ಬೆಳ್ತಂಗಡಿ : ಚತುರ್ದಾನ ಶ್ರೇಷ್ಠ ಪರಂಪರೆಯ ಶ್ರೀ ಕ್ಷೇತ್ರ ಧರ್ಮ ಸ್ಥಳದಕ್ಕೆ ಶಿವರಾತ್ರಿ ಹಿನ್ನೆಲೆಯಲ್ಲಿ ಪಾದ ಯಾತ್ರಿಗಳ ದಂಡು ಆಗಮಿಸುತ್ತಿದೆ.
ಈಗಾಗಲೇ ತಂಡೋಪತಂಡವಾಗಿ ಭಕ್ತರು ಕ್ಷೇತ್ರಕ್ಕೆ ತಲುಪಿದ್ದಾರೆ. ಸುಮಾರು 30,000 ಕ್ಕೂ ಅಧಿಕ ಮಂದಿ ಪಾದಯಾತ್ರಿಗಳು ಮಾ.1ರಂದು ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರುವರು. ಸುಮಾರು 30 ವರ್ಷಗಳಿಂದ ನಿರಂತರ ಪಾದಯಾತ್ರೆ ನಡೆಸುತ್ತಿರುವ ತಂಡಗಳು ಇರುವುದು ವಿಶೇಷವಾಗಿದೆ.
ಭಕ್ತರು ಬರುವ ಹಾದಿಯಲ್ಲಿ ಮುಂಡಾಜೆ ಯಲ್ಲಿ ಬೆಂಗಳೂರಿನ ಅಭಿಮಾನಿಗಳ 12 ಮಂದಿ ತಂಡವೊಂದು ಹಣ್ಣು, ಹಂಪಲು ನೀಡಿ ಸತ್ಕರಿಸುತ್ತಿದೆ. ಮುಂಡಾಜೆ ಗುಂಡಿ ದೇವಸ್ಥಾನದಿಂದ 15,000 ಮಂದಿ ಭಕ್ತರಿಗೆ ಅನ್ನದಾನ ಮಾಡಲಾಗಿದೆ. ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿಯಲ್ಲಿ 150 ಮಂದಿ ಸೇವಾಕರ್ತರು ಸತತ ಅನ್ನದಾನ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ.
ಮುಂಡಾಜೆ ಪರಶುರಾಮ ದೇವಸ್ಥಾನ, ಕಡಬ, ಮರ್ದಾಳ ಭಜನ ಮಂಡಳಿ, ಬಿಳಿನೆಲೆ, ನಿಡ್ಲೆ, ಉಳ್ಳಾಲ್ತಿ ಸೇವಾ ಸಮಿತಿ 5,000 ಮಂದಿಗೆ ತಂಗುವ ವ್ಯವಸ್ಥೆ ಕಲ್ಪಿಸಿದೆ. ಉಜಿರೆ ದೇವಸ್ಥಾನ, ಎಸ್.ಡಿ.ಎಂ. ಶಾಲೆಯಲ್ಲಿ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದು ಅಲ್ಲಿಂದ ಅವರು ಮಾ.1ರಂದು ಕ್ಷೇತ್ರವನ್ನು ಸಂದರ್ಶಿಸಲಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಯೋಜ ನೆಯ ಸ್ವಯಂಸೇವಕರು, ವಿಪತ್ತು ಸ್ವಯಂ ಸೇವಕರು, ಧರ್ಮಸ್ಥಳ ಭಜನ ಪರಿಷತ್ ಸೇರಿದಂತೆ ಕ್ಷೇತ್ರದ ಸುಮಾರು 2,000 ಮಂದಿ, ಆರೋಗ್ಯ ಕಾರ್ಯಕರ್ತರು, ಪೊಲೀಸ್, ಅರಣ್ಯ ಇಲಾಖೆ ಸಿಬಂದಿ ಭಕ್ತರ ಮೇಲ್ವಿಚಾರಣೆಯಲ್ಲಿ ಸಹಕಾರ ನೀಡುತ್ತಿದ್ದಾರೆ. ಗೋಣಿಬೀಡು, ಮೂಡಿಗೆರೆ, ನೀರಗಂಡಿಯಲ್ಲಿ ಸತತ 4 ದಿನಗಳಲ್ಲಿ ಒಂದು ಹೊತ್ತಿಗೆ 10,000 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ನೀರಗಂಡಿ ಸಮೀಪ 10,000 ಕ್ಕೂ ಮಿಕ್ಕಿ ಪಾದಯಾತ್ರಿಗಳ ಕಾಲಿಗೆ ಅರಶಿನ ಮಿಶ್ರಿತ ಬಿಸಿನೀರು ಹಾಗೂ ತೈಲ ಮಸಾಜ್ ವ್ಯವಸ್ಥೆಯನ್ನು ಮಾಡಲಾಯಿತು.
ಇದನ್ನೂ ಓದಿ : ನಿಂತಿಲ್ಲ ವಿದ್ಯಾರ್ಥಿಗಳ ಪದವಿ ಶಿಕ್ಷಣದ ಅಲೆದಾಟ : ಕಡಬಕ್ಕೆ ಬೇಕು ಸರಕಾರಿ ಪದವಿ ಕಾಲೇಜು
ಸ್ವತ್ಛತೆಗೆ ಒತ್ತು
ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಪರಿಸರದಲ್ಲಿ ಸ್ವತ್ಛತೆಗೆ ವಿಶೇಷ ಒತ್ತು ನೀಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಮಾ. 1ರಂದು ಸಂಜೆ 6 ಗಂಟೆಗೆ ದೀಪ ಬೆಳಗುವ ಮೂಲಕ ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡುವರು.