Advertisement

ಜಪಾನ್‌ ತಲುಪಿತ್ತು ಧರ್ಮಸ್ಥಳ ಬಾಹುಬಲಿ ಶಿಲ್ಪಿಯ ಖ್ಯಾತಿ

01:00 AM Feb 01, 2019 | Harsha Rao |

ಹೊಳೆಯಿತು ವಿವೇಚನೆಯ ಸೆಲೆ
ಅವನು ಬಾಹುಬಲಿ. ಹೆಸರಿಗೆ ತಕ್ಕಂತೆ ಆಜಾನುಬಾಹು, ಮಹಾಬಲಿ, ಪರಮತ್ರಾಣಿ. ಅಣ್ಣ ಭರತನೆದುರು ಒಂದು ತೂಕ ಹೆಚ್ಚೇ ತೂಗುವ ಮಹಾಪರಾಕ್ರಮಿ. ರಾಜ್ಯವನ್ನು ಒಪ್ಪಿಸುವೆಯಾ ಎಂದು ಅಣ್ಣ ಪ್ರೀತಿಯಿಂದ ಕೇಳಿದ್ದರೆ ಒಪ್ಪುತ್ತಿದ್ದನೇನೋ. ಆದರೆ ಅಧಟಿನಿಂದ ಮಂಡಿಸಿದ ಆಗ್ರಹಕ್ಕೆ ಸಮ್ಮತಿಸಲಿಲ್ಲ. ಭರತನ ಸೇನೆಯನ್ನು ಎದುರಿಸಲು ಸನ್ನಾಹ ನಡೆಸಿದ. ಎರಡೂ ಸೇನೆಗಳು ಎದುರುಬದುರಾದಾಗ ಎರಡೂ ಬಣಗಳ ಮುತ್ಸದ್ದಿ ಸಚಿವರಿಗೆ ವೃಥಾ ರಕ್ತಪಾತವಾಗುವುದಲ್ಲವೇ ಎಂಬ ಚಿಂತೆ ಕಾಡಿತು. ಕಲಹವಿರುವುದು ನಿಮ್ಮಿಬ್ಬರಲ್ಲಿ, ನೀವಿಬ್ಬರೇ ಸೆಣಸಿದರೆ ಸಾಕು, ಲಕ್ಷಗಟ್ಟಲೆ ಸೈನಿಕರೇಕೆ ಮಡಿಯಬೇಕು ಎಂದು ಅವರು ಭರತ-ಬಾಹುಬಲಿಯರ ಮನವೊಲಿಸಿದರು.
ಉಭಯ ಸೇನಾ ಸಮೂಹಗಳ ನಡುವೆ ಸಿದ್ಧವಾದ ಹೋರಾಟದ ಅಂಕಣದಲ್ಲಿ ಭರತ-ಬಾಹುಬಲಿ ಸೆಣಸಿ
ದರು. ದೃಷ್ಟಿಯುದ್ಧ, ಜಲಯುದ್ಧಗಳಲ್ಲಿ ಭರತ ಸೋತು ಹೋದ. ಮಲ್ಲಯುದ್ಧದಲ್ಲಿಯೂ ಬಾಹುಬಲಿಯ ಕೈಯೇ ಮೇಲಾಯಿತು. ಭರತನನ್ನು ಮೇಲೆತ್ತಿ ಹಿಡಿದು ಇನ್ನೇನು ನೆಲಕ್ಕೆ ನಿರ್ದಯವಾಗಿ ಕುಕ್ಕಬೇಕು ಎನ್ನುವಾಗ ಅವನ ಮನಸ್ಸಿನಲ್ಲಿ ವಿವೇಚನೆಯ ಎಳೆಯೊಂದು ಉಷಃಕಾಲದ ಸೂರ್ಯರೇಖೆಯಂತೆ ಮೂಡಿತು. ನೆಲದ -ಭವದ ಮೋಹ ಅದೆಂತಹ ಹೀನಕಾರ್ಯವನ್ನು ತನ್ನಿಂದ ಮಾಡಿಸುತ್ತಿದೆ, ತಾನು ಹಿಡಿದು ನೆಲಕ್ಕಪ್ಪಳಿಸಲಿರುವುದು ಯಾರನ್ನು ಎಂಬ ಯೋಚನೆ ಅವನ ಮನಸ್ಸನ್ನು ಕಲಕಿತು. ಅಣ್ಣನನ್ನು ಹೂವಿನಂತೆ ನೆಲಕ್ಕಿಳಿಸಿದ ಬಾಹುಬಲಿ.

Advertisement

ಬಾಹುಬಲಿಯ ಸೇನೆ ಜಯಜಯವೆಂದಿತು. ಸೋತು ಕರುಣೆಗೆ ಪಾತ್ರನಾದುದು ಭರತನ ಅಹಮಿಕೆ ಯನ್ನು ಕೆಣಕಿತು. ಯುದ್ಧದ ನಿಯಮವನ್ನು ಮರೆತು ಆತ ಚಕ್ರರತ್ನವನ್ನು ಪ್ರಯೋಗಿಸಿದ. ಆದರೆ ಅದು ಬಾಹು ಬಲಿಗೆ ಪ್ರದಕ್ಷಿಣೆಗೈದು ಬಲಭುಜದ ಬಳಿ ನಿಂತಿತು. 

ಅಣ್ಣ ಭರತನಿಗೆ ಸೋಲಾದ ಬಳಿಕ ಅರಸನಾಗಬೇಕಿದ್ದ ಬಾಹುಬಲಿ ಅದನ್ನು ತಿರಸ್ಕರಿಸಿದ. ಅಣ್ಣನೆಂಬ ಮಮತೆ ಯನ್ನೇ ಮರೆಯಿಸಬಲ್ಲ ಭವದ ಆಸೆ-ಆಕಾಂಕ್ಷೆಗಳು ಬೇಡ ಎಂದು ನಿರ್ಧರಿಸಿ, ಕೇವಲ ಜ್ಞಾನವನ್ನು ಹಂಬಲಿಸಿದ. ಮೋಕ್ಷಗಾಮಿಯಾಗಿ ನಿಂತ ಮೆಟ್ಟಿನಲ್ಲಿಯೇ ತಪವನ್ನಾ ಚರಿಸಲು ನಿಶ್ಚಯಿಸಿದ.

(ಇನ್ನೂ ಇದೆ)
ಪಂಪ ಮಹಾಕವಿಯ ಆದಿಪುರಾಣವನ್ನು ಆಧರಿಸಿ ಬಾಹುಬಲಿಯ ಪಾವನ ವೃತ್ತಾಂತವನ್ನು ಹೊಸ ತಲೆಮಾರಿಗೆ ಸಂಕ್ಷಿಪ್ತವಾಗಿ ತಿಳಿಯಪಡಿಸುವ ಪ್ರಯತ್ನ ಬಾಹುಬಲಿ ಪುರಾಣ. 

ಬೆಳ್ತಂಗಡಿ: ಬದುಕಿನ ದಾರಿಯನ್ನೇ ಬದಲಾಯಿಸಿ ಬಿಡುವ, ಜೀವಿತಕ್ಕೆ ಏಕಮಾತ್ರ ಅನ್ನು ವಂತಹ ಯಾವುದಾದರೂ ಒಂದು ಮಹಾನ್‌ ಘಟನೆ ಪ್ರತಿಯೊಬ್ಬರ ಜೀವನದಲ್ಲಿಯೂ ನಡೆಯುತ್ತದೆ. ಶಿಲ್ಪಿ ರೆಂಜಾಳ ಗೋಪಾಲ ಶೆಣೈ ಅವರ ಜೀವನವನ್ನೇ ಅವಲೋಕಿಸಿ ದರೆ, ಪ್ರಾಯಃ ಧರ್ಮಸ್ಥಳದ ಗೊಮ್ಮಟ ವಿಗ್ರಹದ ಕೆತ್ತನೆ ಅವರ ಪಾಲಿಗೆ ಅಂಥ ಘಟನೆ. ಬಾಹು ಬಲಿ ಮೂರ್ತಿಯನ್ನು ಕೆತ್ತಿದ ಮೇಲೆ ಅವರಿಗೆ ಮನ್ನಣೆಯೂ ಕೀರ್ತಿಯೂ ಒದಗಿಬಂದವು. ಅವರ ಖ್ಯಾತಿ ದೂರದ ಬುದ್ಧನ ನಾಡು ಜಪಾನಿಗೂ ತಲುಪಿ, ಅಲ್ಲಿಗೆ 63 ಅಡಿ ಎತ್ತರದ (20 ಮೀ.) ಬುದ್ಧನ ವಿಗ್ರಹವೊಂದನ್ನು ಕೆತ್ತನೆ ಮಾಡಿ ಕಳುಹಿಸುವಂತಾಯಿತು. 

