Advertisement

ಕಿಲ್ಲರ್‌ ಕಟ್ಟಡ: ರಕ್ಷಣಾ ಕಾರ್ಯಾಚರಣೆ ಮುಕ್ತಾಯ

01:40 AM Mar 26, 2019 | Sriram |

ಧಾರವಾಡ: ಕುಮಾರೇಶ್ವರ ನಗರದಲ್ಲಿ ಸಂಭವಿಸಿದ ಕಟ್ಟಡ ದುರಂತದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಒಟ್ಟು 19 ಮೃತದೇಹಗಳು ಪತ್ತೆಯಾಗಿದ್ದು, 57 ಜನರ ರಕ್ಷಣೆ ಮಾಡಲಾಗಿದೆ.

Advertisement

ದೇಶದಲ್ಲಿ ನಡೆದ ಕಟ್ಟಡ ದುರಂತಗಳ ಪೈಕಿ ಅತಿ ಹೆಚ್ಚು ಸಮಯ 132 ಗಂಟೆಗಳ ಕಾಲ ಕಾರ್ಯಾಚರಣೆ ನಡೆದಿದ್ದು, ಅತಿ ಹೆಚ್ಚು ಜನರನ್ನು ರಕ್ಷಿಸಿದ “ಆಪರೇಷನ್‌ ಮಿರ್ಯಾಕಲ್‌’ ಇದಾಗಿದೆ ಎಂದು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕ ದಳದ ಮುಖ್ಯಸ್ಥರು ಹೇಳಿದ್ದಾರೆ. ಮಾ.19ರಂದು ಮಧ್ಯಾಹ್ನ ಕುಸಿದು ಬಿದ್ದ ವಾಣಿಜ್ಯ ಸಂಕೀರ್ಣದ ಕಾರ್ಯಾಚರಣೆ ಸೋಮವಾರ ಬೆಳಗಿನ ಜಾವದವರೆಗೂ ನಡೆಯಿತು.

ಕೃತಜ್ಞತೆ :
ಸತತ 132 ಗಂಟೆ ರಕ್ಷಣಾ ಕಾರ್ಯಾಚರಣೆ ಮುಗಿಸಿದ ನಂತರ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕ ದಳದ ಎಲ್ಲಾ ಸಿಬ್ಬಂದಿಗೆ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಕೃತಜ್ಞತೆ ಸಲ್ಲಿಸಿದರು. ಸ್ವಯಂಸೇವಾ ಸಂಸ್ಥೆಗಳು ಮತ್ತು ಕಾಂಗ್ರೆಸ್‌ ಮುಖಂಡರು, ಹೋರಾಟಗಾರ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ಸಿಬ್ಬಂದಿಗೆ ಗುಲಾಬಿ ಹೂ ಮತ್ತು ಸಿಹಿ ಹಂಚಿದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರಿಗೆ ಜಿಲ್ಲಾಡಳಿತದಿಂದ ಭೋಜನ ಮಾಡಿಸಿ ಕಳುಹಿಸಿಕೊಡಲಾಯಿತು.

ಕಟ್ಟಡಗಳಿಗೆ ನೋಟಿಸ್‌:
ಕಿಲ್ಲರ್‌ ಕಟ್ಟಡದ ಎಂಜಿನಿಯರ್‌ ವಿವೇಕ್‌ ಪವಾರ ನೀಲನಕ್ಷೆ ಸಿದ್ಧಪಡಿಸಿದ ಮತ್ತು ವಿನ್ಯಾಸ ರೂಪಿಸಿದ ಇತರ ಕಟ್ಟಡಗಳನ್ನು ಗುರುತಿಸಲು ಪಾಲಿಕೆ ನಿರ್ಧರಿಸಿದೆ. ಈ ಕುರಿತು ಪಾಲಿಕೆ ಆಯುಕ್ತ ಶಕೀಲ್‌ ಅಹ್ಮದ್‌ ಮಾತನಾಡಿ, ಅವಳಿ ನಗರದಲ್ಲಿರುವ ಎಲ್ಲಾ ಬಹುಮಹಡಿ ಕಟ್ಟಡಗಳ ಸುರಕ್ಷತೆ ಮತ್ತು ಗುಣಮಟ್ಟ ಪರೀಕ್ಷೆ ನಡೆಸಲಾಗುವುದು. ಕಟ್ಟಡ ಮಾಲೀಕರಿಗೆ ನೋಟಿಸ್‌ ನೀಡಲಾಗುವುದು ಎಂದು ಹೇಳಿದರು.

ಕಳೆದ ಆರು ದಿನಗಳಿಂದ ಕಟ್ಟಡ ಕುಸಿತ ಸ್ಥಳದಲ್ಲಿ ನಡೆದ ಎಲ್ಲಾ ಬಗೆಯ ಕಾರ್ಯಾಚರಣೆಯ ಖರ್ಚು-ವೆಚ್ಚವನ್ನು ಸದ್ಯಕ್ಕೆ ಜಿಲ್ಲಾಡಳಿತವೇ ಭರಿಸಲಿದ್ದು, ನಂತರ ಕಟ್ಟಡ ಮಾಲೀಕರಿಂದ ವಸೂಲಿ ಮಾಡಲಾಗುವುದು. ಕಾರ್ಯಾಚರಣೆಗೆ ಕೈ ಜೋಡಿಸಿದ ಎಲ್ಲರಿಗೂ ಕೃತಜ್ಞತೆಗಳು.
-ದೀಪಾ ಚೋಳನ್‌, ಜಿಲ್ಲಾಧಿಕಾರಿ, ಧಾರವಾಡ

Advertisement

ಒಟ್ಟು 76 ಜನರನ್ನು ಕಾರ್ಯಾಚರಣೆ ಮೂಲಕ ಹೊರಕ್ಕೆ ತೆಗೆಯಲಾಯಿತು. ಈ ಪೈಕಿ 19 ಜನರು ಮೃತಪಟ್ಟಿದ್ದು, ಇನ್ನುಳಿದ 57 ಜನರನ್ನು ರಕ್ಷಿಸಲಾಗಿದೆ. ಸಾರ್ವಜನಿಕರು ಕಾಣೆಯಾದವರ ಬಗ್ಗೆ ನೀಡಿದ ಮಾಹಿತಿ ಆಧಾರದ ಮೇಲೆ ಇಷ್ಟು ಜನರಿದ್ದರು ಎಂದು ಲೆಕ್ಕ ಹಾಕಿ ಕಾರ್ಯಾಚರಣೆ ಮಾಡಿದ್ದೇವೆ.
– ವರದರಾಜ್‌, ಅಗ್ನಿಶಾಮಕ ದಳದ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next