Advertisement

ಸಾಧಕ ವಿದ್ಯಾರ್ಥಿಗಳಿಗೆ ಶಹಬ್ಟಾಸ್‌ ಹೇಳಿದ ಧಾರವಾಡ ಡಿಸಿ

06:51 PM Aug 12, 2021 | Team Udayavani |

ಧಾರವಾಡ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದು ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಡಿಸಿ ನಿತೇಶ ಪಾಟೀಲ ಅವರು ಬುಧವಾರ ತಮ್ಮ ನಿವಾಸಕ್ಕೆ ಕರೆಸಿ ಸ್ಫೂರ್ತಿ ತುಂಬಿದರು.

Advertisement

ವಿದ್ಯಾರ್ಥಿಗಳೊಂದಿಗೆ ಉಪಾಹಾರ ಸೇವಿಸಿ, ಹಿರಿಯ ಅಧಿಕಾರಿಗಳ ಜತೆ ಸೇರಿ ಸನ್ಮಾನಿಸಿ, ಅಭಿನಂದಿಸಿದರು. ವಿದ್ಯಾರ್ಥಿಗಳ ಸೆಲ್ಫಿಗೆ ಫೋಸ್‌ ನೀಡಿದ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ವಿದ್ಯಾರ್ಥಿಗಳು ತಮ್ಮ ಕನಸು, ಮುಂದಿನ ಗುರಿಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡರು.

ಈ ವೇಳೆ ಮಾತನಾಡಿದ ಡಿಸಿ ನಿತೇಶ ಪಾಟೀಲ, 2021ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಜಿಲ್ಲೆಯಿಂದ ಒಟ್ಟು 25539 ರೆಗ್ಯುಲರ್‌ ವಿದ್ಯಾರ್ಥಿಗಳ ಪೈಕಿ 4463 ಎ ಪ್ಲಸ್‌, 9787 ಎ, 9978 ಬಿ, 2311ಸಿ ಗ್ರೇಡ್‌ನ‌ಲ್ಲಿ ಪಾಸ್‌ ಆಗಿದ್ದಾರೆ. ಧಾರವಾಡ ಪ್ರಸೆಂಟೇಷನ್‌ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ನಾಗಲಕ್ಷ್ಮೀ ಅಗಡಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬರುವುದರೊಂದಿಗೆ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ ಎಂದರು.

ಜಿಪಂ ಸಿಇಒ ಡಾ|ಸುಶೀಲಾ.ಬಿ. ಮಾತನಾಡಿ, ವಿದ್ಯಾರ್ಥಿಗಳ ಓದು ನಿರಂತರವಾಗಿರಲಿ. ನಿರ್ದಿಷ್ಟ ಗುರಿಯೊಂದಿಗೆ ಶ್ರಮ ಪಟ್ಟರೆ ಯಾವುದೂ ಅಸಾಧ್ಯವಲ್ಲ. ತಮಗಿರುವ ಸವಲತ್ತು, ಅವಕಾಶಗಳನ್ನು ಉಪಯೋಗಿಸಿ, ಸಾಧನೆ ಮಾಡಿ ಮಾದರಿಯಾಗಬೇಕು ಎಂದರು.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ ಮಾತನಾಡಿ, ಸಾಧನೆಗೆ ಭಾಷೆ, ಪ್ರದೇಶ ಮುಖ್ಯವಲ್ಲ. ಕನ್ನಡದಲ್ಲಿ ಐಎಎಸ್‌ ಬರೆದು ಪಾಸಾಗಿರುವ ನಾನು ಈ ಧಾರವಾಡದಲ್ಲಿ ಬೆಳೆದವನು. ನಿರಂತರ ಶ್ರಮ, ಏಕಾಗ್ರತೆ, ಛಲ ನಮ್ಮನ್ನು ಗುರಿ ತಲುಪಿಸುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿ ಸಾಧನೆಯ ಛಲ ಬೆಳೆಸಿಕೊಳ್ಳಬೇಕು ಎಂದರು.

Advertisement

ಐಎಎಸ್‌ ಪ್ರೊಬೇಷನರಿ ಅಧಿಕಾರಿ ಮಧುಕರ ಗಿತ್ತೆ ಮಾತನಾಡಿ, ಎಸ್‌ಎಸ್‌ಎಲ್‌ಸಿ ನಂತರದ ಓದು ಜೀವನದ ಪ್ರಮುಖ ಘಟ್ಟ. ವಿದ್ಯಾರ್ಥಿಗಳು ಯಾವುದೇ ವಿಷಯ ತೆಗೆದುಕೊಂಡರೂ ನಿರಂತರವಾಗಿ, ಆಸಕ್ತಿಯಿಂದ ಓದುವುದು ಮುಖ್ಯ. ಐಎಎಸ್‌, ಐಪಿಎಸ್‌ ಸೇರಿದಂತೆ ಯಾವುದೂ ಕಬ್ಬಿಣದ ಕಡಲೆ ಅಲ್ಲ. ಆಸಕ್ತಿಯಿಂದ ಓದುವುದರಿಂದ ಅಸಾಧ್ಯವೆನಿಸಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಎಲ್‌.ಹಂಚಾಟೆ ಮಾತನಾಡಿ, 2021ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಧಾರವಾಡ ಜಿಲ್ಲೆಯ ಫಲಿತಾಂಶ ಶೇ.100 ಸಾಧನೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಪ್ರಮಾಣಪತ್ರ ನೀಡಿದರು. ಕ್ಷೇತ್ರ ಶಿಕ್ಷಣಾ ಧಿಕಾರಿ ಗಿರೀಶ ಪದಕಿ, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಸಾಗರ ಪಡ್ನವಿಸ್‌, ಜಯದೇವ ಒಂಟಮೂರಿಮಠ ಇದ್ದರು. ಕಾರ್ಯಕ್ರಮ ನಂತರ ಜಿಲ್ಲಾ ಧಿಕಾರಿ ನಿವಾಸದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮಾಳನ್ನು ಬಂಧಿ ಯಾಗಿ ಇಟ್ಟಿದ್ದ ಕೋಣೆಗೆ ವಿದ್ಯಾರ್ಥಿಗಳು ಭೇಟಿ ನೀಡಿದರು. ಜಿಲ್ಲಾಧಿಕಾರಿ ನಿವಾಸದ ವಿಹಂಗಮ ನೋಟ ಆನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next