ಧಾರವಾಡ: ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಅಧಿಕಾರ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದ್ದಾರೆ.
ಅಧ್ಯಕ್ಷರಾಗಿ ಹೆಬ್ಬಳ್ಳಿ ಎಪಿಎಂಸಿ ಮತಕ್ಷೇತ್ರದ ಸಿದ್ದಣ್ಣ ಪ್ಯಾಟಿ ಹಾಗೂ ಉಪಾಧ್ಯಕ್ಷರಾಗಿ ಕಾಶೇನಟ್ಟಿ ಕ್ಷೇತ್ರದ ರಾಯಪ್ಪ ಹುಡೇದ ಆಯ್ಕೆಯಾಗಿದ್ದಾರೆ. ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಲಾ ಹುದ್ದೆಗೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ನಿಗದಿ ಕ್ಷೇತ್ರದ ಕೃಷ್ಣಾ ಕೊಳ್ಳಾನಟ್ಟಿ ಹಾಗೂ ಸಿದ್ದಣ್ಣ ಪ್ಯಾಟಿ, ಉಪಾಧ್ಯಕ್ಷ ಸ್ಥಾನಕ್ಕೆ ನರೇಂದ್ರ ಕ್ಷೇತ್ರದ ಚೆನ್ನವೀರಗೌಡ ಪಾಟೀಲ ಹಾಗೂ ರಾಯಪ್ಪ ಹುಡೇದ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸ್ಸು ಪಡೆಯಲು ಅರ್ಧ ಗಂಟೆ ಸಮಯಾವಕಾಶ ಇತ್ತು.
ಯಾವ ಅಭ್ಯರ್ಥಿ ತಮ್ಮ ನಾಮಪತ್ರ ವಾಪಸ್ ಪಡೆಯದ ಕಾರಣ ಚುನಾವಣೆ ನಡೆಯಿತು. ಸಿದ್ದಣ್ಣ ಪ್ಯಾಟಿ ಒಂಭತ್ತು ಮತ ಪಡೆದು ಅಧ್ಯಕ್ಷರಾದರೆ, ಪ್ರತಿಸ್ಪರ್ಧಿ ಕೃಷ್ಣಾ ಕೊಳ್ಳಾನಟ್ಟಿ7 ಮತ ಪಡೆದು ಸೋಲು ಅನುಭವಿಸಿದರು.
ಇದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ರಾಯಪ್ಪ ಹುಡೇದ 9 ಮತಗಳನ್ನು ಪಡೆದು ಗೆದ್ದರೆ, ಚೆನ್ನವೀರಗೌಡ ಪಾಟೀಲ 7 ಮತಗಳನ್ನು ಪಡೆದು 2 ಮತಗಳ ಅಂತರದಿಂದ ಸೋಲು ಅನುಭವಿಸಿದರು. ತಹಶೀಲ್ದಾರ ಆರ್.ವಿ. ಕಟ್ಟಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸಿದ್ದಣ್ಣ ಪ್ಯಾಟಿ ಹಾಗೂ ರಾಯಪ್ಪ ಹುಡೇದ ಅವರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಯಿತು.