ಕುಮಟಾ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನಸಾಮಾನ್ಯರಿಗೆ ಸೇವೆ ಒದಗಿಸುವ ಒಂದು ಸಂಸ್ಥೆಯಾಗಿದ್ದು, ಈ ಮೂಲಕ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರೂ ನಿಷ್ಠೆ ತೋರಿ ಧನ್ಯತೆ ಅನುಭವಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ತಿಳಿಸಿದರು.
ನಾಮಧಾರಿ ಸಭಾಭವನದಲ್ಲಿ ನಡೆದ ಕರಾವಳಿ ಭಾಗದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಕರ್ತರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಪ್ರತಿ ಯೊಂದೂ ಕುಟುಂಬ ಸ್ವಾವಲಂಬಿಯಾಗಿ ಬದುಕಲು ಪ್ರೋತ್ಸಾಹ ನೀಡುವುದು ನಮ್ಮ ಗುರಿಯಾಗಿದ್ದು, ಅಂತಹ ಭರವಸೆಯನ್ನು ನಾವಿಂದು ನಮ್ಮ ಸ್ವಸಹಾಯ ಸಂಘಗಳ ಸದಸ್ಯರಲ್ಲಿ ಕಾಣುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ಧರ್ಮಸ್ಥಳ ಭಕ್ತಿ ಭಾವದ ತವರೂರಾಗಿದ್ದು, ಇಲ್ಲಿ ಬೇಡಿ ಬಂದವರಿಗೆ ಇಲ್ಲ ಎನ್ನುವ ಮಾತೇ ಇಲ್ಲ. ಇಲ್ಲಿ ಅನ್ನ, ವಿದ್ಯೆ, ಅಭಯ ದಾನಗಳನ್ನೊಳಗೊಂಡ ಚತುರ್ವಿದ ದಾನಗಳು ನಿರಂತರ ನಡೆಯುತ್ತಿದೆ. ಈ ಎಲ್ಲ ಕಾರ್ಯಕ್ಕೆ ಮಂಜುನಾಥ ಸ್ವಾಮಿ ಮತ್ತು ಧರ್ಮ ದೇವತೆಗಳ ಸಾನ್ನಿಧ್ಯದ ಜೊತೆಗೆ ಅಣ್ಣಪ್ಪ ಸ್ವಾಮಿಯ ಶಕ್ತಿ ಕಾರಣವಾಗಿದೆ ಎಂದರು. ಕಾರ್ಯಕರ್ತರು ಸಂಸ್ಥೆಯ ನಿಯಮಗಳನ್ನು ಮುಕ್ತ ಮನಸ್ಸಿನಿಂದ ತಿಳಿದುಕೊಂಡು, ನಮ್ಮಲ್ಲಿರುವ ಕೀಳರಿಮೆ ಬದಲಾಯಿಸಿಕೊಂಡು ಸಕಾರಾತ್ಮಕವಾಗಿ ಯೋಚಿಸಿ, ಕರ್ತವ್ಯ ನಿರ್ವಹಿಸಿ ಜನರಿಗೆ ಯೋಜನೆಯ ಸೌಲಭ್ಯ ತಲುಪಿಸಿ ಎಂದು ಕರೆ ನೀಡಿದರು.
ಇದನ್ನೂ ಓದಿ:ಗೋಲ್ಡನ್ ಟೆಂಪಲ್… ಇಂಥ “ಅಮೃತ’ವನ್ನು ಸವಿಯಲು ಹಿಂದೆಮುಂದೆ ನೋಡಬೇಕಿಲ್ಲ!
ಸ್ಥಳೀಯ ಶಾಸಕ ದಿನಕರ ಶೆಟ್ಟಿ, ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ವಕೀಲ ಆರ್.ಜಿ. ನಾಯ್ಕ, ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ ಶೇಟ್ ಹಾಗೂ ಸದಸ್ಯರಾದ ಎಚ್.ಆರ್. ನಾಯ್ಕ, ವಾಸುದೇವ ನಾಯಕ, ದಯಾನಂದ ದೇಶಭಂಡಾರಿ ಸೇರಿದಂತೆ ವಿವಿಧ ಮುಖಂಡರು ಆಗಮಿಸಿ, ಹೆಗ್ಗಡೆಯವರನ್ನು ಅಭಿನಂದಿಸಿದರು. ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ, ಉತ್ತರಕನ್ನಡ ಜಿಲ್ಲೆಯ ನಿರ್ದೇಶಕ ಶಂಕರ ಶೆಟ್ಟಿ ಉಪಸ್ಸಿತರಿದ್ದರು. ಯೋಜನಾಧಿಕಾರಿ ನಾಗರಾಜ ನಾಯ್ಕ ಸ್ವಾಗತಿಸಿದರು. ಹೊನ್ನಾವರ ಯೋಜನಾಧಿಕಾರಿ ಈಶ್ವರ ಎಂ. ವಂದಿಸಿದರು. ಕಾರವಾರ ಯೋಜನಾಧಿಕಾರಿ ಶೇಖರ ನಾಯ್ಕ ನಿರ್ವಹಿಸಿದರು.