Advertisement

ಧರ್ಮಸ್ಥಳ ಲಕ್ಷದೀಪದಲ್ಲಿ ಕಂಡದ್ದು : ಬಳೆ ನಿನಾದದ ನಡುವೆ ಆತ್ಮವಿಶ್ವಾಸದ ಲಕ್ಷ್ಮಿ

09:51 AM Nov 25, 2019 | Hari Prasad |

ಕೆಲವರಿರುತ್ತಾರೆ ಎಷ್ಟೇ ಕಷ್ಟಗಳಿದ್ದರೂ ಮೌನವಾಗಿ ಸಹಿಸಿಕೊಳ್ಳುತ್ತಾರೆ. ಹಾಗೆ ಸಹಿಸಿಕೊಳ್ಳುತ್ತಲೇ ಬದುಕು ಕಟ್ಟಿಕೊಳ್ಳುವುದರ ಕಡೆಗೆ ಗಮನ ಹರಿಸುತ್ತಾರೆ. ನೋವುಗಳನ್ನು ನಿವೇದಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಕಾರ್ಯನಿರತರಾಗಿ ಹಿಂದಿನ ಸಾಂಪ್ರದಾಯಿ ಕಟ್ರೆಂಡ್‌ನ್ನು ಉಳಿಸುವಂಥ ವ್ಯವಹಾರವನ್ನು ಬಿಟ್ಟುಕೊಡದೇ ಮುಂದಡಿಯಿಡುತ್ತಾರೆ. ಆರ್ಥಿಕ ಸಂಕಷ್ಟದ ಬಿಕ್ಕಟ್ಟು ಎದುರಾದಾಗಲೂ ಅದೇ ವಹಿವಾಟಿನಲ್ಲಿಯೇ ಉಳಿದುಕೊಳ್ಳುವ ಬದ್ಧತೆ ತೋರುತ್ತಾರೆ.

Advertisement

ಈ ಸಲದ ಲಕ್ಷದೀಪೋತ್ಸವದಲ್ಲಿ ಅಂಥ ಮಾದರಿ ವ್ಯಕ್ತಿತ್ವಕ್ಕೆ ವೇದಿಕೆಯೊದಗಿಸಿಕೊಟ್ಟಿದೆ. ಇದಕ್ಕೆ ಸಾಕ್ಷಿಯಾಗಲು ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಾದ್ವಾರದ ಮೂಲಕ ಹಾದುಹೋಗಬೇಕು. ಅಲ್ಲಿ ಗಾಜಿನ ಬಳೆಗಳ ಸಂಗ್ರಹ ಕಾಣಸಿಗುತ್ತದೆ. ಅದರ ಪಕ್ಕದಲ್ಲಿ ಕುಳಿತವರೇ ಆ ವ್ಯಕ್ತಿತ್ವ. ಹೆಸರು ಲಕ್ಷ್ಮಿ. ಲಕ್ಷದೀಪೋತ್ಸವದ ಜನ ಜಾತ್ರೆಯ ಮಧ್ಯೆಅವರು ಮಾರುವ ಸಾಂಪ್ರದಾಯಿಕ ಬಳೆಗಳು ಆಕರ್ಷಿಸುತ್ತಿವೆ.

ಬದುಕು ಹಲವರನ್ನು ಪರೀಕ್ಷೆಗೊಡ್ಡಿದಾಗ ಛಲ ಕಳೆದುಕೊಳ್ಳದೇ ಮುಂದಡಿಯಿಡುವ ಆತ್ಮವಿಶ್ವಾಸ ಮನಗಾಣಿಸುವಂತೆಯೇ ಲಕ್ಷ್ಮಿ ಮಾತನಾಡುತ್ತಾರೆ. ಬಳೆಯ ಮಾರಾಟದ ವಿವರಗಳನ್ನು ನೀಡುವಾಗಲೇ ಬದುಕಿನ ವೈರುಧ್ಯಗಳ ಮಧ್ಯೆಸಾಂಪ್ರದಾಯಿಕ ಬಳೆಗಳ ಮಾರಾಟದೊಂದಿಗೇ ಗುರುತಿಸಿಕೊಂಡಿರುವ ಅವರ ವಿಶೇಷತೆ ಮನದಟ್ಟಾಗುತ್ತದೆ.
ಇವರು ಪ್ರತಿ ವರ್ಷ ಬಳೆ ಮಾರಾಟಕ್ಕಾಗಿ ಬರುತ್ತಿದ್ದಾರೆ.


