ಎಚ್.ಡಿ.ಕೋಟೆ: ಧರ್ಮಸ್ಥಳ ಸಂಸ್ಥೆ ಅಕ್ಷರ ದಾಸೋಹ, ಅನ್ನ ದಾಸೋಹದೊಂದಿಗೆ ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಜಾತಿ-ಪಕ್ಷವನ್ನು ಹೊರತುಪಡಿಸಿ ಕೆಲಸ ಮಾಡುತ್ತಿದೆ. ಎಲ್ಲರೂ ಸೇವಾಕಾರ್ಯದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಮಾನವೀಯ ಮೌಲ್ಯ ಮೈಗೂಢಿಸಿಕೊಂಡವರು ಮಾತ್ರ ಇಂಥ ಸೇವೆಯನ್ನು ನಿರಂತರವಾಗಿ ಮಾಡಲು ಸಾಧ್ಯ ಎಂದು ನಿವೃತ್ತ ಹೆಚ್ಚುವರಿ ಜವಳಿ ಆಯುಕ್ತ ನಾಗೇಶ್ ಎಂ.ಮಗದೂರು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಸಾಮೂಹಿಕ ಸತ್ಯನಾರಾಯಣ ಸಮಿತಿ ಜಂಟಿಯಾಗಿ ತಾಲೂಕಿನ ಜಕ್ಕಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ಹಾಗೂ ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಮಹಿಳೆಯರನ್ನು ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಸಬಲೀಕರಣಗೊಳಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಸಚಿವ ಎಂ.ಶಿವಣ್ಣ ಮಾತನಾಡಿ, ಧರ್ಮಸ್ಥಳ ಸಂಸ್ಥೆಯೊಂದಿಗೆ ಬಹಳವಾದ ನಿಕಟ ಸಂಬಂಧವಿದೆ. ತಮ್ಮ ವಿವಾಹವು ಶ್ರೀ ಕ್ಷೇತ್ರದಲ್ಲಿ ನೆರವೇರಿತು. ಸಂಸ್ಥೆ ಉತ್ತಮ ಸೇವಾಕಾರ್ಯದಲ್ಲಿ ತೊಡಗಿದ್ದು, ಸಮುದಾಯದ ಅಭಿವೃದ್ಧಿಗೆ ಪಣ ತೊಟ್ಟಿದೆ ಎಂದು ತಿಳಿಸಿದರು.
ಗ್ರಾಮದ ಅಕ್ಕ ಪಕ್ಕದ ಸುಮಾರು ಹತ್ತಕ್ಕೂ ಹೆಚ್ಚು ಹಳ್ಳಿಗಳ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಜಕ್ಕಹಳ್ಳಿ ಗುರುಮಲ್ಲೇಶ್ವರ ದಾಸೋಹ ಮಠದ ನಂದೀಶ ಸ್ವಾಮೀಜಿ, ಬೀಚನಹಳ್ಳಿ-ಪುರ ಸಿದ್ದೇಮಲ್ಲೇಶ್ವರ ಪಟ್ಟದ ಮಠದ ನಾಗೇಂದ್ರ ಸ್ವಾಮೀಜಿ, ಜಿಪಂ ಸದಸ್ಯ ವೆಂಕಟಸ್ವಾಮಿ, ತಾಪಂ ಸದಸ್ಯೆ ಟಿ.ಅಂಕನಾಯಕ, ತುಂಬಸೋಗೆ ಗ್ರಾಪಂ ಉಪಾಧ್ಯಕ್ಷೆ ಮಂಗಳಮ್ಮ,
ಜಕ್ಕಳ್ಳಿ ಯೋಗೇಶ್‌ಕುಮಾರ್, ಸಂಸ್ಥೆ ಯೋಜನಾಧಿಕಾರಿ ಎಂ.ಶಶಿಧರ್, ಸರಗೂರು ವಲಯ ಮೇಲ್ವಿಚಾರಕ ಕೆ.ದಿನೇಶ್, ಮುಖಂಡರಾದ ರವೀಂದ್ರ, ಮಹದೇವಮ್ಮ ಮಲ್ಲೇಶ್, ಜೆ.ಎಸ್.ಮೂರ್ತಿ, ಶ್ರೀಧರ್, ಸಿದ್ದಯ್ಯ, ನೀಲಕಂಠಯ್ಯ, ಸಮಿತಿಯ ಸೋಮಣ್ಣ, ಕೆಂಡಗಣ್ಣಸ್ವಾಮಿ, ಜೆ.ಎಂ.ಮಹದೇವಪ್ಪ, ಜೆ.ಪಿ.ಶಿವರಾಜು, ಎಸ್.ಮಾದಪ್ಪ, ಸಿ.ಚಲುವಯ್ಯ, ಚಿನ್ನಸ್ವಾಮಿ, ಸಿ.ಎನ್.ಶಿವಲಿಂಗಯ್ಯ, ಜೆ.ಬಿ.ಶಿವಸ್ವಾಮಿ, ಜೆ.ಎಂ.ಮಾದರಾಜು, ಜಗದೀಶ್ ಇತರರು ಉಪಸ್ಥಿತರಿದ್ದರು.