ಬೆಳ್ತಂಗಡಿ : ಪ್ರತಿ ವ್ಯಕ್ತಿ ಬದುಕುವುದಕ್ಕೆ ಹೇಗೆ ನಿತ್ಯವೂ ಆಹಾರ ಸೇವಿಸುತ್ತಾನೋ ಅದೇ ರೀತಿ ನಾವು ಸ್ವಚ್ಛತಾ ಕಾರ್ಯವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೇ ನಿತ್ಯ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ಬದುಕಿನಲ್ಲಿ ಸ್ವಚ್ಛತೆಯೇ ನಮ್ಮ ಉಸಿರಾಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಹೇಳಿದರು.
ಅವರು ಶನಿವಾರ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಸ್ಥಳೀಯ ಗ್ರಾ.ಪಂ., ಶ್ರೀಕ್ಷೇತ್ರ ಧ.ಗ್ರಾ. ಯೋಜನೆ, ಸ್ವತ್ಛತಾ ಜಾಗೃತಿ ವೇದಿಕೆಯ ಸಹಯೋಗದಲ್ಲಿ ಆಯೋಜಿಸಿದ ಗ್ರಾಮ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸ್ವಚ್ಛತಾ ಅಭಿಯಾನ ಬಳಿಕ ಸಂದೇಶ ನೀಡಿದರು. ಪ್ರಸ್ತುತ ದಿನಗಳಲ್ಲಿ ಸ್ವಚ್ಛತೆ ಎನ್ನುವುದು ನಮ್ಮ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು, ಪ್ರಕೃತಿ ಉಚಿತವಾಗಿ ನೀಡಿದ ಗಾಳಿ, ನೀರು, ಬೆಳಕು, ಮಣ್ಣನ್ನು ಹಾಳು ಮಾಡಿದ್ದೇವೆ. ಮಣ್ಣು ಅಗೆದಾಗ ಗುಟ್ಕಾ ಪ್ಯಾಕೇಟ್‌ಗಳೇ ಸಿಗುತ್ತಿದ್ದು, ಲಾಟರಿಯಂತೆ ಗುಟ್ಕಾ ನಿಷೇಧದ ಕುರಿತು ಸರಕಾರ ಹೆಚ್ಚಿನ ಗಮನಹರಿಸಬೇಕಿದೆ ಎಂದು ತಿಳಿಸಿದರು.
ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಮಾತನಾಡಿ, ತ್ಯಾಜ್ಯ ಸಂಗ್ರಹದ ಜತೆಗೆ ಅದರ ವಿಲೇವಾರಿಯೂ ಪ್ರಸ್ತುತ ಸವಾಲಿನ ಕಾರ್ಯವಾಗಿದ್ದು, ಈ ಕುರಿತು ಜನತೆ ಜಾಗೃತವಾಗಿರುವುದು ಅನಿವಾರ್ಯವಾಗಿದೆ. ಎಸ್‌ಡಿಎಂ ಸಂಸ್ಥೆಯಲ್ಲಿ ಕಸ ವಿಲೇವಾರಿಗೆ ಪ್ರತ್ಯೇಕ ಘಟಕ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೂ ಅದರ ಕುರಿತು ತಿಳಿಹೇಳುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಗ್ರಾ.ಪಂ. ಉಪಾಧ್ಯಕ್ಷೆ ಜಯಂತಿ ಚಂದ್ರಹಾಸ, ಗ್ರಾಮಾಭಿವೃದ್ಧಿ ಯೋಜನೆಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ, ಪಿಡಿಒ ಉಮೇಶ್ ಕೆ., ಕಾರ್ಯದರ್ಶಿ ವಿಶ್ವನಾಥ, ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯ ಶ್ರೀನಿವಾಸ್ ರಾವ್ ಸ್ವಾಗತಿಸಿ, ಶುದ್ಧಗಂಗಾ ಘಟಕದ ಯೋಜನಾಧಿಕಾರಿ ಪ್ರವೀಣ್ ವಂದಿಸಿದರು. ಶುದ್ಧಗಂಗಾ ಘಟಕದ ನಿರ್ದೇಶಕ ಲಕ್ಷ್ಮಣ್ ನಿರೂಸಿದರು. ಸುಮಾರು 700 ಮಂದಿ ಧರ್ಮಸ್ಥಳ ಪರಿಸರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಸ್ವಚ್ಛತೆ ನಮ್ಮ ಅಸ್ತಿತ್ವದ ಪ್ರಶ್ನೆ
ಪೆಡಂಭೂತವಾಗಿ ಕಾಡುತ್ತಿರುವ ಪ್ಲಾಸ್ಟಿಕ್ ಬಳಕೆ ಕುರಿತು ಹೆಚ್ಚು ಜಾಗೃತರಾಗಬೇಕಿದ್ದು, ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿದರೆ ಹೆತ್ತವರಿಗೂ ಅದನ್ನು ತಿಳಿಹೇಳುವ ಕೆಲಸವನ್ನು ಅವರು ಮಾಡುತ್ತಾರೆ. ಮನುಷ್ಯ ಮಾಡಿದ ತಪ್ಪಿನಿಂದ ಜೀವರಾಶಿಗಳು ನಾಶವಾಗಿವೆ. ಹೀಗಾಗಿ ಸ್ವಚ್ಛತೆ ನಮ್ಮ ಅಸ್ತಿತ್ವದ ಪ್ರಶ್ನೆಯಾಗಿದೆ.
– ಹೇಮಾವತಿ ವೀ. ಹೆಗ್ಗಡೆ, ಶ್ರೀಕ್ಷೇತ್ರ ಧರ್ಮಸ್ಥಳ