ಲಕ್ಷದೀಪೋತ್ಸವದ ಪ್ರಯುಕ್ತ ಉಜಿರೆಯ ಜನಾರ್ಧನ ಸ್ವಾಮಿಯ ದೇವಸ್ಥಾನದಿಂದ ಧರ್ಮಸ್ಥಳದವರೆಗೆ ಶುಕ್ರವಾರ ಬೃಹತ್ ಪಾದಯಾತ್ರೆ ನಡೆಯಿತು. ಭಕ್ತಿಯ ನಡಿಗೆ ಮಂಜುನಾಥನೆಡೆಗಿನ ಪಾದಯಾತ್ರೆ ಕಳೆದ ಏಳು ವರ್ಷಗಳಿಂದ ನಡೆಯುತ್ತಿದೆ. ಸಾವಿರಾರು ಭಕ್ತರು ಮಂಜುನಾಥನ ಕೀರ್ತನೆ, ಭಜನೆಗಳನ್ನು ಹಾಡುವ ಮೂಲಕ ಪಾದಯಾತ್ರೆಯಲ್ಲಿ ಭಾಗವಹಿಸುವುದು ವಿಶೇಷ.
ಬೆಳ್ತಂಗಡಿ, ಉಜಿರೆ, ಚಾರ್ಮಾಡಿ, ಕೊಕ್ಕಡ, ಮಡಂತ್ಯಾರು, ತಣ್ಣಿರುಪಂತ, ಗುರುವಾಯನಕೆರೆ, ನಾರಾವಿ, ಹೊಸಂಗಡಿ ವೇಣೂರು ಅಳದಂಗಡಿ, ಅಣಿಯೂರು ವಲಯ ವಿಂಗಡಿಸಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸದಸ್ಯೆಯರು ಭಾಗವಹಿಸಿದ್ದರು. ಅನೇಕ ಕಡೆಗಳಿಂದ ಜನಸಾಗರ ಹರಿದು ಬರುತ್ತದೆ. ಎತ್ತಕಡೆ ನೋಡಿದರು ಭಕ್ತರು. ಹಿರಿಯರು, ಕಿರಿಯರು, ಮಕ್ಕಳು ಮಹಿಳೆಯರು, ಅಲ್ಲದೆ ವಯಸ್ಕರು ಕೂಡ ಸುಡುವ ಬಿಸಿಲನ್ನು ಲೆಕ್ಕಿಸದೆ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ.
ಅವರ ಅನುಕೂಲಕ್ಕೆ ರಸ್ತೆಯುದ್ದಕ್ಕೂ ತಲೆಯೆತ್ತಿ ನಿಂತ ಅಂಗಡಿಗಳಿವೆ.
ಇವೆಲ್ಲವುಗಳ ಮಧ್ಯೆ ಜನಸೇವೆಯೇ ಜನಾರ್ದನ ಸೇವೆ ಎಂದು ಸಜ್ಜಾದ ಸ್ವಯಂ ಸೇವಕರು. ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರಿಗಳು ಭಾಗವಹಿಸುವುದರಿಂದ ವೃದ್ಧರು, ಮಕ್ಕಳು ಸುಸ್ತಾಗುವ ಸನ್ನಿವೇಶ ಇರುತ್ತದೆ. ಆ ಕಾರಣಕ್ಕೆ ಮುಂಜಾಗ್ರತೆ ಕ್ರಮವಾಗಿ ಆಂಬುಲೆನ್ಸ್ ವಾಹನದ ವೈದ್ಯಕೀಯ ಸೇವೆ ಲಭ್ಯವಿರುತ್ತದೆ. ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಯ ಆಂಬುಲೆನ್ಸ್ ವಾಹನ ಸಿಬ್ಬಂದಿ ಈ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಪಾದಯಾತ್ರೆಯಲ್ಲಿ ಬಾಗವಹಿಸಿದ ಭಕ್ತರ ಆರೋಗ್ಯದಲ್ಲಿ ಏರುಪೇರಾದರೆ ಪ್ರಥಮ ಚಿಕಿತ್ಸೆ ಬೇಕಾಗುತ್ತದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಪಾದಯಾತ್ರೆ ಪ್ರಾರಂಭಿಸಿದ ದಿನಗಳಿಂದ ಆಂಬುಲೆನ್ಸ್ ವಾಹನದ ವ್ಯವಸ್ಥೆ ಇದೆ. ಪಾದಯಾತ್ರೆ ಮಾಡಿ ಕೆಲವೊಂದಿಷ್ಟು ಜನರು ಸುಸ್ತಾದ ಸಮಯದಲ್ಲಿ ಗ್ಲೂಕೋಸ್ ನೀಡಲಾಗುತ್ತದೆ.
ನಡಿಗೆಯಿಂದ ಪಾದಗಳು ಧೂಳಿನಿಂದ ಇನ್ಪೆಕ್ಷನ್ ಆಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಡ್ರೆಸ್ಸಿಂಗ್ ಚಿಕಿತ್ಸೆ ನೀಡಲಾಗುತ್ತದೆ. ಆರೋಗ್ಯ ಕಾಳಜಿಯ ಮುಂಜಾಗ್ರತೆಯ ಕ್ರಮವಾಗಿ ಇನ್ನಿತರ ಔಷಧಿಗಳನ್ನೂ ಸಹ ನೀಡಲಾಗುತ್ತದೆ. ಜೊತೆಗೆ ಸರ್ಕಾರಿ 108 ಆಂಬುಲೆನ್ಸ್ ವಾಹನದ ಸಿಬ್ಬಂದಿ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುತ್ತಾರೆ.
‘ಲಕ್ಷದೀಪೋತ್ಸವದ ಪಾದಯಾತ್ರೆಯಿಂದ ಪ್ರಾರಂಭವಾಗುವ ಆರೋಗ್ಯ ಸೇವೆ ಕೊನೆ ದಿನದವೆರಗೂ ಭಕ್ತರಿಗೆ ಲಭ್ಯವಿರುತ್ತದೆ. ಎನ್ನುತ್ತಾರೆ ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಯ ಶುಶ್ರೂಷಕ ಬೀನು ಜೋಶಿ. ಇದರ ಹೊರತಾಗಿಯೂ ಧರ್ಮಸ್ಥಳದ ಲಕ್ಷದೀಪೋತ್ಸವಲ್ಲಿ ಕೌಂಟರ್‌ಗಳನ್ನು ಸ್ಥಾಪಿಸಿ ಉಚಿತ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತದೆ.
ಲಕ್ಷದೀಪೋತ್ಸವದ ಪಾದಯಾತ್ರೆ ಪ್ರಾರಂಭವಾದ ವರ್ಷದಿಂದಲೂ ನಾನು ಭಾಗವಹಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಈ ಸೇವೆಗೆ ಗೈರು ಆಗುವುದಿಲ್ಲ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಭಕ್ತರಿಗೆ ಸೇವೆಯನ್ನು ನೀಡುವ ಮೂಲಕ ಮಂಜುನಾಥನ ಕೃಪೆಗೆ ಪಾತ್ರರಾಗುತ್ತೇವೆ ಎಂದು ಅವರು ತಿಳಿಸಿದರು.
ವರದಿ – ಚಿತ್ರಗಳು: ಹೊನಕೇರಪ್ಪ ಸಂಶಿ