ಸೇಡಂ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನರ ಸಮಗ್ರ ಅಭಿವೃದ್ಧಿಗಾಗಿ ಸಮಾಜಮುಖೀ ಕೆಲಸ-ಕಾರ್ಯಗಳನ್ನು ಮಾಡುತ್ತಿದ್ದು, ಈ ಸಂಸ್ಥೆಯ ಯೋಜನೆಗಳು ಎಲ್ಲರಿಗೂ ಪ್ರೇರಣೆಯಾಗಿವೆ ಎಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.
ಪಟ್ಟಣದ ಬಸವನಗರ ಬಡಾವಣೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನಡೆಸಲ್ಪಡುವ ಸಾಮಾನ್ಯ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೂಜ್ಯ ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಸಂಸ್ಥೆಯು ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಕಾರ್ಯ ಮಾಡುತ್ತಿದೆ. ಪೂಜ್ಯರ ಆಶೀರ್ವಾದ, ಯೋಜನೆಯ ಸಹಕಾರ ತಾಲೂಕಿನ ಜನರ ಮೇಲೆ ನಿರಂತರವಾಗಿರಲಿ. ಧರ್ಮಸ್ಥಳ ಸಂಸ್ಥೆಯ ಎಲ್ಲ ಕಾರ್ಯಗಳಿಗೆ ನಿರಂತರವಾಗಿ ಸಹಕಾರ ನೀಡುತ್ತೇನೆ ಎಂದರು.
ಯೋಜನೆಯ ವಿವಿಧ ಕಾರ್ಯಕ್ರಮಗಳಾದ ಕೆರೆಗಳ ಹೂಳೆತ್ತುವುದು, ದೇವಸ್ಥಾನಗಳ ಜೀರ್ಣೋದ್ಧಾರ, ನಿರ್ಗತಿಕರಿಗೆ ಮಾಸಾಶನ, ಶುದ್ದ ಕುಡಿಯುವ ನೀರಿನ ಘಟಕ, ಶಾಲೆಗಳಿಗೆ ಶಿಕ್ಷಕರ ನೇಮಕ, ಶಾಲೆಗಳಿಗೆ ಡೆಸ್ಕ್, ಬೆಂಚ್, ವಿದ್ಯಾರ್ಥಿ ವೇತನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧರ್ಮಸ್ಥಳ ಯೋಜನೆ ಯೋಜನಾಧಿಕಾರಿ ಮಂಜುನಾಥ ಎಸ್.ಜಿ. ಮಾತನಾಡಿ, ಸಂಸ್ಥೆಯು ಗ್ರಾಮೀಣ ಜನರ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಸ್ವ-ಸಹಾಯ ಸಂಘಗಳ ಮೂಲಕ ಜನರಿಗೆ ಆರ್ಥಿಕ ಸಹಕಾರ ನೀಡಿ ಸ್ವ-ಉದ್ಯೋಗದ ಮೂಲಕ ಬದುಕು ರೂಪಿಸಿಕೊಳ್ಳಲು ಸಹಾಯ ಮಾಡುತ್ತಿದೆ ಎಂದರು.
ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಇ-ಶ್ರಮ್ ಕಾರ್ಡ್‌ಗಳನ್ನು ವಿತರಿಸಿದರು. ಒಕ್ಕೂಟದ ಅಧ್ಯಕ್ಷೆ ಶಾರದಾಬಾಯಿ, ಸುಜಾತಾ ಹಿರೇಮಠ, ಓಂಪ್ರಕಾಶ ಪಾಟೀಲ, ರಾಮು ನಾಯಕ, ಸದಾಶಿವ ಸ್ವಾಮೀಜಿ, ಯೋಜನೆಯ ಆಂತರಿಕ ಲೆಕ್ಕಪರಿಶೋಧಕ ರಾಚಪ್ಪ ಕುಂಬಾರ, ತಾಲೂಕು ನೋಡಲ್ ಅಧಿಕಾರಿ ಬಸವರಾಜ ಕೋರವಾರ, ವಲಯ ಮೇಲ್ವಿಚಾರಕಿ ಬಸಮ್ಮ, ಆಕಾಶ ಕಿರಮಾನಕರ, ಕಾವೇರಿ ಇತರರಿದ್ದರು.