ಎಲ್ಲೇ ಜಾತ್ರೆ ಉತ್ಸವಗಳು ನಡೆದರೂ ಅಲ್ಲಿಗೆ ತೆರಳಿ ವ್ಯಾಪಾರ ವಹಿವಾಟು ನಡೆಸುವುದು ಇವರ ಆದ್ಯತೆ. ಕಳೆದ 32 ವರ್ಷಗಳಿಂದ ಬಳೆ ವ್ಯಾಪಾರವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಪತಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಅವರ ಆತ್ಮವಿಶ್ವಾಸ ಕಳೆಗುಂದಿಲ್ಲ. ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಬಳೆ ವ್ಯಾಪಾರದಿಂದ ಬಂದ ಹಣದಿಂದ ಪತಿಯ ಚಿಕಿತ್ಸೆಯ ವೆಚ್ಚ ಭರಿಸುತ್ತಿದ್ದಾರೆ.
ಇದು ನಮ್ಮ ವಂಶವೃತ್ತಿ. ಅದುದರಿಂದ ಮೊದಮೊದಲು ನಮ್ಮ ಹಿರಿಯರೊಟ್ಟಿಗೆ ಬಳೆ ವ್ಯಾಪಾರಕ್ಕಾಗಿ  ಬರುತ್ತಿದ್ದೆ. ನಂತರ ಪಾರಂಪರಿಕವಾಗಿ ಬಂದ ಈ ವೃತ್ತಿಯನ್ನು ನಾನು ಮುನ್ನೆಡಿಸಿಕೊಂಡು ಬಂದೆ ಎನ್ನುತ್ತಾರೆ ಲಕ್ಷ್ಮಿ.

ಮೊದಲೆಲ್ಲ ಗಾಜಿನ ಬಳೆಗಳಿಗೆ ವಿಶೇ? ಸ್ಥಾನಮಾನವಿತ್ತು. ಜಾತ್ರೆ, ಉತ್ಸವಗಳಲ್ಲಿ ಹೆಣ್ಣು ಮಕ್ಕಳು ಗಾಜಿನ ಬಳೆ ಅಂಗಡಿಗಳಿಗೆ ಭೇಟಿ ನೀಡದೆ ಹಿಂತಿರುಗುತ್ತಿರಲಿಲ್ಲ. ಸಾಮಾನ್ಯ ದಿನಗಳಲ್ಲಿ ತಿಂಗಳಿಗೊಮ್ಮೆ ಬಳೆಗಾರ ವ್ಯಾಪಾರಕ್ಕೆ ಮನೆಮನೆಗೆ ಬರುವುದನ್ನೇ ಕಾದು ಕುಳಿತಿರುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಗಾಜಿನ ಬಳೆ ಕೊಳ್ಳುವುದಕ್ಕೆ ಯುವತಿಯರು ಹಿಂದೆಮುಂದೆ ನೋಡುವಂತಾಗಿದೆ ಎನ್ನತ್ತಾರೆ ಅವರು.

ಈ ಪುಟ್ಟ ವೃತ್ತಿಯೇ ನಮ್ಮ ಜೀವನದ ಆಸ್ತಿ ಮತ್ತು ಆಧಾರ ಎಲ್ಲವೂ ಆಗಿದೆ. ನಮ್ಮ ಹಿರಿಯರ ಕಾಲದಿಂದಲೂ ನಾವು ಇದೇ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದೇವೆ, ಇದು ನಮ್ಮ ಜೀವನವನ್ನೂ ರೂಪಿಸಿದೆ. ಗಾಜಿನ ಬಳೆ ವ್ಯಾಪಾರ ನಮ್ಮ ಹಿರಿಯರ ಬದುಕನ್ನು ಕಟ್ಟಿಕೊಟ್ಟಿರುವುದರಿಂದ ಈಗ ಗಾಜಿನ ಬಳೆಗಳಿಗೆ ಗ್ರಾಹಕರು ಕಡಿಮೆ ಎಂಬ ಕಾರಣಕ್ಕೆ ವ್ಯಾಪಾರವನ್ನು ಬದಲಿಸಲು ಮನಸ್ಸುಒಪ್ಪುವುದಿಲ್ಲ,  ಬಂದ ದುಡಿಮೆಯಲ್ಲೇ ನಾವು ಖುಷಿಯನ್ನು ಕಾಣಬೇಕಿದೆ ಎಂಬ ವಿಷಾದವೂ ಅವರದ್ದು.