Advertisement

ಆದರೆ ಅದು ಏಕಶಿಲಾ ವಿಗ್ರಹ ವಾಗಿರಲಿಲ್ಲ, 54 ಶಿಲಾಭಾಗಗಳನ್ನು ಸೇರಿಸಿ ರಚನೆಗೊಂಡಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ರೆಂಜಾಳ ಗೋಪಾಲ ಶೆಣೈ ಅವರ ಮೊಮ್ಮಗ ರಾಧಾಮಾಧವ ಶೆಣೈ. ಅವರು ಶಿಲ್ಪಿ ರೆಂಜಾಳ ಜನಾರ್ದನ ಶೆಣೈ ಅವರ ಕುಟುಂಬದಲ್ಲಿ ಮೂರನೆಯ ತಲೆಮಾರಿನ ಶಿಲ್ಪಿ.

ರೆಂಜಾಳ ಗೋಪಾಲ ಶೆಣೈ ಅವರಿಗೆ ಜಪಾನ್‌ನ ಸಂಪರ್ಕ ಹೇಗಾಯಿತು ಎಂದು ಪ್ರಶ್ನೆ ಸಹಜ. ಆ ಕಾಲದಲ್ಲಿ ಟಿ.ಎ. ಪೈ ಅವರು ಕೇಂದ್ರದಲ್ಲಿ ಸಚಿವರಾಗಿದ್ದರು. ಆಗ ಜಪಾನಿ ನಿಯೋಗವೊಂದು ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸಂಪರ್ಕಿಸಿ ಬುದ್ಧನ ಸುಂದರ ವಿಗ್ರಹ ನಿರ್ಮಿಸಿ ಕೊಡಬಲ್ಲ ಸಮರ್ಥರನ್ನು ತೋರಿಸಿಕೊಡಬಲ್ಲಿರಾ ಎಂದು ವಿನಂತಿಸಿತ್ತು. 

ಇಂದಿರಾ ಗಾಂಧಿಯವರು ಟಿ.ಎ. ಪೈ ಅವರಲ್ಲಿ ವಿಚಾರಿಸಿದಾಗ ಅವರಿಗೆ ನೆನಪಾದುದು ಧರ್ಮಸ್ಥಳದ ಬಾಹುಬಲಿ ಮತ್ತು ಅದನ್ನು ಕೆತ್ತಿದ ರೆಂಜಾಳ ಗೋಪಾಲ ಶೆಣೈ ಅವರ ಹೆಸರು. ಆಗ ಇಂತಹ ಮೂರ್ತಿ ಗಳನ್ನು ವಿದೇಶಕ್ಕೆ ಸಾಗಿಸಬೇಕಾದರೆ ಕೇಂದ್ರ ಸರಕಾರದಿಂದ ವಿಶೇಷವಾದ ಆಮದು ಪರವಾನಿಗೆ ಸಿಗಬೇಕಿತ್ತು. ಮೂರ್ತಿ ಸಿದ್ಧಗೊಂಡ ಬಳಿಕ ಮಂಗಳೂರು ಬಂದರಿನ ಮೂಲಕ ಜಪಾನ್‌ಗೆ ರವಾನಿಸಲಾಗಿತ್ತು. ಎಲೆಯ ಮರೆಯ ಕಾಯಿಯಂತಿದ್ದ ಅಜ್ಜನ ಪ್ರಸಿದ್ಧಿ ಧರ್ಮಸ್ಥಳ ಕ್ಷೇತ್ರದ ಮಹಿಮೆಯ ಫಲವಾಗಿಯೇ ಹೆಚ್ಚಿತು ಎಂದು ರಾಧಾಮಾಧವ ಶೆಣೈ ಅಭಿಪ್ರಾಯಪಡುತ್ತಾರೆ.

