Advertisement

Kannada Actor; ಮೊದಲ ದೃಶ್ಯಗಳಲ್ಲೇ ಕಳ್ಳನ ಪಾತ್ರ…: ಧರ್ಮಣ್ಣ ಕಡೂರು

06:44 PM Oct 06, 2023 | Team Udayavani |

“ನಾನು ಮೂಲತಃ ರಂಗಭೂಮಿ ಕಲಾವಿದ. ರಾಜ್ಯಾದ್ಯಂತ ಮತ್ತು ವಿದೇಶಗಳಲ್ಲೂ ಸಾಕಷ್ಟು ನಾಟಕ ಪ್ರದರ್ಶನಗಳನ್ನು ನೀಡಿದ್ದೇನೆ. ಆದರೆ ಮೊದಲ ಬಾರಿಗೆ ನಟನಾಗಿ ಕ್ಯಾಮರಾ ಎದುರಿಸಿದ್ದು, “ಐ ಲವ್‌ ಯು’ ಎಂಬ ಶಾರ್ಟ್‌ ಫಿಲಂನಲ್ಲಿ. ಇದರಲ್ಲಿ ನನ್ನದು ಕಳ್ಳನ ಪಾತ್ರ. ಮೊದಲ ದೃಶ್ಯದಲ್ಲೇ ಧರ್ಮಗಿರಿ ದೇವಸ್ಥಾನದಲ್ಲಿ ನಾಯಕಿಯ ಪರ್ಸ್‌ ಕದ್ದುಕೊಂಡು ಓಡುವ ಸನ್ನಿವೇಶವಿತ್ತು. ದೂರದಲ್ಲಿ ಕ್ಯಾಮರವನ್ನಿಟ್ಟು ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ನಿರ್ದೇಶಕರು ಮೊದಲೇ ಹೇಳಿದಂತೆ, ನಾಯಕಿಯ ಪರ್ಸ್‌ ಕಸಿದುಕೊಂಡು ಓಡುವಷ್ಟರಲ್ಲಿ, ಅಲ್ಲಿದ್ದ ಒಂದಷ್ಟು ಜನ ನಿಜವಾಗಿಯೂ ನನ್ನನ್ನು ಕಳ್ಳ ಎಂದೇ ಭಾವಿಸಿ ಹಿಡಿದುಕೊಂಡರು. ಕೊನೆಗೆ ನಿರ್ದೇಶಕರು ಬಂದು ಎಲ್ಲವನ್ನೂ ವಿವರಿಸಿ, ಜನರ ಕೈಯಿಂದ ಬಿಡಿಸಿದರು. ಆ ಶಾರ್ಟ್‌ ಫಿಲಂ ಆ ನಂತರ “ಕ್ಯಾನ್‌ ಫಿಲಂ ಫೆಸ್ಟಿವಲ್‌’ನಲ್ಲೂ ಪ್ರದರ್ಶನವಾಗಿತ್ತು’ ಇದು ಮೊದಲ ಬಾರಿಗೆ ಕ್ಯಾಮರ ಎದುರಿಸಿದಾಗ ನಟ ಧರ್ಮಣ್ಣ ಕಡೂರು ಅವರಿಗಾಗಿದ್ದ ಅನುಭವ.