Advertisement

ಈಗಲೂ ಕಾಲ ಮಿಂಚಿ ಹೋಗಿಲ್ಲ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚರಣೆಗಳು ಮತ್ತು ಅವುಗಳ ಮಹತ್ವವನ್ನು ಪರಿಚಯಿಸಿಬೇಕಿದೆ. ಆಗಲಾದರೂ ಯುವಜನತೆ  ಗಾಜಿನ ಬಳೆಗಳ ಮಹತ್ವ ತಿಳಿದುಕೊಳ್ಳುವುದಕ್ಕೆ ಮುಂದಾಗುತ್ತಾರೆ ಎಂಬ ಆಶಾಭಾವನೆಯನ್ನೂ ವ್ಯಕ್ತಪಡಿಸುತ್ತಾರೆ.

ಹಸಿರು ಗಾಜಿನ ಬಳೆಗಳೇ ಸ್ತ್ರೀಕುಲದ ಶುಭ ಸ್ವರಗಳೇ ಎಂಬ ಹಾಡಿನಂತೆ  ಸ್ತ್ರೀಕುಲಕ್ಕೆ ಬಳೆಗಳೇ ಶೃಂಗಾರವಿದ್ದಂತೆ. ಮಹಿಳೆಯರ ಸುಂದರ ಕೈಗಳನ್ನು ಅಲಂಕರಿಸುವುದೇ ಬಳೆಗಳು. ಬಳೆಗಳಿಲ್ಲದೆ ಅವಳ ಅಲಂಕಾರವು ಪೂರ್ಣ ಅನಿಸುವುದಿಲ್ಲ. ಆದರೆ ಇತ್ತೀಚೆಗೆ ಕುಂಕುಮ, ಸರ, ಕಿವಿಯೋಲೆ ಮೂಗುತಿ ತೊಡುವ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲೇ ಬಳೆಗಾರರೂ ಕೂಡ ಕಾಲ ಕ್ರಮೇಣ ಕಣ್ಮರೆಯಾಗುತ್ತಿದ್ದಾರೆ.

ಹಿಂದೆ ಮಹಿಳೆಯರು ಕೈ ತುಂಬ ಗಾಜಿನ ಬಳೆಗಳನ್ನು ಧರಿಸಿಕೊಂಡು ಬಳೆಯ ಘಲ್‌ಘಲ್ ಶಬ್ದವನ್ನು ಆಲಿಸಿ ಆನಂದಿಸುತ್ತಿದ್ದರು. ಆದರೆ ಈಗಿನ ಆಧುನಿಕ ಕಾಲದಲ್ಲಿ ಯುವತಿಯರು ಗಾಜಿನ ಬಳೆಗಳನ್ನು ತೊಡುವುದನ್ನು ನಿರಾಕರಿಸುತ್ತಾರೆ. ಯಾಕೆಂದರೆ ಕೆಲಸದ ವೇಳೆ ಒಡೆದು ಹೋಗಿ ತಮ್ಮ ಕೈಗಳಿಗೆ ನೋವಾಗಬಹುದು  ಮತ್ತು ಅವುಗಳ ಧ್ವನಿ ಕಿರಿಕಿರಿಯಾಗುತ್ತವೆಎಂದು ಬಳೆಗಳನ್ನು ತೊಡಲು ಇಷ್ಟಪಡುವುದಿಲ್ಲ. ಹೀಗೆ ಹಿನ್ನೆಲೆಗೆ ಸರಿದ ಸಾಂಪ್ರದಾಯಿಕ ಗಾಜಿನ ಬಳೆಗಳ ಟ್ರೆಂಡ್‌ನ್ನು ಉಳಿಸಿಕೊಳ್ಳುವ ಮಾದರಿ ಮಹಿಳೆಯಾಗಿ ಲಕ್ಷ್ಮಿ ಮುಖ್ಯವೆನ್ನಿಸುತ್ತಾರೆ.

ಚಿತ್ರ ಮತ್ತು ವರದಿ: ಅಂಕಿತ ಪಟ್ಲ

Advertisement

Udayavani is now on Telegram. Click here to join our channel and stay updated with the latest news.

Next