ಕುಂದಾಪುರ: ಇಲ್ಲಿನ ಪಂಚಗಂಗಾ ನದಿಯಲ್ಲಿ 14 ವರ್ಷಗಳಿಂದ ಚಿಪ್ಪುಗಳನ್ನು ಸಾಗಿಸುತ್ತಿದ್ದ ಬಾಲಾಜಿ ಹೆಸರಿನ ಹಾಯಿ ದೋಣಿಯೊಂದು ಸೇವೆಯಿಂದ ನಿವೃತ್ತಿಗೊಂಡು ಶ್ರೀ ಕ್ಷೇತ್ರ ಧರ್ಮಸ್ಥಳದ ವಸ್ತುಸಂಗ್ರಹಾಲಯ ಮಂಜೂಷಾವನ್ನು ಸೇರಲಿದೆ.
ಕುಂದಾಪುರ ಖಾರ್ವಿ ಮಧ್ಯಕೇರಿಯ ನಿವಾಸಿ ದಿ| ಶಂಕರ್ ಖಾರ್ವಿ ಅವರ ಪುತ್ರ ಜೈ ಬಾಲಾಜಿ ಇಂಡಸ್ಟ್ರೀಸ್ ಮಾಲಕ ಟೈಲರ್ ವೆಂಕಟೇಶ್ ಖಾರ್ವಿ ತಮ್ಮ ಹಾಯಿ ದೋಣಿಯನ್ನು ಧರ್ಮಸ್ಥಳಕ್ಕೆ ನೀಡಲುದ್ದೇಶಿಸಿದ್ದು ಜೂ. 9ರಂದು ಟ್ರಕ್ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು ಎಂದು ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ಜಯಾನಂದ ಖಾರ್ವಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
51 ಅಡಿ ಉದ್ದ, 10 ಅಡಿ ಅಗಲದ ಈ ಬೃಹತ್ ದೋಣಿ ಒಂದೇ ಮರದ ಹಲಗೆಯಿಂದ ನಿರ್ಮಿತವಾಗಿದೆ. ಕಂದ್ಲೂರಿನಲ್ಲಿ ಮರ ಕಡಿದು ಉಡುಪಿಯಲ್ಲಿ ಹಲಗೆ ಮಾಡಿ ಮದ್ದುಗುಡ್ಡೆಯ ನಾಗರಾಜ (ಮುನ್ನ) ಮೇಸ್ತ ಅವರು ತಯಾರಿಸಿದ ಈ ದೋಣಿಗೆ 22 ಅಡಿ ಎತ್ತರದ ಹಾಯಿ ಇದೆ. ಸಾಮಾನ್ಯ ಗಾತ್ರದ ಲಾರಿಯಲ್ಲಿ ಒಂದೂಮುಕ್ಕಾಲು ಲೋಡು ಚಿಪ್ಪನ್ನು ಇದರಲ್ಲಿ ಸಂಗ್ರಹಿಸಲು ಸಾಧ್ಯವಿದೆ ಎಂದರು.
20 ವರ್ಷಗಳ ಹಿಂದೆ ಇಂತಹ 10 ದೋಣಿಗಳಿದ್ದವು. ಅವುಗಳು ಮರ, ಹಂಚು ಸಾಗಾಟಕ್ಕೂ ಬಳಕೆಯಾಗುತ್ತಿದ್ದವು. ಚಿಪ್ಪು ಉದ್ಯಮ ನಶಿಸುತ್ತಾ ಬಂದ ಕಾರಣ ನಿರ್ವಹಣೆಯಿಲ್ಲದೇ ಈ ದೋಣಿ ನದಿಯಲ್ಲೇ ಉಳಿದಿತ್ತು. ಆದರೆ ದೋಣಿ ಇನ್ನೂ 100 ವರ್ಷ ಉಳಿಯುವಷ್ಟು ಗಟ್ಟಿಯಾಗಿದೆ. ಮುಂಬಯಿಯಿಂದ ಮಂಗಳೂರು ವರೆಗೆ ಸಮುದ್ರಬದಿ ಇರುವ ಕೊಂಕಣಿ ಖಾರ್ವಿ ಸಮಾಜದ ಜನಜೀವನ ಮುಂದಿನ ಪೀಳಿಗೆಗೆ ತಿಳಿಯಲು ಧರ್ಮಸ್ಥಳದ ಮ್ಯೂಸಿಯಂನಲ್ಲಿ ಈ ದೋಣಿ ಮಾರ್ಗದರ್ಶಿಯಾಗಲಿದೆ ಎಂದರು.
ದೋಣಿ ಮಾಲಕ ವೆಂಕಟೇಶ ಖಾರ್ವಿ ಮಾತನಾಡಿ, ಪಂಚಗಂಗಾವಳಿ ನದಿಯ ನಡುವೆ ಬಬ್ಬುಕುದ್ರು ಪ್ರದೇಶದ ಆಸುಪಾಸಿನಲ್ಲಿ ಚಿಪ್ಪು ಕಾರ್ಮಿಕರು ಸಂಗ್ರಹಿಸುತ್ತಿದ್ದ ಚಿಪ್ಪು³ಗಳನ್ನು ಈ ದೋಣಿಯಲ್ಲಿ ದಡಕ್ಕೆ ಸಾಗಿಸಲಾಗುತ್ತಿತ್ತು. ಕಡಿಮೆಯೆಂದರೂ 6ರಿಂದ 8 ಜನ ಕಾರ್ಮಿಕರು ಇದರಲ್ಲಿ ಕೆಲಸ ಮಾಡುತ್ತಿದ್ದರು ಎಂದರು.
ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ದೋಣಿಯನ್ನು ಮಂಜೂಷಾಕ್ಕೆ ಸೇರಿಸಲು ಒಪ್ಪಿದ್ದಾರೆ. ದೋಣಿಗೆ ಬಣ್ಣ, ಎಣ್ಣೆ ಬಳಿದು ಒಪ್ಪ ಓರಣಗೊಳಿಸಿ ಹೊಸದಾದ ಹಾಯಿ ಅಳವಡಿಸಿ ಸಿದ್ಧಗೊಳಿಸಲಾಗಿದೆ ಎಂದು ವಿವರಿಸಿದರು.
ಜೂ. 9ರ ಮುಂಜಾನೆ 9 ಗಂಟೆಗೆ ಫೆರ್ರಿ ರಸ್ತೆ ಗಂಗೊಳ್ಳಿ ಕಳುವಿನಬಾಗಿಲು ಮೂಲಕ ಮೆರವಣಿಗೆ ಹೊರಡಲಿದೆ ಎಂದು ದಿನಕರ ಖಾರ್ವಿ ತಿಳಿಸಿದರು.
ಚಿಪ್ಪು ಕಾರ್ಮಿಕರ ಸಂಘದ ಸತೀಶ್ ಖಾರ್ವಿ, ಸುಭಾಷ್ ಖಾರ್ವಿ, ಸುನಿಲ್ ಖಾರ್ವಿ ಉಪಸ್ಥಿತರಿದ್ದರು.