ವಿಜಯಪುರ: ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ದುಡಿತದ ವೇತನ ನೀಡುವಲ್ಲಿ ವಂಚನೆ ಮಾಡಲಾಗುತ್ತಿದೆ. ಇದು ಸೇರಿದಂತೆ ಇತರೆ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಫೆ.13-14 ರಂದು ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಾವು ಹಮ್ಮಿಕೊಂಡಿರುವ ಹೋರಾಟದ ವಿವರ ನೀಡಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 13 ಹಾಗೂ 14 ರಂದು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಆರೋಗ್ಯ ಇಲಾಖೆ ಹಾಗೂ ಜನರ ಮಧ್ಯೆ ಸೇತುವಾಗಿ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಾರೆ. ಆದರೆ ದುಡಿಮೆಗೆ ತಕ್ಕ ಸಂಬಳ ನೀಡುವಲ್ಲಿ ವಂಚನೆ ಮಾಡಲಾಗುತ್ತದೆ. ಕಾರ್ಯಕರ್ತೆಯರು ಆಸ್ಪತ್ರೆಗೆ ರೋಗಿಗಳನ್ನು ಕರೆತರುವ ಹಾಗೂ ರೋಗದ ಆಧಾರದಲ್ಲಿ 50-100 ಅಂತೆಲ್ಲ ಸಂಭಾವನೆ ನೀಡಲಾಗುತ್ತದೆ. ಆದರೆ ತಿಂಗಳ ಕೊನೆಯಲ್ಲಿ ಆಶಾ ಕಾರ್ಯಕರ್ತೆ ಸಲ್ಲಿಸಿದ ಸೇವೆಯ ಸಂಭಾವನೆಯಲ್ಲಿ ಅರ್ಧವೂ ಸಿಗದಂತೆ ವಂಚನೆ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.
ಕಳೆದ 8 ವರ್ಷಗಳಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾಗಿದೆ. ಆದರೆ ಆಶಾ ಕಾರ್ಯಕರ್ತೆ ಸಲ್ಲಿಸಿದ ಸೇವೆಯನ್ನು ಡಾಟಾ ಎಂಟ್ರಿ ಮಾಡುವಲ್ಲಿ ಭಾರಿ ವಂಚನೆ ಮಾಡಲಾಗುತ್ತಿದೆ. ಈ ವಂಚನೆ ಆರಂಭದಿಂದಲೂ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ ಎಂದು ದೂರಿದರು.
ಆರೋಗ್ಯ ಇಲಾಖೆಯಲ್ಲಿ ಶೇ.30 ಕ್ಕಿಂತ ಹೆಚ್ಚು ಸಿಬ್ಬಂದಿ ಕೊರತೆ ಮಧ್ಯೆಯೂ ಪ್ರಾಮಾಣಿಕವಾಗಿ ದುಡಿಯುವ ಆಶಾ ಕಾರ್ಯಕರ್ತೆಯರ ಸಂಭಾವನೆಯ ವಂಚನೆ ಹಣ ಎಲ್ಲಿಗೆ ಹೋಗುತ್ತಿದೆ. ಈ ಬಗ್ಗೆ ಹಿಂದಿನ ಸರ್ಕಾರಗಳು, ಹಾಲಿ ಸರ್ಕಾರದ ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಎನ್.ಎಚ್.ಎಂ. ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಕಳೆದ 8 ತಿಂಗಳಲ್ಲಿ 4 ಬಾರಿ ಸಭೆ ಮಾಡಿದರೂ ಆಶಾ ಕಾರ್ಯಕರ್ತೆಯರ ಸಮಸ್ಯೆಗೆ ಪರಿಹಾರ ಸಿಗುವ ಬದಲು ಸಮಸ್ಯೆಗಳು ಹೆಚ್ಚುತ್ತಲೇ ಸಾಗಿವೆ ಎಂದು ಕಿಡಿಕಾರಿದರು.
ಇದಲ್ಲದೇ ಇಲಾಖೆಯಿಂದ ಮೊಬೈಲ್ ನೀಡದಿದ್ದರೂ ಆಧುನಿಕ ಸುಧಾರಿತ ತಂತ್ರಜ್ಞಾನದ ಆ್ಯಪ್ ನಲ್ಲಿ ಕೆಲಸ ಮಾಡುವಂತೆ ಒತ್ತಡ ಹೇರಲಾಗುತ್ತದೆ. ಸುಧಾರಿತ ಗುಣಮಟ್ಟದ ಮೊಬೈಲ್ ಖರೀದಿಸಲು ಆಶಾ ಕಾರ್ಯಕರ್ತೆಯರು ತಮ್ಮ ದುಡಿಮೆಯ 2-3 ತಿಂಗಳ ವೇತನವನ್ನು ಸರ್ಕಾರದ ಯೋಜನೆಗಾಗಿ ವ್ಯಯಿಸುವ ದುಸ್ಥಿತಿ ಎದುರಾಗಿದೆ. ಮೊಬೈಲ್ ನಲ್ಲಿ ಆ್ಯಪ್ ನಲ್ಲೇ ಕೆಲಸ ಮಾಡದಿದ್ದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಒಡ್ಡಲಾಗುತ್ತದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 6ನೇ ಗ್ಯಾರಂಟಿಯಾಗಿ ಆಶಾ ಕಾರ್ಯಕರ್ತೆಯರಿಗೆ 5 ಸಾವಿರ ರೂ. ನಿಂದ 8 ಸಾವಿರ ರೂ.ಗೆ ಸಂಬಳ ಹೆಚ್ಚಿಸುವ ಭರವಸೆ ನೀಡಿದ್ದಾರೆ. ನೀಡಿರುವ ಈ ಭರವಸೆಯೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಹೋರಾತ್ರಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ವಿವರಿಸಿದರು.
ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಎಚ್.ಟಿ. ಮಲ್ಲಿಕಾರ್ಜುನ, ಎಚ್.ಟಿ. ಭರತಕುಮಾರ, ಭಾರತಿ ದೇವಕತೆ, ಅಂಬಿಕಾ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.