ಮಂಗಳೂರು: ಉಡುಪಿಯಲ್ಲಿ ನ. 24ರಿಂದ ನ. 26ರ ವರೆಗೆ ನಡೆಯಲಿರುವ ಧರ್ಮ ಸಂಸದ್ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಾಲಯ ಉದ್ಘಾಟನೆ ರವಿವಾರ ಮಲ್ಲಿಕಟ್ಟೆಯ ಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, 2017 ಹಿಂದೂ ಸಮಾಜಕ್ಕೆ ದಿಕ್ಕು ತೋರಿಸುವ ವರ್ಷ. ನಾವು ಸಂಘಟಿತರಾಗುವ ಸಂದರ್ಭ ಬಂದಿದೆ. ಈವರೆಗೆ ಮೂರು ಬಾರಿ ಧರ್ಮ ಸಂಸದ್ ನಡೆದಿವೆ. ಅವೆಲ್ಲ ಕ್ಕಿಂತಲೂ ಮಿಗಿಲಾಗಿ ಈ ಬಾರಿಯ ಕಾರ್ಯಕ್ರಮ ನಡೆಸಲಿದ್ದೇವೆ. 2 ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಈ ಬಾರಿಯ ಧರ್ಮ ಸಂಸದ್ ಮಹತ್ವದ ಪಾತ್ರ ವಹಿಸಲಿದೆ. ಅಯೋಧ್ಯೆಯಲ್ಲಿ ರಾಮಮಂದಿರದ ಶೇ. 80ರಷ್ಟು ಶಿಲ್ಪಕಲಾ ಕೆಲಸಗಳು ಈಗಾಗಲೇ ಪೂರ್ಣ ಗೊಂಡಿದ್ದು, ಧರ್ಮ ಸಂಸದ್ ನಡೆದ ಎರಡೇ ತಿಂಗಳಿನಲ್ಲಿ ಉಳಿದ ಶೇ. 20ರಷ್ಟು ಕೆಲಸಗಳು ಪೂರ್ಣಗೊಂಡು 2018ರ ಪ್ರಾರಂಭ ದಲ್ಲಿ ರಾಮಮಂದಿರ ನಿರ್ಮಾಣ ಪೂರ್ಣ ವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರೆಸ್ಸೆಸ್ ದಕ್ಷಿಣ ಪ್ರಾಂತ ಸಹ ಸಂಘಚಾಲಕ್ ಡಾ| ವಾಮನ ಶೆಣೈ ಮಾತನಾಡಿ, 3,000ಕ್ಕೂ ಹೆಚ್ಚಿನ ಪೀಠಾಧಿಪತಿಗಳು ಉಡುಪಿಗೆ ಆಗಮಿಸ ಲಿದ್ದಾರೆ. ಇದೊಂದು ಹಿಂದೂ ಸಮಾಜದ ಶಕ್ತಿ ಯನ್ನು ಸಾರಿ ಹೇಳುವ ಕಾರ್ಯ ಕ್ರಮವಾಗಲಿದೆ. ಹಿಂದೂ ಸಮಾಜಕ್ಕೆ ಶಕ್ತಿ ಕೊಡಬಲ್ಲ ಮಾರ್ಗದರ್ಶನ ಅಲ್ಲಿ ದೊರಕಲಿದೆ ಎಂದರು.
ವೇದಿಕೆಯಲ್ಲಿ ಬಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಆರೆಸ್ಸೆಸ್ ಮಹಾನಗರ ಸಹ ಸಂಚಾಲಕ್ ಸುನಿಲ್ ಆಚಾರ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಮನೋಹರ್, ಸ್ವಾಗತ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ, ವಿಶ್ವ ಹಿಂದೂ ಪರಿಷತ್‌ನ ವಾಸುದೇವ ಶೆಣೈ, ಗೋಪಾಲ್ ಕುತ್ತಾರ್ ಉಪಸ್ಥಿತರಿದ್ದರು.
ನ. 24ರಿಂದ ಧರ್ಮ ಸಂಸದ್
ಉಡುಪಿಯ ಶ್ರೀಕೃಷ್ಣ ಮಠದ ಆವರಣದಲ್ಲಿ ನ. 24ರಿಂದ 26ರ ವರೆಗೆ ಧರ್ಮ ಸಂಸದ್ ನಡೆಯಲಿದೆ. ಗೌರವಾಧ್ಯಕ್ಷರಾಗಿ ಪರ್ಯಾಯ ಪೀಠಾಧ್ಯಕ್ಷ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿದ್ದು, ಕಾರ್ಯಾಧ್ಯಕ್ಷರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಇದ್ದಾರೆ. ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಯೋಗಗುರು ಬಾಬಾ ರಾಮ್‌ದೇವ್, ರವಿಶಂಕರ ಗುರೂಜಿ, ಮಾತಾ ಅಮೃತಾನಂದಮಯಿ, ಶ್ರೀ ಆದಿಚುಂಚನಗಿರಿ ಮಠಾಧೀಶರು ಸೇರಿದಂತೆ ಗಣ್ಯರು ಭಾವಹಿಸಲಿದ್ದಾರೆ.