Advertisement

ಬಾಹುಬಲಿಗೆ ಮಹಾಮಜ್ಜನ 

12:30 AM Feb 10, 2019 | |

ಈ ಸಲ ನಮ್ಮ ಧರ್ಮಸ್ಥಳದಲ್ಲಿ ನಡೆಯುತ್ತಿರುವುದು ನಾಲ್ಕನೆಯ ಮಹಾಮಸ್ತಕಾಭಿಷೇಕ. ಮಂಜುನಾಥಸ್ವಾಮಿ, ಚಂದ್ರನಾಥ ಸ್ವಾಮಿಯ ಅನುಗ್ರಹದೊಂದಿಗೆ 1982ರಲ್ಲಿ ಬಾಹುಬಲಿಯ ಭವ್ಯಮೂರ್ತಿಯನ್ನು ಪ್ರತಿಷ್ಠಾಪಿಸಿದ ಘಟನೆ ಮತ್ತೆ ಕಣ್ಣೆದುರು ಬರುತ್ತಿದೆ. ಅದೊಂದು ದಿವ್ಯ ಸನ್ನಿವೇಶ. ಇನ್ನೂ ವಿರಾಗಿಯಾಗದ ಬಾಹುಬಲಿಯ ರಾಜವೈಭವದ ದೃಶ್ಯವನ್ನು ನೆನಪಿಸಿಕೊಳ್ಳುವುದಕ್ಕಾಗಿ ನೀಳವಾದ ಧೋತಿ, ಅಂಗವಸ್ತ್ರವನ್ನು ತೊಡಿಸಿದ್ದೆವು. ದೊಡ್ಡ ಪೇಟಾವನ್ನು ತಯಾರಿಸಿ ಅದನ್ನು ಬಾಹುಬಲಿಯ ಶಿರದಲ್ಲಿರಿಸಿ ಸಂಭ್ರಮಿಸಿದ್ದೆವು. ಬಾಹುಬಲಿ ಸ್ವಾಮಿಗೆ ಕೇವಲಜ್ಞಾನ ಪ್ರಾಪ್ತವಾದ ಕ್ಷಣದಲ್ಲಿ ಆ ವಸ್ತ್ರಗಳನ್ನೆಲ್ಲ ಕಳಚಿ ಬಯಲಾಗಿ ನಿಂತುಬಿಡುವ  ದಿವ್ಯಕ್ಷಣವನ್ನು ಅನುಭವಿಸುವ ಸೌಭಾಗ್ಯ ನಮ್ಮದಾಗಿತ್ತು. ಶ್ರೀ ವಿಮಲಸಾಗರ ಮುನಿಮಹಾರಾಜರು ಮತ್ತು ಆಚಾರ್ಯ ಶ್ರೀವಿಶ್ವೇಂದ್ರ ಮುನಿ ಮಹಾರಾಜರು ಬಾಹುಬಲಿಯ ಶಿರದ ಬಳಿ ಹೋಗಿ ಕರ್ಣದಲ್ಲಿ ಕೇವಲಜ್ಞಾನ ಬೋಧಿಸಿದ್ದರು. ಅವರಿಗೆ ಮೇಲೇರುವುದಕ್ಕಾಗಿ ವಿಶೇಷ ಟ್ರಾಲಿಯ ವ್ಯವಸ್ಥೆಯನ್ನು ಮಾಡಿದ್ದೆವು. ಇಬ್ಬರು ಮುನಿಗಳಿಂದಲೇ ಬಾಹುಬಲಿ ಮೂರ್ತಿಯ ಪ್ರಾಣಪ್ರತಿಷ್ಠೆಯಾದದ್ದನ್ನು ಕಂಡು ನಮ್ಮ ಮನಸ್ಸಿಗೆ ನಿಜವಾಗಿಯೂ ಧನ್ಯತಾಭಾವ !

Advertisement

ಬಾಹುಬಲಿ ಮೂರ್ತಿಯನ್ನು ಎಲ್ಲಿ ಸ್ಥಾಪನೆ ಮಾಡುವುದು ಎಂಬ ಪ್ರಶ್ನೆ ಮೂಡಿತ್ತು. ಈ ಬಗ್ಗೆ ನನ್ನ ತೀರ್ಥರೂಪರು ಜ್ಯೋತಿಷಿಗಳಾಗಿದ್ದ ಶಶಿಕಾಂತ ಜೈನ್‌ಅವರಲ್ಲಿ ಕೇಳಿದಾಗ ಅವರು ಈಗ ಇರುವ “ರತ್ನಗಿರಿ’ ಬೆಟ್ಟದ ತಾಣವನ್ನು ಸೂಚಿಸಿದ್ದರು. ಅಂಥಾದ್ದೊಂದು ಪವಿತ್ರ ಸ್ಥಳ ಅಲ್ಲಿದೆ ಎಂದು ವಿಶೇಷವಾಗಿ ನಮ್ಮ ಗಮನಕ್ಕೆ ಬಂದಿರಲಿಲ್ಲ. ಇವತ್ತು ಅದು “ಬಾಹುಬಲಿಬೆಟ್ಟ’ ಎಂದೇ ಜನಜನಿತವಾಗಿದೆ. ಬಾಹುಬಲಿ-ಬೆಟ್ಟ  ಎಂಬುದು ಜೋಡುಪದ ಇದ್ದಂತೆ. ಬಾಹುಬಲಿಯ ವ್ಯಕ್ತಿತ್ವಕ್ಕೆ ಬೆಟ್ಟವೇ ಸೂಕ್ತ ರೂಪಕಾತ್ಮಕ ಪದ. ಬೆಟ್ಟದಂಥ ವ್ಯಕ್ತಿತ್ವ ಬಾಹುಬಲಿಯದ್ದು. ನೆಲದ ಮೇಲಿರುವ ಬೆಟ್ಟ ಆಕಾಶದ ದಿಕ್ಕಿನತ್ತ ಚಲಿಸಲು ತವಕಿಸುವಂತೆ ತೋರುತ್ತದೆ. ಅದರಂತೆ ಮೂರ್ತಿರೂಪದಲ್ಲಿರುವ ಬಾಹುಬಲಿ, ಭವದಲ್ಲಿ ನಿಂತು ದಿವದ ಕಡೆಗೆ ಲಕ್ಷ್ಯವಿಟ್ಟಂತೆ ಕಂಗೊಳಿಸುತ್ತಿದ್ದಾನೆ.

ಗಾಂಧೀಜಿಯಂಥ ಮಹಾತ್ಮರು ಅಹಿಂಸೆ, ಸತ್ಯ, ಅಪರಿಗ್ರಹಗಳಂಥ ತಣ್ತೀಗಳನ್ನು ಅನುಸರಿಸಿದರು. ಸಾವಿರಾರು ವರ್ಷಗಳ ಹಿಂದೆಯೇ ಜೈನ ದರ್ಶನವು ಈ ತಣ್ತೀಗಳನ್ನು ಪ್ರತಿಪಾದಿಸಿದೆ. ಅನೇಕ ಮಹಾತ್ಮರಿಗೆ ಕರ್ಮಗಳಲ್ಲಿ ಆಧ್ಯಾತ್ಮಿಕತೆಯನ್ನು ಕಾಣುವ ಸ್ಫೂರ್ತಿ ದೊರೆತದ್ದು ಜೈನಧರ್ಮದಿಂದ ಎಂದರೆ ಅಚ್ಚರಿಯಿಲ್ಲ.  ಜಿನತಣ್ತೀದ ಅನುಯಾಯಿಗಳು ಜೈನರು. ಜಿನ ಎಂದರೆ ಗೆದ್ದವನು. ಗೆಲ್ಲುವುದು ಏನನ್ನು? ಸಾಮಾನ್ಯವಾಗಿ ಯುದ್ಧವನ್ನು ಗೆದ್ದವನನ್ನು “ವಿಜಯಿ’ ಎಂದು ಭಾವಿಸುತ್ತೇವೆ. ಆದರೆ, ಯುದ್ಧವನ್ನು ಗೆದ್ದವನಾಗಲಿ, ಲೌಕಿಕವಾದ ಗುರಿಗಳನ್ನು  ಗೆದ್ದವನಾಗಲಿ ಜಿನನಾಗಲಾರ. ಬಾಹುಬಲಿಗೆ ಇದು ಗೊತ್ತಾಗಿಬಿಟ್ಟಿತ್ತು. ಭರತನನ್ನು ಯುದ್ಧದಲ್ಲಿ ಸೋಲಿಸಿದ ಬಳಿಕ ಸಮಸ್ತ ಭೂಮಂಡಲವನ್ನು ಆತ ಅನುಭೋಗಿಸಬಹುದಿತ್ತು. ಆದರೆ, ಅದು ಗೆಲುವಲ್ಲ ಎಂದು ಅವನಿಗೆ ಮನದಟ್ಟಾಯಿತು. ಭೌತಿಕವಾದ ವೈಭೋಗವನ್ನು ಗೆಲ್ಲಬೇಕಾದರೆ, ಅದನ್ನು ತೊರೆಯುವುದೊಂದೇ ದಾರಿ ಎಂಬ ಅರಿವು ಮೂಡಿದ್ದೇ ಮೈಮೇಲಿನ ವಸ್ತ್ರಗಳನ್ನು ಕೂಡ ಕಳಚಿ, ಅಖಂಡ ವಿರಾಗಿಯಾಗಿ ನಿಂತ. ಅದು ಬಾಹುಬಲಿಯ ನಿಜವಾದ ಗೆಲುವು. ಹಾಗಾಗಿ, ಬಾಹುಬಲಿ “ಜಿನ’ ತಣ್ತೀದ ಸಾಕಾರ ಮೂರ್ತಿ.

