Advertisement

ಧರ್ಮಸ್ಥಳ: ಶಿವರಾತ್ರಿ ವೈಭವಕ್ಕೆ ಸಕಲ ಸಿದ್ಧತೆ

05:55 AM Mar 02, 2019 | |

ಬೆಳ್ತಂಗಡಿ : ಮಹಾಶಿವರಾತ್ರಿ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಕಲ ಸಿದ್ಧತೆ ಕೈಗೊಂಡಿದ್ದು, ನಾಡಿನೆಲ್ಲೆಡೆಯಿಂದ ಭಕ್ತರು ತಂಡೋಪ ತಂಡವಾಗಿ ಪಾದಯಾತ್ರೆಯಲ್ಲಿ ಆಗಮಿಸುತ್ತಿದ್ದಾರೆ.

Advertisement

ಪಂಚಾಕ್ಷರಿ ಮಂತ್ರ ಜಪಿಸುತ್ತ ಪಾದಯಾತ್ರೆಯಲ್ಲಿ ನಾಡಿನೆಲ್ಲೆಡೆಯಿಂದ ಸುಮಾರು 15,000 ಮಂದಿ ಭಕ್ತರು ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಪಾದಯಾತ್ರಿಗಳ ಅನುಕೂಲಕ್ಕಾಗಿ ಶ್ರೀಕ್ಷೇತ್ರದಲ್ಲಿ ಸರ್ವರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ. ಕಳೆದ ಬಾರಿ ಮಹಾ ಶಿವರಾತ್ರಿಗೆ 11,000 ಮಂದಿ ಭಕ್ತರು ಪಾದಯಾತ್ರೆಯಲ್ಲಿ ಆಗಮಿಸಿದ್ದರು. ಫೆ. 19ರಂದು ದಾವಣಗೆರೆ, ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಬೇಲೂರು ಸಹಿತ ವಿವಿಧೆಡೆಗಳಿಂದ ಪಾದಯಾತ್ರೆ ಆರಂಭಿಸಿದ್ದು, ರವಿವಾರದೊಳಗೆ ಕ್ಷೇತ್ರ ಸೇರಲಿದ್ದಾರೆ.

 ಕ್ಷೇತ್ರದಲ್ಲಿ ಸಿದ್ಧತೆ
ಭಕ್ತರಿಗೆ ಧರ್ಮಸ್ಥಳದ ವತಿಯಿಂದ ವೈದ್ಯಕೀಯ ಸೇವೆ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಮಿತಿ ಮುಖೇನ ದೇಗುಲ ಅಲಂಕಾರ, ನಿರಂತರ ಭಜನೆ ಸಹಿತ ಶಿವನ ಆರಾಧನೆಗೆ ಪೂರ್ವ ನಿಯೋಜಿತ ತಯಾರಿಯಲ್ಲಿ ತೊಡಗಿದೆ. ಇನ್ನುಳಿದಂತೆ ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತರಿಗೆ ಚಾರ್ಮಾಡಿ, ಸೋಮಂತಡ್ಕ, ಕಲ್ಮಂಜ, ಸತ್ಯಾನ ಪಲ್ಕೆ, ಬೂಡುಜಾಲು 5 ಕಡೆ ವೈದ್ಯಕೀಯ ಶಿಬಿರ ತೆರೆಯಲಾಗಿದೆ. ಉಜಿರೆ, ಧರ್ಮಸ್ಥಳದಲ್ಲೂ ವೈದ್ಯಕೀಯ ಶಿಬಿರ ತೆರೆಯ ಲಾಗಿದ್ದು, ಗಂಗೋತ್ರಿಯಲ್ಲಿ 8,050, ಸಾಕೇತ 5,940, ಎಸ್‌ಡಿಎಂ ಪ್ರೌಢಶಾಲೆ 550, ಎಸ್‌ಡಿಎಂ ಪ್ರಾ. ಶಾಲೆಯಲ್ಲಿ 525 ಮಂದಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

 ವೈದ್ಯರ ತಂಡ
ಎಸ್‌.ಡಿ.ಎಂ. ಆಸ್ಪತ್ರೆಯ 9 ಮಂದಿ ವೈದ್ಯರು, 10 ಮಂದಿ ಶುಶ್ರೂಷಕಿಯರು, 10 ಮಂದಿ ಸಹಾಯಕರು ಸೇವೆಯಲ್ಲಿ ನಿರತರಾಗಿದ್ದಾರೆ. ಹೊರ ವೈದ್ಯರಿಬ್ಬರು ಸ್ವಯಂ ಪ್ರೇರಿತರಾಗಿ ಸೇವೆ ನೀಡುತ್ತಿದ್ದಾರೆ. ಪ್ರತಿ ಶಿಬಿರದಲ್ಲಿ ಓರ್ವ ವೈದ್ಯರು, ತಲಾ 2 ಮಂದಿ ಶುಶ್ರೂಷಕಿಯರು ಹಾಗೂ ಸಹಾಯಕರು ನಿರಂತರ ಸೇವೆಯಲ್ಲಿ ತೊಡಗಿದ್ದಾರೆ. ಎರಡು ಆ್ಯಂಬುಲೆನ್ಸ್‌ ಗಸ್ತು ತಿರುಗುತ್ತಿದ್ದು, ಧರ್ಮಸ್ಥಳದ ಸಂಚಾರಿ ಆಸ್ಪತ್ರೆಯ ಸಿಬಂದಿಯೂ ಪಾದಯಾತ್ರಿಗಳ ಶುಶ್ರೂಷೆಯಲ್ಲಿ ತೊಡಗಿದ್ದಾರೆ. 24 ಗಂಟೆ ಸೇವೆ ಲಭ್ಯವಿದೆ.

ವಿಶೇಷ ನಾಮಫಲಕ
ಪಾದಯಾತ್ರಿಗಳ ಸಂಚರಿಸುವ ಮುಖ್ಯ ರಸ್ತೆ ಇಕ್ಕೆಲಗಳಲ್ಲಿ ಮಾಹಿತಿ ಫಲಕ ಅಳವಡಿಸಲಾಗಿದೆ. ಉಡುಪು, ಸ್ವಚ್ಛತೆ ಸಹಿತ ಸಂಚಾರ ನಿಯಮ ಪಾಲಿಸುವ ಕುರಿತು ಮಾಹಿತಿ ನೀಡಲಾಗಿದೆ. ಒಟ್ಟು 9 ಕಟಡೆಗಳಲ್ಲಿ ಬೃಹತ್‌ ಫಲಕ ಅಳವಡಿಸಲಾಗಿದ್ದು, ವಾಹನ ಚಾಲಕರಿಗೂ ಪಾದಯಾತ್ರಿಗಳ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ.

Advertisement

 ವಿಶೇಷ ಭಜನೆ
ಪಾದಯಾತ್ರಿಗಳಿಗೆ ದಾರಿ ಮಧ್ಯೆ ಭಕ್ತರ ತಂಗುದಾಣದಲ್ಲಿ ಸಂಜೆ 6ರಿಂದ ರಾತ್ರಿ 8 ಗಂಟೆಯವರೆಗೆ ಭಜನೆ ಹಾಗೂ ಉಪನ್ಯಾಸ ಹಮ್ಮಿಕೊಳ್ಳಲಾಗಿರುವುದು ಈ ಬಾರಿಯ ವಿಶೆಷಗಳಲ್ಲೊಂದು. ಶ್ರೀರಾಮ ಭಜನ ಮಂದಿರ ಕೊಟ್ಟಿಗೆ ಹಾರ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿ, ಪರಶುರಾಮ ದೇವಸ್ಥಾನ ಮುಂಡಾಜೆ, ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ಸಹಿತ ಒಟ್ಟು 8 ಕಡೆಗಳಲ್ಲಿ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಹನುಮಂತ ಸ್ವಾಮೀಜಿಯಿಂದ 40ನೇ ವರ್ಷದ ಯಾತ್ರೆ 
ಮೂಲತಃ ದೊಡ್ಡಬಳ್ಳಾಪುರ ತಾಲೂಕು ಕಾಳನೂರಿನ ಹನುಮಂತ ಸ್ವಾಮೀಜಿ ಬೆಂಗಳೂರಿನಿಂದ ತನ್ನ 40ನೇ ವರ್ಷದ ಪಾದಯಾತ್ರೆಯಲ್ಲಿ ಆಗಮಿಸುತ್ತಿದ್ದಾರೆ. 1980ನೇ ಇಸವಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪ್ರಥಮ ಬಾರಿಗೆ ಪಾದಯಾತ್ರೆ ಕೈಗೊಂಡಿದ್ದರು. 79ನೇ ಇಳಿ ವಯಸ್ಸಿನಲ್ಲೂ 200 ಮಂದಿ ಭಕ್ತರ ತಂಡದೊಂದಿಗೆ ಬೆಂಗಳೂರಿನಿಂದ ಚೆನ್ನರಾಯಪಟ್ಟಣ, ಹಾಸನ, ಬೇಲೂರು ಮಾರ್ಗವಾಗಿ ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿಯಾಗಿ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಾರೆ.

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next