ಬೆಳ್ತಂಗಡಿ : ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ಅಮೃತ ವರ್ಷಿಣಿ ಸಭಾಭವನದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ 3 ಮಂದಿ ಉಪನ್ಯಾಸಕರು ಉಪನ್ಯಾಸ ನೀಡಿದರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಬಿ.ಆರ್. ರವಿಕಾಂತೇಗೌಡ ಮಾತನಾಡಿ, ಕುವೆಂಪು ವೈಚಾರಿಕತೆ, ವೈಜ್ಞಾನಿಕ ದೃಷ್ಟಿಕೋನದಿಂದ ಸಾಹಿತ್ಯವನ್ನು ಆಶ್ರಯಿಸಿದರು. ಕುವೆಂಪು ದೊಡ್ಡ ಆರಾಧಕರು. ಕಲಾಸೃಷ್ಟಿಗೆ ಕೊರತೆ ಆಗದಂತೆ ವಿವಿಧತೆಯಲ್ಲಿ ಏಕತೆ ಸಾಧಿಸಿದರು. ಶಾಸ್ತ್ರ, ಸಂಪ್ರದಾಯ ಪರಂಪರೆಯ ಒಳಿತು- ಕೆಡುಕನ್ನು ವಿಮರ್ಶಿಸಿ ನಮ್ಮ ವಿವೇಕದಿಂದ ಸ್ವೀಕರಿಸುವ/ತಿರಸ್ಕರಿಸುವ ಮನೊಭಾವ ಎಲ್ಲರೂ ಹೊಂದಿರಬೇಕು ಎಂದರು.
ಚಲನಚಿತ್ರ ನಿರ್ದೇಶಕ ಬೆಂಗಳೂರಿನ ಅಬ್ದುಲ್ ರೆಹಮಾನ್ ಪಾಷ ಮಾತನಾಡಿ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತಿವೆ. ಅಕ್ಷರ, ಸಾಕ್ಷರತೆಗಿಂತ ವಿಜ್ಞಾನ ಸಾಕ್ಷರತೆ, ಪ್ರೌಢಿಮೆ ಮತ್ತು ಮನೊಭಾವ ಅಗತ್ಯ. ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಬೆಳೆಸಿಕೊಳ್ಳುವುದು ನಮ್ಮ ಮೂಲ ಕರ್ತವ್ಯವಾಗಿದೆ. ಸರಕಾರವೇ ಮೌಡ್ಯದಲ್ಲಿ ಮುಳುಗಿದೆ ಎಂದರು.
ಪುತ್ತೂರಿನ ಲೇಖಕಿ ಕವಿತಾ ಅಡೂರ್ ಮಾತನಾಡಿ, ಪರಿವರ್ತನೆ ಜಗದ ನಿಯಮ. ಬರವಣಿಗೆ ನಮ್ಮ ಅರಿವನ್ನು ಒರೆಗೆ ಹಚ್ಚುತ್ತದೆ. ವ್ಯಕ್ತಿತ್ವ ಪರಿಷ್ಕರಣೆಗೆ ಸಹಕಾರಿಯಾಗಿದೆ. ಕಗ್ಗ ಸದಾ ತನ್ನ ಮೌಲ್ಯ ಮತ್ತು ಮಾನವೀಯತೆಯನ್ನು ಉಳಿಸಿಕೊಂಡಿದೆ. ಬದುಕಿನಲ್ಲಿ ಅಭಾವ ವೈರಾಗ್ಯ ಸಲ್ಲದು. ನಾವು ಜೀವನ್ಮುಖೀಯಾಗಿ ಬಾಳಿ ಬದುಕುವಂತೆ ಜೀವನೋತ್ಸಾಹವನ್ನು ಕವಿತೆಗಳು ಮೂಡಿಸುತ್ತವೆ ಎಂದರು.
ಸಮ್ಮೇಳನವನ್ನು ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ ಸಂಕೇಶ್ವರ ಉದ್ಘಾಟಿಸಿದರು. ವಿಮರ್ಶಕ ಪ್ರೊ| ಟಿ.ಪಿ. ಅಧ್ಯಕ್ಷತೆ ವಹಿಸಿದ್ದರು. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸ್ವಾಗತಿಸಿ, ಸಂದೇಶ ನೀಡಿದರು.