ಧಾರವಾಡ: ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಚನೆಗಳನ್ನು ಪಾಲಿಸದೆ, ಕರ್ತವ್ಯನಿರತ ಅಧಿಕಾರಿಗಳಿಗೆ ಸ್ಪಂದಿಸದಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ವರ್ತಿಕಾ ಕಟಿಯಾರ್ ಹೇಳಿದರು.
ನಗರದ ಧಾರವಾಡ ಪೊಲೀಸ್ ಹೆಡ್ ಕ್ವಾರ್ಟ್‌ರ್ಸ್‌ದಲ್ಲಿರುವ ದುರ್ಗಾದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಜಿಲ್ಲೆಯ ವಿವಿಧ ತಾಲೂಕಿನ ಧಾರ್ಮಿಕ ಮುಖಂಡರ, ಧಾರ್ಮಿಕ ಸಂಸ್ಥೆಗಳ ಪ್ರಮುಖರೊಂದಿಗೆ ಶಾಂತಿಪಾಲನೆ ಹಾಗೂ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಸರ್ಕಾರದ ನಿರ್ದೇಶನ ಮತ್ತು ಕೊರೊನಾ ವೈರಸ್ ಹರಡುವ ಗಂಭೀರತೆಯನ್ನು ಮನವರಿಕೆ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ತೆರಳಿ ಮನೆಯಿಂದ ಹೊರ ಬರದಂತೆ, ರಸ್ತೆಗಿಳಿಯದಂತೆ ತಿಳಿವಳಿಕೆ ನೀಡುತ್ತಿದ್ದಾರೆ ಎಂದರು.
ಡಿಸಿ ದೀಪಾ ಚೋಳನ್ ಮಾತನಾಡಿ, ಪಡಿತರ ವಿತರಣೆ ಆರಂಭವಾಗಿದೆ. ಕಾಯಿಪಲ್ಯ ಸೇರಿದಂತೆ ಎಲ್ಲ ತರಕಾರಿ, ಹಣ್ಣು ಹಂಪಲ ತಮ್ಮ ಮನೆಯ ಬಾಗಿಲಿಗೆ ಬರುವಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಕೃಷಿ ಪೂರಕ ಕಾರ್ಯಗಳಿಗೆ ತಡೆ ಇಲ್ಲ. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು ಎಂದರು. ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ನಾಯಕ್ ಪ್ರಾಸ್ತಾವಿಕ ಮಾತನಾಡಿದರು.
ಮುಗದ ಗ್ರಾಮದ ಎಸ್. ಎಸ್.ಪೀರಜಾದೆ, ಕುಂದಗೋಳದ ಮಲ್ಲಿಕಾರ್ಜುನ ಕಿರೇಸೂರ ರಾಜೇಸಾಬ ಕಳ್ಳಿಮನಿ, ಅಣ್ಣಿಗೇರಿಯ ಎಚ್.ಎಚ್ ಗುಡನಾಯಕ್, ನವಲಗುಂದದ ಅಬ್ಟಾಸ ದೇವರಿಡು, ಬ್ಯಾಹಟ್ಟಿಯ ಮಂಜುನಾಥ ಮಲ್ಹಾರಿ, ಹಸನಸಾಬ ತಡಸದ, ಉಪ್ಪಿನ ಬೆಟಗೇರಿ ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ ಸೇರಿದಂತೆ ಅನೇಕ ಮುಖಂಡರು ಅನಿಸಿಕೆ ಹಂಚಿಕೊಂಡರು.
ಕಲಘಟಗಿ ಸಿಪಿಐ ವಿಜಯ ಬಿರಾದಾರ ಸ್ವಾಗತಿಸಿ, ನಿರೂಪಿಸಿದರು. ಧಾರವಾಡ ಗ್ರಾಮೀಣ ಸಿಪಿಐ ಎಸ್.ಸಿ ಪಾಟೀಲ್,ಗ್ರಾಮೀಣ ಪಿಎಸ್‌ಐ ಮಹೇಂದ್ರ ನಾಯಕ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.