ಕನ್ನಡದ ಅನೇಕ ಚಿತ್ರಗಳಲ್ಲಿ ಈಗಾಗಲೇ ಅಣ್ಣ-ತಮ್ಮ, ಅಪ್ಪ-ಮಗ, ಅಕ್ಕ-ತಂಗಿ ಹೀಗೆ ಒಂದೇ ಕುಟುಂಬದವರು ಒಂದಿಲ್ಲೊಂದು ಪಾತ್ರಗಳ ಮೂಲಕ ಕಾಂಬಿನೇಷನ್‌ನಲ್ಲಿ ನಟಿಸಿರುವುದು ಗೊತ್ತೇ ಇದೆ. ಆ ಸಾಲಿಗೆ ಈಗ ಧರ್ಮ ಮತ್ತು ಕೀರ್ತಿರಾಜ್ ಕೂಡ ಸೇರಿದ್ದಾರೆ. ಹೌದು. ಧರ್ಮ ಕೀರ್ತಿರಾಜ್ ಅವರ ತಂದೆ ಕೀರ್ತಿರಾಜ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು “ವಿವಿಕ್ತ’ ಎಂಬ ಚಿತ್ರದಲ್ಲಿ ಅಪ್ಪ, ಮಗ ಜೊತೆಯಾಗಿ ನಟಿಸಿದ್ದಾರೆ.
“ವಿವಿಕ್ತ’ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಹೀರೋ. ಅವರೊಂದಿಗೆ ಪ್ರತಾಪ್ ನಾರಾಯಣ್ ಕೂಡ ನಟಿಸಿದ್ದಾರೆ. ಈ ಚಿತ್ರದಲ್ಲಿ ಕೀರ್ತಿರಾಜ್ ಅವರಿಗೆ ಪೊಲೀಸ್ ಅಧಿಕಾರಿ ಪಾತ್ರ ಸಿಕ್ಕಿದೆ. ತಮ್ಮ ಮಗನ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದನ್ನು ಪ್ರೀತಿಯಿಂದಲೇ ಒಪ್ಪಿಕೊಂಡ ಕೀರ್ತಿರಾಜ್, ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಚಿತ್ರದಲ್ಲಿ ಕೀರ್ತಿರಾಜ್ ಪೊಲೀಸ್ ಅಧಿಕಾರಿಯಾಗಿದ್ದರೆ, ಧರ್ಮ ಕೀರ್ತಿರಾಜ್ ಪಾತ್ರ ಏನು?
ಇದಕ್ಕೆ ಉತ್ತರ “ವಿವಿಕ್ತ’ ಬಿಡುಗಡೆವರೆಗೂ ಕಾಯಬೇಕು ಎಂಬುದು ಧರ್ಮ ಕೀರ್ತಿರಾಜ್ ಮಾತು. ಅಂದಹಾಗೆ, “ವಿವಿಕ್ತ’ ಚಿತ್ರಕ್ಕೆ ವಿಘ್ನೇಶ್ ನಿರ್ದೇಶಕರು. ಇದು ಇವರ ಮೊದಲ ಸಿನಿಮಾ. ಈ ಹಿಂದೆ ವಿಘ್ನೇಶ್ “ಜಿಗರ್‌ಥಂಡ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈಗ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಪೂಜಶ್ರೀ ಸಾನಿಕ ನಾಯಕಿಯಾಗಿ ನಟಿಸಿದ್ದಾರೆ.
ಇನ್ನು, ಭಾಸ್ಕರ್ ಮತ್ತು ರಾಕೇಶ್ ಚಿತ್ರವನ್ನು ನಿರ್ಮಿಸಿದ್ದಾರೆ. “ವಿವಿಕ್ತ’ ಒಂದು ಯುವಕರ ಕುರಿತಾದ ಚಿತ್ರ. ಥ್ರಿಲ್ಲರ್ ಹಾಗೂ ಹಾರರ್ ಅಂಶಗಳು ಚಿತ್ರದಲ್ಲಿರಲಿವೆ. ಕೇರಳ ಮೂಲದ ಛಾಯಾಗ್ರಾಹಕ ಬಿಪಿನ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಇನ್ನು, ಧರ್ಮಕೀರ್ತಿರಾಜ್ ಅವರು ಸದ್ದಿಲ್ಲದೆಯೇ ಇನ್ನೂ ಎರಡು ಚಿತ್ರಗಳನ್ನು ಮುಗಿಸಿದ್ದು, ಆ ಚಿತ್ರಗಳು ಈಗ ಬಿಡುಗಡೆ ತಯಾರಿಯಲ್ಲಿವೆ.
“ಚಾಣಾಕ್ಷ’ ಚಿತ್ರದ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿರುವ ಧರ್ಮ, ಈ ಚಿತ್ರ ನನಗೊಂದು ಹೊಸ ಇಮೇಜ್ ತಂದುಕೊಡುತ್ತೆ ಎನ್ನುತ್ತಾರೆ. ಸದ್ಯಕ್ಕೆ “ಚಾಣಾಕ್ಷ’ ಡಿಐ ಮತ್ತು ಹಿನ್ನೆಲೆ ಸಂಗೀತದ ಕೆಲಸದಲ್ಲಿ ನಿರತವಾಗಿದೆ. ಬಿಡುಗಡೆ ಮುನ್ನವೇ ಹಿಂದಿ ಡಬ್ಬಿಂಗ್ ಹಕ್ಕು ಮಾರಾಟವಾಗಿರುವ ಖುಷಿಯಲ್ಲಿರುವ ಧರ್ಮ, “ಜಾಸ್ತಿ ಪ್ರೀತಿ’ ಎಂಬ ಇನ್ನೊಂದು ಚಿತ್ರದಲ್ಲೂ ನಟಿಸಿದ್ದಾರೆ. ಆ ಚಿತ್ರ ಕೂಡ ಬಹುತೇಕ ಪೂರ್ಣಗೊಂಡಿದೆ. ಈ ಚಿತ್ರದಲ್ಲಿ ಕೃಷಿ ತಪಂಡ ನಾಯಕಿಯಾಗಿದ್ದಾರೆ.
ಅರುಣ್ ನಿರ್ದೇಶಕರು. ಉಳಿದಂತೆ “ಬಿಂದಾಸ್ ಗೂಗ್ಲಿ’ ಚಿತ್ರದಲ್ಲಿ ಕೋಚ್ ಪಾತ್ರ ನಿರ್ವಹಿಸಿದ್ದಾರೆ. ಸಂತೋಷ್ ಈ ಚಿತ್ರ ನಿರ್ದೇಶಿಸಿದ್ದು, ವಿಜಯಕುಮಾರ್ ಅವರ ನಿರ್ಮಾಣವಿದೆ. ಸದ್ಯಕ್ಕೆ ಎರಡು ಹೊಸ ಚಿತ್ರಗಳ ಮಾತುಕತೆ ನಡೆಸಿರುವ ಧರ್ಮ, ಇನ್ನೂ ಯಾವ ಚಿತ್ರವನ್ನೂ ಅಂತಿಮಗೊಳಿಸಿಲ್ಲ. ಈ ನಡುವೆ ತೆಲುಗು ಸಿನಿಮಾವೊಂದನ್ನು ರಿಮೇಕ್ ಮಾಡುವ ಕುರಿತು ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ಆ ಚಿತ್ರದಲ್ಲೂ ಧರ್ಮ ನಟಿಸುವ ಸಾಧ್ಯತೆ ಇದೆ.