ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರು ಆ.11ರಂದು 109 ನೂತನ ತಳಿಗಳನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ಇಲ್ಲಿನ ಕೃಷಿ ವಿವಿಯ ಎರಡು ಹೊಸ ತಳಿ ಎಂಬುದು ವಿಶೇಷ. ಏಕದಳ ಧಾನ್ಯ ಮತ್ತು ಸಿರಿಧಾನ್ಯಗಳಲ್ಲಿ ಕೃಷಿ ವಿವಿ ವಿಜ್ಞಾನಿಗಳಿಂದ ಅಭಿವೃದ್ಧಿ ಪಡಿಸಿದ ತಳಿಗಳಾದ ಮುಂಗಾರು ಜೋಳದ ತಳಿ ಡಿಎಸ್ ಎಚ್-6 (ಸಿಎಸ್‌ಎಚ್-49) ಮತ್ತು ಬರಗು ತಳಿಗಳು ಸಿಪಿಆರ್‌ಎಂವಿ-1 (ಡಿಎಚ್‌ಪಿಎಂ 60-4) ಸೇರಿವೆ. ಈ ತಳಿಗಳನ್ನು ಅಭಿವೃದ್ಧಿಪಡಿಸಿದ ನಂತರ ಕೇಂದ್ರದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ 5 ವರ್ಷಗಳ ಸತತ ಪ್ರಯೋಗಗಳ ಫಲಿತಾಂಶವನ್ನು ಕೂಲಂಕುಶವಾಗಿ ವಿಶ್ಲೇಷಿಸಿ, ವಿವಿಧ ಸಭೆಗಳಲ್ಲಿ ಚರ್ಚಿಸಿ ರಾಷ್ಟ್ರಮಟ್ಟದ ತಳಿ ಬಿಡುಗಡೆ ಸಮಿತಿಗೆ (ಸಿವಿಆರ್‌ಸಿ) ಸಲ್ಲಿಸಲಾಗಿತ್ತು.
Advertisement
ಆ.2ರಂದು ನಡೆದ 92ನೇ ರಾಷ್ಟ್ರದ ಕೇಂದ್ರೀಯ ತಳಿ ಬಿಡುಗಡೆ ಸಮಿತಿಯಲ್ಲಿ ಈ ಎರಡು ತಳಿಗಳು ಬಿಡುಗಡೆಯಾಗಿವೆ. ಬಳಿಕ ಈತಳಿಗಳನ್ನು ನರೇಂದ್ರ ಮೋದಿ ಅವರು ಆ.11ರಂದು ಲೋಕಾರ್ಪಣೆ ಮಾಡಿದ್ದಾರೆ. ದೇಶದ ಕೃಷಿ ಪ್ರಗತಿಗೆ ಪೂರಕ ಹಾಗೂ ಹವಾಮಾನ ವೈಪರೀತ್ಯಗಳಿಗೆ ಒಗ್ಗಿಕೊಂಡು ಬೆಳೆಯುವ ಅಧಿಕ ಪೌಷ್ಟಿಕ ಮೌಲ್ಯ ಹೊಂದಿರುವ ಇಂತಹ ತಳಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬರಲಿ ಎಂದು ಕೃಷಿ ವಿವಿ ಕುಲಪತಿ ಡಾ| ಪಿ.ಎಲ್.ಪಾಟೀಲ ಆಶಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಈ ಸಂಕರಣ ತಳಿಯನ್ನು ಐದು ರಾಜ್ಯಗಳ (ಕರ್ನಾಟಕ, ತಮಿಳುನಾಡು, ರಾಜಸ್ಥಾನ, ತೆಲಂಗಾಣ ಹಾಗೂ ಗುಜರಾತ) ಮುಂಗಾರು ಜೋಳ ಬೆಳೆಯುವ ಪ್ರದೇಶಕ್ಕೆ ಶಿಫಾರಸು ಮಾಡಲಾಗಿದೆ. ಸರಾಸರಿ ಪ್ರತಿ ಹೆಕ್ಟೆರ್‌ಗೆ 38ರಿಂದ 42 ಕ್ವಿಂಟಲ್ ಕಾಳಿನ ಹಾಗೂ 110ರಿಂದ 120 ಕ್ವಿಂಟಲ್ ಮೇವಿನ ಇಳುವರಿ ಕೊಡುತ್ತದೆ. ಇದು ರಾಷ್ಟ್ರಮಟ್ಟದಲ್ಲಿ ಮೊದಲಿನ ಉತ್ತಮ ಸಂಕರಣ ತಳಿ ಸಿಎಸ್‌ಎಚ್-30ಕ್ಕಿಂತ ಶೇ.13.5 ಹೆಚ್ಚು ಕಾಳಿನ ಹಾಗೂ ಶೇ.7.4 ಹೆಚ್ಚು ಮೇವಿನ ಇಳುವರಿ ನೀಡುತ್ತದೆ. ಇದು
ಅಲ್ಪಾವಧಿ ತಳಿಯಾಗಿದ್ದು ತಕ್ಕಮಟ್ಟಿಗೆ ಕಾಳಿನ ಬೂಳಸು(ಕಾಳು ಕಪ್ಪಾಗುವುದು)ರೋಗವನ್ನು ತಡೆದುಕೊಳ್ಳುತ್ತದೆ. ಸಿರಿಧಾನ್ಯದ ಬರಗು:ಡಿಎಚ್‌ಪಿಎಂ 60-4 (ಸಿಪಿಆರ್‌ಎಂವ್ಹಿ-1)
ರಾಷ್ಟ್ರಮಟ್ಟದಲ್ಲಿ ಈ ತಳಿಯನ್ನು ಕರ್ನಾಟಕ ಹಾಗೂ ತಮಿಳುನಾಡಿನ ಮಳೆಯಾಶ್ರಿತ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ. ಪ್ರತಿ ಹೆಕ್ಟೆರ್‌ಗೆ 24-26 ಕ್ವಿಂಟಲ್ ಕಾಳಿನ ಹಾಗೂ 43ರಿಂದ 45 ಕ್ವಿಂಟಲ್ ಮೇವಿನ ಇಳುವರಿ ಕೊಡುತ್ತದೆ. ಇದು ರಾಷ್ಟ್ರಮಟ್ಟದಲ್ಲಿ
ಉತ್ತಮ ತಳಿಯಾದ ಟಿಎನ್ ಎಯು-164ಕ್ಕಿಂತ ಶೇ.20.8ಕಾಳಿನ ಮತ್ತು ಶೇ.3.7 ಅಧಿಕ ಮೇವಿನ ಇಳುವರಿ ನೀಡುತ್ತದೆ. ತಕ್ಕಮಟ್ಟಿಗೆ ಈ ತಳಿಯು ಸುಳಿ ಬಾಧೆಯನ್ನು ತಡೆದುಕೊಳ್ಳುತ್ತದೆ.