಧ್ಯಯನ ಕಿಟ್‌ನಲ್ಲಿ ಏನಿದೆ ?ಧಾರವಾಡ ವಿ.ವಿ. ವಿಜ್ಞಾನಿಗಳು ಒದಗಿಸುವ ಕಿಟ್‌ನಲ್ಲಿ 20 ಹಣ್ಣಿನ ನೊಣಗಳು ಇರಲಿವೆ. ಈ ಪೈಕಿ 10 ಗಂಡು, 10 ಹೆಣ್ಣು. ಅವುಗಳ ಸಂತಾನೋತ್ಪತ್ತಿಯಾಗಿ ಸಂಖ್ಯೆ ಹೆಚ್ಚಾಗುತ್ತದೆ. ಆ ಕಿಟ್ ಒಳಗಡೆ ಆಮ್ಲಜನಕ ಇರಲಿದೆ. ಜತೆಗೆ ರವೆ, ಬೆಲ್ಲ ಸೇರಿಸಿದ ಪಾಯಸದ ರೂಪದಲ್ಲಿ ಅವುಗಳ ಆಹಾರ ಸಿದ್ಧಮಾಡಿ ಅದು ಗಟ್ಟಿಯಾಗುವ ಮುನ್ನವೇ ಕಿಟ್‌ನಲ್ಲಿ ಹಾಕಲಾಗುತ್ತದೆ. ಅದಕ್ಕೆ ಸೋಡಿಯಂ ಅಕ್ಸಲೈಟ್ ಸೇರಿಸಲಾಗುತ್ತದೆ. ಅಮೆರಿಕದ ನಾಸಾದಲ್ಲಿ ನಾನು ಮಾಡಿದ ಸಂಶೋಧನೆಗಳನ್ನು ಇನ್ನಷ್ಟು ಒರೆಗೆ ಹಚ್ಚಿ ಭಾರತ ಗಗನಯಾನಕ್ಕೆ ಪೂರಕ ಮಾದರಿ ಶೋಧಿಸಿದ್ದೇವೆ. ಮಾನವನ ಅನ್ಯಗ್ರಹ ವಾಸದಲ್ಲಿ ಆಹಾರ ಮತ್ತು ಸೂಕ್ಷ್ಮ ಜೀವಿಗಳ ಪ್ರಕ್ರಿಯೆಗಳು ಬಹುಮುಖ್ಯ. ಹೀಗಾಗಿ ನಮ್ಮ ಸಂಶೋಧನೆಗಳನ್ನು ಇನ್ನಷ್ಟು ಹೆಚ್ಚಿಸುತ್ತೇವೆ.
-ಡಾ| ರವಿಕುಮಾರ ಹೊಸಮನಿ, ಗುರುತ್ವ-ಜೈವಿಕ ವಿಜ್ಞಾನಿ, ಧಾರವಾಡ ಕೃಷಿ ವಿ.ವಿ. ಬಸವರಾಜ್ ಹೊಂಗಲ್