ನಟ ಧರ್ಮ ಕೀರ್ತಿರಾಜ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾ “ಅಮರಾವತಿ ಪೊಲೀಸ್ ಸ್ಟೇಷನ್’ ಇತ್ತೀಚೆಗೆ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿದೆ. ಸಿನಿಮಾದ ಮೊದಲ ದೃಶ್ಯಕ್ಕೆ ಡಾ ವಿ.ನಾಗೇಂದ್ರ ಪ್ರಸಾದ್ ಕ್ಲಾಪ್‌ಮಾಡಿದರೆ, ನಿರ್ಮಾಪಕರಾದ ಅಂಜನ ರೆಡ್ಡಿ ಹಾಗೂ ಗೀತಾ ಅಂಜನ ರೆಡ್ಡಿ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಈ ಹಿಂದೆ “ಡಬಲ್ ಬೋರ್ಡ್’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದ ಪುನೀತ್ ಅರಸೀಕೆರೆ ಸಸ್ಪೆನ್ಸ್ -ಥ್ರಿಲ್ಲರ್ ಕಥಾಹಂದರ ಹೊಂದಿರುವ “ಅಮರಾವತಿ ಪೊಲೀಸ್ ಸ್ಟೇಷನ್’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡುವಾಗ ದಲ್ಲಾಳಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಊರಿನ ಗೌಡ ಪರಿಹಾರ ಹುಡುಕುತ್ತಾನೆ. ಬಳಿಕ ಇದ್ದಕ್ಕಿದ್ದಂತೆ ಆತ ನಾಪತ್ತೆಯಾಗುತ್ತಾನೆ. ಆತನನ್ನು ಪತ್ತೆ ಹಚ್ಚಲು ಬಂದ ಪೋಲೀಸ್ ಅಧಿಕಾರಿ ಕೂಡ ನಿಗೂಢವಾಗಿ ಕಣ್ಮರೆಯಾಗುತ್ತಾನೆ. ಇದಕ್ಕೆಲ್ಲ ಪರಿಹಾರ ಕಂಡು ಹಿಡಿಯಲು ಸ್ನೇಹಿತನನ್ನು ಹುಡುಕಿಕೊಂಡು ಹಳ್ಳಿಗೆ ಬರುವ ನಾಯಕ ಹೇಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತಾನೆ ಎಂಬುದೇ ಈ ಸಿನಿಮಾದ ಕಥಾಹಂದರ ಎಂಬುದು ಚಿತ್ರತಂಡ ನೀಡುವ ವಿವರಣೆ.
“ಅಮರಾವತಿ ಪೊಲೀಸ್ ಸ್ಟೇಷನ್’ ಸಿನಿಮಾದಲ್ಲಿ ನಾಯಕ ಧರ್ಮ ಕೀರ್ತಿರಾಜ್ ಅವರಿಗೆ ವೇದ್ವಿಕಾ ನಾಯಕಿಯಾಗಿದ್ದಾರೆ. ಉಳಿದಂತೆ ಹಿರಿಯ ನಟಿ ಭವ್ಯ, ಉಮಾಶ್ರೀ, ಸಾಧುಕೋಕಿಲ, ಚಿಕ್ಕಣ್ಣ, ನಾಗೇಂದ್ರ ಪ್ರಸಾದ್, ಧರ್ಮಣ್ಣ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇದೇ ಅ. 9ರಿಂದ ಅರಸೀಕೆರೆ ಪೋಲಿಸ್ ಸ್ಟೇಷನ್, ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಹಂತರ ಶೂಟಿಂಗ್ ನಡೆಯಲಿದ್ದು, ಬಳಿಕ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಒಟ್ಟು 45 ರಿಂದ 50 ದಿನಗಳ ಕಾಲ ಶೂಟಿಂಗ್ ನಡೆಸುವ ಪ್ಲಾನ್ ಹಾಕಿಕೊಂಡಿರುವ “ಅಮರಾವತಿ ಪೊಲೀಸ್ ಸ್ಟೇಷನ್’ ಸಿನಿಮಾಕ್ಕೆ ವಿ. ರಮೇಶ್ ಬಾಬು ಛಾಯಾಗ್ರಹಣ, ಕೆ. ಎಂ. ಪ್ರಕಾಶ್ ಸಂಕಲನವಿದೆ. ಚಿತ್ರದ 4 ಹಾಡುಗಳಿದೆ ರೋಣದ ಬಕ್ಕೇಶ್ ಸಂಗೀತವಿದ್ದು, ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. “ಎಸ್.ಎ.ಆರ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.