ಈ ದಿನಗಳಿಗಂತೂ ಬಾಹುಬಲಿಯ ದಿಗಂಬರ ಬಿಂಬ ಅತ್ಯಂತ ಪ್ರಸ್ತುತ. ಇಡೀ ಜಗತ್ತು ಲೌಕಿಕವಾದ ಲೋಲುಪತೆಯಲ್ಲಿ, ಭೋಗ ಸಂಸ್ಕೃತಿಯಲ್ಲಿ ಮೈಮರೆತು ಪರತಣ್ತೀದ ವಿಸ್ಮತಿಯಲ್ಲಿ ಮುಳುಗಿರುವಾಗ ಬಾಹುಬಲಿ ಮಾತ್ರ ಎಚ್ಚರದ ಸ್ಥಿತಿಯಲ್ಲಿ ನಿಂತಿದ್ದಾನೆ. ದಿನದ ಯಾವ ಕ್ಷಣ ನೋಡಿದರೂ ಆತನದ್ದು ಜಾಗೃತ ನಿಲುವೇ. ಎಲ್ಲಿಯವರೆಗೆ ಜಗತ್ತಿನ ಜನರಲ್ಲಿ ಅಹಂಕಾರವಿರುತ್ತದೊ ಅಲ್ಲಿಯವರೆಗೆ ಬಾಹುಬಲಿ ತಣ್ತೀದ ಆವಶ್ಯಕತೆ ಇರುತ್ತದೆ.  “ತ್ಯಾಗ’ ಮಾಡುವುದು ಎಂದರೆ ದಾನ ಮಾಡುವುದು ಎಂದಷ್ಟೇ ತಿಳಿದುಕೊಂಡಿದ್ದೇವೆ. ಅದೇ ಶ್ರೇಷ್ಠವಲ್ಲ. ತ್ಯಾಗ ಎಂದರೆ ತೊರೆಯುವುದು. ಮೊದಲು ಮನಸ್ಸಿನಿಂದ ತೊರೆಯಬೇಕು. ಮನಸ್ಸು “ವಿರಾಗಿ’ಯಾದರೆ ದೇಹವೂ ಅದನ್ನು ಅನುಸರಿಸುತ್ತದೆ. ಜಗದ ಜನತೆ ಬೆಲೆಬಾಳುವ ಬಟ್ಟೆಗಳನ್ನು ಧರಿಸುತ್ತಾರೆ. ಅದು ಮುಖ್ಯವಲ್ಲ. ತಣ್ತೀಗಳನ್ನು ಧರಿಸದಿದ್ದರೆ ಏನು ಸಾರ್ಥಕತೆ ಇದೆ? ಬಾಹುಬಲಿ ದಿರಿಸುಗಳನ್ನು ತೊರೆದ‌, ಉನ್ನತವಾದ ಪರ‌ತಣ್ತೀವನ್ನು ಧರಿಸಿದ.