Advertisement

ಕನ್ನಡ ಚಿತ್ರರಂಗದಲ್ಲಿ ಸದ್ಯ ಬಹುಬೇಡಿಕೆಯ ಹಾಸ್ಯನಟನಾಗಿ ಗುರುತಿಸಿ ಕೊಂಡವರು ನಟ ಧರ್ಮಣ್ಣ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಅಪ್ಪಟರಂಗಭೂಮಿ ಪ್ರತಿಭೆ. ಸುಮಾರು ಎಂಟು ವರ್ಷಗಳ ಕಾಲ ಹಿರಿಯ ರಂಗಕರ್ಮಿ ಯಶವಂತ ಸರದೇಶಪಾಂಡೆ ಸೇರಿದಂತೆ ಅನೇಕ ದಿಗ್ಗಜರ ಜೊತೆ 30ಕ್ಕೂ ಹೆಚ್ಚು ನಾಟಕಗಳ ನೂರಾರು ರಂಗ ಪ್ರದರ್ಶನ ನೀಡಿ ಪಳಗಿದವರು ಧರ್ಮಣ್ಣ. ಆ ನಂತರ ರಂಗಭೂಮಿಯಿಂದ ಕಿರುತೆರೆಯತ್ತ ಮುಖ ಮಾಡಿದ ಧರ್ಮಣ್ಣ, “ಪಾಂಡುರಂಗ ವಿಠಲ’, “ಪಾರ್ವತಿ ಪರಮೇಶ್ವರ’ ಮೊದಲಾದ ಧಾರಾವಾಹಿಗಳು, ಬಳಿಕ “ಐ ಲವ್‌ ಯು’, ಡಾಲಿ ಧನಂಜಯ್‌ ಜೊತೆಗೆ “ಜಯನಗರ 4ನೇ ಬ್ಲಾಕ್‌’ ಸೇರಿದಂತೆ ಒಂದಷ್ಟು ಕಿರುಚಿತ್ರಗಳಲ್ಲೂ ಅಭಿನಯಿಸಿದ್ದರು. ಅದಾದ ನಂತರ 2016ರಲ್ಲಿ ತೆರೆಕಂಡ “ರಾಮಾ ರಾಮಾ ರೇ..’ ಸಿನಿಮಾದ ಮೂಲಕ ಮೊದಲ ಬಾರಿಗೆ ಧರ್ಮಣ್ಣ ಕಡೂರು ಚಿತ್ರರಂಗಕ್ಕೆ ಪರಿಚಯವಾದರು.

ತಮ್ಮ ಮೊದಲ ಸಿನಿಮಾ “ರಾಮಾ ರಾಮ ರೇ’ ಚಿತ್ರೀಕರಣ ನೆನಪಿಸಿಕೊಳ್ಳುವ ಧರ್ಮಣ್ಣ, “ಒಂದಷ್ಟು  ಸೀರಿಯಲ್‌, ಶಾರ್ಟ್ ಫಿಲಂಗಳಲ್ಲಿ ಅಭಿನಯಿಸಿದ್ದರೂ, ನನಗೆ “ರಾಮಾ ರಾಮಾ ರೇ..’ ಸಿನಿಮಾ ತುಂಬ ಚಾಲೆಂಜಿಂಗ್‌ ಆಗಿತ್ತು. ಸಿನಿಮಾದ ಶೂಟಿಂಗ್‌ನ ಮೊದಲನೇ ದಿನವೇ ಮಧ್ಯಾಹ್ನ ಎರಡು ಗಂಟೆಯಿಂದ ಆರು ಗಂಟೆಯವರೆಗೆ ಒಂದೇ ಒಂದು ಶಾಟ್‌ ಕೂಡ ಓ.ಕೆ ಆಗಿರಲಿಲ್ಲ. ತುಂಬ ದೊಡ್ಡ ಡೈಲಾಗ್ಸ್‌ ಇದ್ದವು. ನಮ್ಮ ತಂಡದ ಹಿರಿಯರಾದ ಜಯರಾಮಣ್ಣ ಸಿಟ್ಟಿನಿಂದ ನನಗೆ ಬಾರಿಸಿದ್ದೂ ಉಂಟು. ಕೊನೆಗೆ ಆ ದಿನ ಕಳೆದು ಮರುದಿನದಿಂದ ಎಲ್ಲವೂ ಸರಿಯಾಯಿತು. ಇಂದಿಗೂ ಆ ದಿನಗಳು ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ’ ಎನ್ನುತ್ತಾರೆ.

“ರಾಮಾ ರಾಮಾ ರೇ..’ ಸಿನಿಮಾದ ನಂತರ “ಮುಗುಳುನಗೆ’, “ಅಂಜನಿಪುತ್ರ’, “ರಾಬರ್ಟ್‌’, “ಕ್ರಾಂತಿ’, “ಲಂಬೋದರ’ ಹೀಗೆ ಇಲ್ಲಿಯವರೆಗೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಧರ್ಮಣ್ಣ ಕಡೂರು ಈಗ “ರಾಜಯೋಗ’ ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next