ಸ್ವಾಮಿಗಳ ಆಶೀರ್ವಾದದಿಂದ ಸಿದ್ಧಿ
ರೆಂಜಾಳ ಗೋಪಾಲ ಶೆಣೈ ಅವರ ಮನೆತನದಲ್ಲಿ ಪ್ರಸ್ತುತ ಮೂರನೇ ತಲೆಮಾರು ಶಿಲ್ಪಕಲಾ ವೃತ್ತಿಯನ್ನು ಮುನ್ನಡೆಸುತ್ತಿದೆ. ಇವರ್ಯಾರಿಗೂ ಈ ಕಲೆ ಕಲಿತು ಬಂದುದಲ್ಲ; ಸ್ವಾಮಿಗಳ ಆಶೀರ್ವಾದದಿಂದ ಈ ಕಲೆ ಅವರ ಮನೆತನಕ್ಕೆ ಸಿದ್ಧಿಸಿದೆ. ರೆಂಜಾಳ ಗೋಪಾಲ ಶೆಣೈ ಅವರ ತಂದೆ ಜನಾರ್ದನ ಶೆಣೈ ಅವರಿಗೆ ಕಾಶೀ ಮಠದ ಶ್ರೀ ಭುವನೇಂದ್ರತೀರ್ಥ ಸ್ವಾಮಿಗಳು ಈ ಕಲಾವಿಶೇಷವನ್ನು ಅನುಗ್ರಹಿಸಿದ್ದರು. ಆ ಬಳಿಕ ಇವರ ಮನೆತನದಲ್ಲಿ ಶಿಲ್ಪಕಲಾ ಪರಂಪರೆ ಆರಂಭಗೊಂಡಿತ್ತು.

ಗೋಪಾಲ ಶೆಣೈ ಅವರಿಗೆ 18 ವರ್ಷ ವಯಸ್ಸಾಗಿದ್ದಾಗ ಜನಾರ್ದನ ಶೆಣೈ ತೀರಿ ಕೊಂಡರು. ಅಂದಿನ ಗುರುಗಳಾದ ಶ್ರೀ ವರದೇಂದ್ರತೀರ್ಥ ಸ್ವಾಮಿಗಳ ಬಳಿ ಹೋದಾಗ ನಿನಗೂ ಶಿಲ್ಪಕಲೆಯ ಅನುಗ್ರಹ ವಾಗುತ್ತದೆ ಎಂದು ಆಶೀರ್ವದಿಸಿದ್ದರು.

ಸ್ವಾಮಿಗಳ ಅನುಜ್ಞೆಯಂತೆ ಗೋàಪಾಲ ಶೆಣೈಯವರು ಶಿಲ್ಪಕಲೆಯನ್ನು ಕೈಗೆತ್ತಿ ಕೊಂಡರು. ಈಗ ರಾಧಾ ಮಾಧವ ಶೆಣೈ ಶಿಲ್ಪಕಲೆಯನ್ನು ಮುಂದುವರಿಸಿದ್ದಾರೆ. ಅವರಿಗೆ ಸುಧೀಂದ್ರತೀರ್ಥ ಸ್ವಾಮಿಗಳು ಪ್ರಸಾದ ನೀಡಿ ಆಶೀರ್ವದಿಸಿದ್ದರು.

ಸರ್ವಕಲೆಗಳ ಸಿದ್ಧಿ
ಗೋಪಾಲ ಶೆಣೈ ಅವರು ಶಿಲ್ಪಕಲಾ ವಲ್ಲಭರು ಮಾತ್ರವಲ್ಲ; ಅನೇಕ ಕಲೆಗಳಲ್ಲಿ ಪರಿಣತರಾಗಿದ್ದರು. ದಿನದ 24 ಗಂಟೆಗಳಲ್ಲಿ 18 ಗಂಟೆಗಳಷ್ಟು ಶಿಲೆಯನ್ನು ಶಿಲ್ಪವಾಗಿಸುವ ಕಾಯಕದಲ್ಲಿ ತೊಡಗಿರುತ್ತಿದ್ದ ಅವರು ಕಾಷ್ಠ ಶಿಲ್ಪ ನಿಪುಣರೂ ಆಗಿದ್ದರು. ದಂತ, ಮೃತ್ತಿಕೆ, ಲೋಹದ ಎರಕ, ಪೇಪರ್‌ ಪಲ್ಪ್ನಿಂದಲೂ ಶಿಲ್ಪಗಳನ್ನು ರಚಿಸಿದ್ದಾರೆ. ಚಿತ್ರಕಲಾವಿದರೂ ಆಗಿದ್ದರು. ಬಂಗಾರ-ಬೆಳ್ಳಿಯಲ್ಲಿ ಉಬ್ಬು ಶಿಲ್ಪ, ಪ್ರಭಾವಳಿ, ಮುಖವಾಡಗಳನ್ನು ಮಾಡಿದ್ದಾರೆ ಎನ್ನುತ್ತಾರೆ ರಾಧಾಮಾಧವ ಶೆಣೈ.