ಈ ಸಲದ ಮಹಾಮಸ್ತಕಾಭಿಷೇಕದ ವಿಶೇಷವೆಂದರೆ ಪಂಚಮಹಾವೈಭವ. ಈ ಸಲದ ಮಹೋತ್ಸವ ವಿಶಿಷ್ಟವಾಗಿರಬೇಕೆಂದು ನಾನು ಸಂಕಲ್ಪಿಸಿದೆ. ಸಂಕಲ್ಪವನ್ನು ನನ್ನ ಶ್ರೀಮತಿ ಹೇಮಾವತಿಯಲ್ಲಿ ಹಂಚಿಕೊಂಡೆ. ಈ ಸಲದ ಪಂಚಮಹಾವೈಭವಕ್ಕೆ ಅವರೇ ನೇತೃತ್ವ ವಹಿಸಿದ್ದಾರೆ. ನಾವು, ನನ್ನ ಕುಟುಂಬದವರು “ಪಂಚಮಹಾವೈಭವ’ ನಡೆಸಲು ನಿರ್ಧರಿಸಬಹುದು, ಆಚಾರ್ಯರು ಒಪ್ಪಬೇಕಲ್ಲ. ಹಾಗಾಗಿ, ನಾವು ಶ್ರವಣಬೆಳಗೊಳಕ್ಕೆ ಹೋಗಿ ಪೂಜ್ಯರಾದ ಆಚಾರ್ಯ ಶ್ರೀವರ್ಧಮಾನ ಸಾಗರ ಅವರಲ್ಲಿ ಕೇಳಿಕೊಂಡೆವು. ಅವರು ಸಂತೋಷದಿಂದ ಸಮ್ಮತಿಸಿದರು. ಹಾಗೆ, ಈ ಸಲ “ಪಂಚಮಹಾವೈಭವ’ ವಿಶೇಷವನ್ನು ಭಕ್ತಾದಿಗಳು ನೋಡಿ ಕೃತಾರ್ಥರಾಗಬಹುದಾಗಿದೆ.

Advertisement

ಪಂಚಮಹಾವೈಭವದ ಉದ್ದಕ್ಕೂ ತ್ಯಾಗವೀರ ಬಾಹುಬಲಿಯ ಜೀವನಗಾಥೆಯನ್ನು , ಕೇವಲಜ್ಞಾನಿ ಬಾಹುಬಲಿಯ ಮಹಾಚರಿತೆಯನ್ನು ಪ್ರಸ್ತುತಪಡಿಸಲಾಗುತ್ತದೆ. ಸಂಪ್ರದಾಯದ ಪ್ರಕಾರ ಪಂಚಕಲ್ಯಾಣದ ಭಾಗ್ಯವಿರುವುದು ತೀರ್ಥಂಕರರಿಗೆ ಮಾತ್ರ; ಇಲ್ಲಿ ಕೊನೆಯ ದಿನ “ಸಮವಸರಣ’ ದೃಶ್ಯವನ್ನು ಸಾಕಾರಗೊಳಿಸುವುದರ ಮೂಲಕ ಬಾಹುಬಲಿ ಸ್ವಾಮಿಗೂ ಇದೇ ಗೌರವವನ್ನು ನೀಡಲಾಗುತ್ತದೆ. ಬಾಹುಬಲಿಗೆ ಕೇವಲಜ್ಞಾನ ಏಕೆ ಪ್ರಾಪ್ತವಾಗಲಿಲ್ಲ ಎಂದು ಭರತನು ಸಮವಸರಣಕ್ಕೆ ತೆರಳಿ ಜಿಜ್ಞಾಸೆಯನ್ನು ಮುಂದಿಡುತ್ತಾನೆ. ಆಚಾರ್ಯರು ಆಗ ಅವನ ಶಂಕೆ ನಿವಾರಣೆ ಮಾಡುತ್ತಾರೆ. ಭರತನಲ್ಲಿಯೂ ಸಮರ್ಪಣಭಾವ ಮೂಡಿದ ಕ್ಷಣದಲ್ಲಿ ಬಾಹುಬಲಿಗೆ ಕೇವಲಜ್ಞಾನ ಪ್ರಾಪ್ತವಾಗುತ್ತದೆ. 

ಧರ್ಮಮಾರ್ಗವನ್ನು ಎತ್ತಿ ಹಿಡಿದ ಧರ್ಮ-ಸ್ಥಳದಲ್ಲಿ ಜಿನಧರ್ಮದರ್ಶನವನ್ನು ಜಗತ್ತಿಗೆ ಸಾರುವ ಉತ್ಸವ ನಡೆಯುತ್ತಿದೆ. ಫೆ. 9ರಿಂದ ಅಂದರೆ ನಿನ್ನೆಯಿಂದ ಆರಂಭವಾಗಿ ಫೆ. 18ರವರೆಗೂ ಈ ಮಹೋತ್ಸವವಿದೆ. ಬಾಹುಬಲಿಯ ಮಹಾಮಜ್ಜನ ಎಂದರೆ ಅದರಲ್ಲಿ ಪಾಲ್ಗೊಳ್ಳುವ ಭಕ್ತಭಾವುಕರ ಪಾಲಿಗೆ ಪಾಪಪರಿಮಾರ್ಜನ. 

ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿಗಳು, ಧರ್ಮಸ್ಥಳ

Advertisement

Udayavani is now on Telegram. Click here to join our channel and stay updated with the latest news.

Next