Advertisement

ಧರ್ಮಸ್ಥಳದಲ್ಲಿ ಭಕ್ತರಿಂದ ಭಕ್ತಿ‌ ಸಡಗರದಿಂದ ಅಹೋರಾತ್ರಿ ಶಿವರಾತ್ರಿ ಜಾಗರಣೆ

07:49 AM Feb 19, 2023 | Team Udayavani |

ಬೆಳ್ತಂಗಡಿ: ಜಗತ್ತಿನ ದೋಷ ಪರಿಹರಿಸಬಲ್ಲ ಏಕಮಾತ್ರ ದೇವ ವಿಷಕಂಠ. ನಮ್ಮ ಹೃದಯಶುದ್ಧವಾಗಿದ್ದಲ್ಲಿ ಭಾವನೆ, ಕೂಗು ಭಗವಂತನಿಗೆ ವ್ಯವಹರಿಸುತ್ತದೆ. ಪರಿಶುದ್ಧ ಮನ, ವಚನ, ಕಾಯದಿಂದ ನಿತ್ಯವೂ ಆರಾಧಿಸುವ ದೇವರ ಭಕ್ತಿಗೆ ಅಪಾರ ಶಕ್ತಿ ಪರಿಭ್ರಮಿಸುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನುಡಿದರು.

Advertisement

ಶಿವರಾತ್ರಿ ಜಾಗರಣೆ ಪ್ರಯುಕ್ತ ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ಫೆ.18 ರಂದು ಸಂಜೆ 6.30 ಗಂಟೆಗೆ ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ದೀಪ ಬೆಳಗಿ ಚಾಲನೆ ನೀಡಿ ಆಶೀರ್ವದಿಸಿದರು.

ಈ ವೇಳೆ ಡಾ.ಹೇಮಾವತಿ ವೀ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ಪಾದಯಾತ್ರಿಗಳ ಸಂಘದ ನಾಯಕ ಬೆಂಗಳೂರಿನ ಹನುಮಂತಪ್ಪ ಗುರೂಜಿ ಮತ್ತು ಎಸ್. ಮರಿಯಪ್ಪ ಉಪಸ್ಥಿತರಿದ್ದರು.

ಬೆಂಗಳೂರು, ಮೈಸೂರು, ಹಾಸನ, ಮಂಡ್ಯ ಮೊದಲಾದ ಅನೇಕ ಊರುಗಳಿಂದ ಪ್ರತಿವರ್ಷದಂತೆ ಸಾವಿರಾರು ಮಂದಿ ಶ್ರದ್ಧಾ-ಭಕ್ತಿಯಿಂದ 50 ಸಾವಿರಕ್ಕೂ ಮಿಕ್ಕಿ ಭಕ್ತರು ಪಾದಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ್ದರು.

Advertisement

ಪರಂಪರೆ ಉಳಿಸಿ, ಮಕ್ಕಳಿಗೆ ಸಂಸ್ಕಾರ ನೀಡಿ:

ಎಲ್ಲರೂ ಸುಖವನ್ನು ಬಯಸುತ್ತಿದ್ದಾರೆ. ಜನರಿಗೆ ಹಳ್ಳಿಗಾಡು ಬೇಡವಾಗಿದೆ. ಪಟ್ಟಣದ ವ್ಯಾಮೋಹಕ್ಕೆ ಒಳಗಾಗಿರುವುದು ಭೂಮಿಯ ಅಸಮತೋಲನಕ್ಕೆ ಕಾರಣವಾಗಿದೆ. ಇಂದು ಟರ್ಕಿ, ಸಿರಿಯಾದ ಭೂಕಂಪನದಿಂದ ಅದನ್ನು ಕಾಣುತ್ತಿದ್ದೇವೆ. ಅಲ್ಲಿ ಸಾವಿರಾರು ಮಂದಿ ಮಡಿದಿದ್ದಾರೆ. ಕುಟುಂಬದ ಎಲ್ಲರನ್ನೂ ಕಳೆದುಕೊಂಡು ಮರುಗಿದ್ದಾರೆ ಎಂದು ಕಂಬನಿ‌ ಮಿಡಿದ‌ ಹೆಗ್ಗಡೆಯವರು ಜಗತ್ತು ವಿನಾಶದಂಚಿಗೆ ಸಾಗದಿರಲು ಪರಂಪರೆಯ ಆರಾಧನೆಗೆ ಮಹತ್ವ ನೀಡೋಣ. ಮಕ್ಕಳಿಗೆ ಸಂಸ್ಕಾರ ನೀಡೋಣ ಎಂದು ಕರೆ ನೀಡಿದರು.

1 ಲಕ್ಷ ಮಂದಿಗೆ 15.50 ಲಕ್ಷ ರೂ. ವೆಚ್ಚದಲ್ಲಿ ಭಕ್ತರಿಂದಲೇ ಭಕ್ತರಿಗೆ ಅನ್ನದಾಸೋಹ ನಡೆಯಿತು. ಶಿವರಾತ್ರಿ ಪ್ರಯುಕ್ತ ಕ್ಷೇತ್ರವನ್ನು ಪುಷ್ಪ- ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ನಾಲ್ಕು ಜಾವಗಳಲ್ಲಿ ಭಕ್ತರು ಸೀಯಾಳ ಅಭಿಷೇಕ, ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು.

ದೇವಸ್ಥಾನ ಆವರಣದಲ್ಲಿ ಅಹೋರಾತ್ರಿ ಭಕ್ತರು ಶಿವಪಂಚಾಕ್ಷರಿ ಪಠಣ, ಭಜನೆ, ಪ್ರಾರ್ಥನೆ, ಧ್ಯಾನ ಮಾಡಿದರು. ರಾತ್ರಿ ಪೂರ್ಣ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮಧ್ಯರಾತ್ರಿ ದೇವರ ಬಲಿ ಉತ್ಸವ ನಡೆದು ಇಂದು ಮುಂಜಾನೆ ರಥೋತ್ಸವ ನೆರವೇರಿತು‌. ಲಕ್ಷೋಪ‌ ಭಕ್ತರು ದೇವರ ದರ್ಶನ‌ ಪಡೆದು ಪುನೀತರಾದರು.

Advertisement

Udayavani is now on Telegram. Click here to join our channel and stay updated with the latest news.

Next