ಪ್ರತ್ಯೇಕ ಬಾವಿ ಕೊರೆದರು 
ಬಾಹುಬಲಿ ಮೂರ್ತಿ ಸಾಕಾರಗೊಳ್ಳುತ್ತಿದ್ದಂತೆ ಪ್ರತಿಷ್ಠಾಪನೆಗೆ ಸೂಕ್ತವಾದ ಸ್ಥಳ ಯಾವುದು ಎಂಬ ಪ್ರಶ್ನೆ ಡಾ| ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರಲ್ಲಿ ಉದ್ಭವಿಸಿತು. ಸ್ಥಳ ಹುಡುಕಾಟದ ಜವಾಬ್ದಾರಿ ಜೋತಿಷಿ ಶಶಿಕಾಂತ್‌ ಜೈನ್‌ ಅವರ ಹೆಗಲೇರಿತು. ಜೈನಧರ್ಮೀಯರ ಆರಾಧ್ಯ, ಶಾಂತಿ ಸೌಹಾರ್ದಗಳ ಸಂಕೇತ ಬಾಹುಬಲಿ ಮೂರ್ತಿಗೆ ಶಾಂತ-ಪವಿತ್ರ ಸ್ಥಳವೇ ಬೇಕಾಗಿತ್ತು. ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯ ಎಡಭಾಗದ ರಜತಗಿರಿ ಸೂಕ್ತ ಎಂದು ಜೋತಿಷಿಗಳು ಸೂಚಿಸಿದರು. 

ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆಯ ಕನಸು ಸಾಕಾರಗೊಳ್ಳಲು ಆರು ವರ್ಷಗಳ ಅವಧಿಯ ನಿರಂತರ ಶ್ರಮ ನೆರವಾಯಿತು. ಮಂಗಳಪಾದೆಯ ನಿವಾಸಿಗಳು ಮತ್ತು ಕಾರ್ಮಿಕರ ಸೇವಾ ಕೈಂಕರ್ಯದೊಂದಿಗೆ ಆರಂಭವಾದ ಈ ಪ್ರತಿಷ್ಠಾಪನಾ ಪ್ರಕ್ರಿಯೆಯ ಯಾನವು ಭಿನ್ನವಾಗಿತ್ತು. ಮೂರ್ತಿ ರೂಪುಗೊಂಡು ಧರ್ಮಸ್ಥಳದತ್ತ ಸಾಗುವ ವರೆಗೆ ಮಂಗಳಪಾದೆಯ ನಿವಾಸಿಗಳು ಮಾಂಸಾಹಾರ ತ್ಯಜಿಸಿದ್ದರು. ಶ್ರಮಿಕ ಕಾರ್ಮಿಕರಿಗೆ ಅನುಕೂಲವಾಗಲೆಂದು ಪ್ರತ್ಯೇಕ ಬಾವಿಯನ್ನೇ ಕೊರೆದಿದ್ದರು. ಆರು ವರ್ಷಗಳವರೆಗೆ ಮೂರ್ತಿ ರೂಪುಗೊಳಿ ಸುವ ಮತ್ತು ಪ್ರತಿಷ್ಠಾಪನೆಯ ಕೆಲಸದಲ್ಲಿ ತೊಡಗಿಕೊಂಡ ಕಾರ್ಮಿಕರ ಬಗ್ಗೆ ಹೆಗ್ಗಡೆ ಕುಟುಂಬವು ವಿಶೇಷ ಕಾಳಜಿ ವಹಿಸಿತ್ತು. 
ಹೆಗ್ಗಡೆ ಕುಟುಂಬದವರು ಆಗಾಗ ಭೇಟಿ ನೀಡಿ ಸುವ್ಯವಸ್ಥೆಯ ಹೊಣೆ ನಿಭಾಯಿಸುತ್ತಿದ್ದರು. 

– ಚಾರು

Advertisement

Udayavani is now on Telegram. Click here to join our channel and stay updated with the latest news.

Next